ಬೆಂಗಳೂರು/ಮಂಡ್ಯ: ಸಿಎಂ ಸಿದ್ದರಾಮಯ್ಯ ಅವರ ಹಲವು ಭಾಗ್ಯ ಯೋಜನೆಗಳಂತೆ ರೈತರ ಸಾಲಮನ್ನಾ ಯೋಜನೆಯೂ ಜನಪ್ರಿಯ ಭಾಗ್ಯ ಯೋಜನೆಯಾಗಿದೆಯಷ್ಟೇ. ಹಣವನ್ನೇ ನೀಡದೆ ಸಾಲಮನ್ನಾ ಎನ್ನುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.

ಮಂಡ್ಯ ಜಿಲ್ಲೆ ನಾಗಮಂಗಲದ ಕುಮಾರಪರ್ವ ಸಮಾವೇಶದಲ್ಲಿ ವಿಜಯವಾಣಿ ವರದಿ ಪ್ರಸ್ತಾಪಿಸಿ ಭಾಷಣ ಮಾಡಿದರು. ಸಾಲಮನ್ನಾ ಹಣವನ್ನು ರಾಜ್ಯ ಸರ್ಕಾರ ಇನ್ನೂ ಬಿಡುಗಡೆ ಮಾಡದಿರುವುದರಿಂದ ಬ್ಯಾಂಕ್​ಗಳಲ್ಲಿ ಸಕಾಲದಲ್ಲಿ ಸಾಲ ಪಡೆಯಲಾಗದೆ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಹರಿಹಾಯ್ದರು.

ನಾನು ಸಿಎಂ ಆಗಿದ್ದಾಗಲೂ ಸಾಲಮನ್ನಾ ಮಾಡಿದ್ದೆ. ಆದರೆ ಅದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸಿದ್ದರಾಮಯ್ಯ ಯಾವುದೇ ಪೂರ್ವಪರ ಸಿದ್ಧತೆ ಮಾಡಿಕೊಳ್ಳದೆ, ಸಾಲಮನ್ನಾ ಯೋಜನೆ ಪ್ರಕಟಿಸಿರುವುದು ಸಮಸ್ಯೆಗೆ ಕಾರಣ ಎಂದರು.

ಚಿಕ್ಕಮಗಳೂರು ಜಿಲ್ಲೆ ಡಿಸಿಸಿ ಬ್ಯಾಂಕ್​ಗೆ 173 ಕೋಟಿ ರೂ. ಬಾಕಿ ಇದ್ದರೂ ಸರ್ಕಾರ ಈ ತನಕ ಐದೂವರೆ ಕೋಟಿ ರೂ. ಬಿಡುಗಡೆ ಮಾಡಿದೆ. ಇಷ್ಟು ಹಣದಲ್ಲಿ ಹೇಗೆ ಬ್ಯಾಂಕ್ ನಡೆಸಲು ಸಾಧ್ಯ, ರೈತರಿಗೆ ಸಾಲ ನೀಡಲು ಸಾಧ್ಯ, ಎಂದು ಪ್ರಶ್ನಿಸಿದರು.

ಸರ್ಕಾರದಿಂದ ಹಣ ಬಾರದಿದ್ದ ಕಾರಣ, ಕೆಲ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕ್​ಗಳು ಬೇರೆ ಮೂಲಗಳಿಂದ ಹಣ ವರ್ಗಾಯಿಸಿಕೊಂಡು ರೈತರಿಗೆ ಸಾಲ ನೀಡಿವೆ. ಇದೇ ರೀತಿ ಎಲ್ಲ ಡಿಸಿಸಿ ಬ್ಯಾಂಕ್​ಗಳು ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಗಮನಹರಿಸಿ ಹಣ ಬಿಡುಗಡೆ ಮಾಡಬೇಕಿತ್ತು ಎಂದರು.ಸಾಲಮನ್ನಾ ಮಾಡಿದ್ದ 8165 ಕೋಟಿ ರೂ.ಗಳಲ್ಲಿ ಕೇವಲ 2878 ಕೋಟಿ ರೂ. ನೀಡಿದರೆ ಉಳಿಕೆ ಹಣ ಕೊಡುವವರು ಯಾರು? ಸಾಲಮನ್ನಾ ಮಾಡಿದ್ದೇನೆ ಎಂದು ಪ್ರಚಾರ ಗಿಟ್ಟಿಸಿಕೊಂಡು, ಮುಂದೆ ಬರಲಿರುವ ಸರ್ಕಾರಕ್ಕೆ 5287 ಕೋಟಿ ರೂ. ಹೊರೆ ಹೊರಿಸಿ ಹೋಗುವುದು ಯಾವ ನೈತಿಕತೆ? ಎಂದರು.

ನೀರಾವರಿಗೂ 58 ಸಾವಿರ ಕೋಟಿ ರೂ. ಕೊಟ್ಟಿದ್ದೇವೆ ಎನ್ನುತ್ತಾರೆ. ಆದರೆ ವಾಸ್ತವ ಬೇರೆಯೇ ಇದೆ. ಎಲ್ಲ ಕಡೆಯಲ್ಲೂ ಮನಸೋಇಚ್ಛೆ ಘೋಷಣೆ ಮಾಡಿಕೊಂಡು ಪ್ರಚಾರ ಪಡೆದಿದ್ದಾರೆಯೇ ಹೊರತು, ಯಾವುದಕ್ಕೂ ಸರಿಯಾಗಿ ಹಣಕಾಸಿನ ನೆರವು ಒದಗಿಸಿಲ್ಲ. ಹಾಗಾಗಿ ಮುಂದೆ ಬರುವ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಂಡು ಆಡಳಿತ ನಡೆಸಬೇಕಾದ ಸ್ಥಿತಿ ನಿರ್ವಣವಾಗಿದೆ ಎಂದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಿದ್ದರಾಮಯ್ಯಗೆ ಸರ್ಟಿಫಿಕೇಟ್ ಕೊಡದೆ ಬೇರೆ ಇನ್ಯಾರಿಗೆ ಕೊಡಲು ಸಾಧ್ಯ? ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಾತ್ರ ಸಂಪೂರ್ಣ ಸಾಲಮನ್ನಾ ಸಾಧ್ಯ. ರೈತರು ಸಾಲಗಾರರಾಗದಂತೆ ಹೊಸ ಕೃಷಿ ನೀತಿ ಜಾರಿಗೆ ತರುತ್ತೇನೆ. ಇಸ್ರೇಲ್ ಕೃಷಿ ತಜ್ಞರನ್ನ ಕರೆಸಿ ರೈತರ ಅಭಿವೃದ್ಧಿಗೆ ಚಿಂತನೆ ಮಾಡಿದ್ದೇನೆ ಎಂದರು.