ಭಟ್ಕಳ: ರೈತರ ಹಿತ ಮರೆತಿರುವ ಬಿಜೆಪಿ, ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಇಲ್ಲಿನ ಅಂಜುಮನ್ ಮೈದಾನದಲ್ಲಿ ಶನಿವಾರ ನಡೆದ ಕುಮಾರ ಪರ್ವ ಕಾರ್ಯಕ್ರಮದಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

‘ರಾಜ್ಯದಲ್ಲಿ 78 ಲಕ್ಷ ರೈತರು 58 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದ್ದು, ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಅವರನ್ನು ಸಂತೈಸಿ ಸಂರಕ್ಷಿಸಬೇಕಾದ ಸರ್ಕಾರ ತನ್ನ ಜವಾಬ್ದಾರಿ ಮರೆತಿದೆ. ಭಟ್ಕಳ ತಾಲೂಕಿನಲ್ಲಿ ಅತಿಕ್ರಮಣದಾರರು 10 ಸಾವಿರ ಅರ್ಜಿ ಸಲ್ಲಿಸಿದ್ದಾರೆ. 8 ಸಾವಿರ ತಿರಸ್ಕೃತಗೊಂಡಿದ್ದರೆ 2 ಸಾವಿರ ಪೆಂಡಿಂಗ್ ಇದೆ. ಸಮಸ್ಯೆಗಳ ಕುರಿತು ಹೋರಾಟ ನಡೆಸಬೇಕಾದ ನಾಯಕರು ಸಾಮರಸ್ಯ ಕದಡುವ ಕಾರ್ಯ ಮಾಡುತ್ತಿದ್ದಾರೆ. ಜನರ ಭಾವನೆ ಕೆರಳಿಸಿ ಸಂಘರ್ಷ ಹುಟ್ಟುಹಾಕಿ ಬೆಳೆ ಬೇಯಿಸಿಕೊಳ್ಳುತ್ತಾರೆ. ಆದರೆ, ನಾನು ಜಾತಿ ರಾಜಕಾರಣ ಮಾಡಲ್ಲ’ ಎಂದು ಹೇಳಿದರು.

ಮುಖಂಡ ಇನಾಯಿತುಲ್ಲಾ ಶಾಬಂದ್ರಿ ಮಾತನಾಡಿ, ‘ಸಮಾಜದಲ್ಲಿ ಎಸ್.ಎಂ. ಯಾಹ್ಯ ಬಳಿಕ ನನಗೆ ಅವಕಾಶ ಬಂದಿದೆ. ಬಿಜೆಪಿ ಗೆಲ್ಲುತ್ತದೆ ಎಂಬ ಹಗಲು ಕನಸಿನಿಂದ, ನನಗೆ ಅವಕಾಶ ನಿರಾಕರಿಸಬೇಡಿ’ ಎಂದು ವಿನಂತಿಸಿದರು.

ಕಾಂಗ್ರೆಸ್ ಧುರೀಣ ಶಂಭು ಗೌಡ ಸೇರಿದಂತೆ ಇತರರು ಜೆಡಿಎಸ್ ಸೇರಿದರು. ಸೊರಬ ಶಾಸಕ ಮಧು ಬಂಗಾರಪ್ಪ, ಎಂ.ಡಿ. ನಾಯ್ಕ, ಮರಿ ತಿಪ್ಪಗೌಡ, ಗಣಪಯ್ಯ ಗೌಡ, ಫಾರುಖ್, ಪ್ರದೀಪ ನಾಯ್ಕ, ಬಿ.ಆರ್. ನಾಯ್ಕ ಉಡುಪಿ, ಪದಾಧಿಕಾರಿಗಳು ಇತರರು ಇದ್ದರು.

ಧರ್ಮ ವೈಷಮ್ಯ: 20 ವರ್ಷದಿಂದ ಜಿಲ್ಲೆ ಸಂಸದರಾಗಿರುವ ಅನಂತ ಕುಮಾರ ಅವರ ಬಳಿ ಹೇಳಿಕೊಳ್ಳಲು ಒಂದೇ ಒಂದು ಸಾಧನೆ ಇಲ್ಲ. ಅವರದೇ ಸರ್ಕಾರ ಕೇಂದ್ರದಲ್ಲಿದೆ. ಆದರೆ, ಅವರು ಉದ್ಯೋಗ ಸೃಷ್ಟಿ, ಅತಿಕ್ರಮಣದಂತಹ ಸಮಸ್ಯೆಗೆ ಪರಿಹಾರ ಒದಗಿಸುವುದು ಬಿಟ್ಟು, ಧರ್ಮ-ಧರ್ಮದ ನಡುವೆ ವೈಷಮ್ಯ ಸೃಷ್ಟಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದರು.

ಶಾಬಂದ್ರಿ ಬೆಂಬಲಿಸಿ: ಕಳೆದ ಬಾರಿ ಚುನಾವಣೆಯಲ್ಲಿ ಸ್ವಲ್ಪ ಎಡವಿದ ಕಾರಣ ಭಟ್ಕಳದಲ್ಲಿ ಪಕ್ಷ ಸೋತಿದ್ದು, ಈ ಬಾರಿ ತಂಜಿಂ ಇನಾಯಿತುಲ್ಲಾ ಶಾಬಂದ್ರಿ ಅವರಿಗೆ ಸಂಪೂರ್ಣ ಬೆಂಬಲ ನೀಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಂಜಿಂ ಪದಾಧಿಕಾರಿಗಳಲ್ಲಿ ವಿನಂತಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ತಂಜಿಂ ಪದಾಧಿಕಾರಿಯೋರ್ವರು, ‘ಕಳೆದ ಬಾರಿ ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವು. ಆದರೆ ಪಕ್ಷದಿಂದ ನಂಬಿಕೆ ದ್ರೋಹವಾಗಿದೆ. ಕಳೆದ ಚುನಾವಣೆಯ ಪ್ರಚಾರಕ್ಕೆ ಕುಮಟಾವರೆಗೆ ಬಂದರೂ ಭಟ್ಕಳಕ್ಕೆ ಬಂದಿಲ್ಲ. ನಿಮ್ಮನ್ನು ನಂಬುವುದು ಹೇಗೆ’ ಎಂದು ಪ್ರಶ್ನಿಸಿದರು. ಉತ್ತರಿಸಿದ ಕುಮಾರ ಸ್ವಾಮಿ, ‘ನಮ್ಮಿಂದಲೂ, ನಿಮ್ಮಿಂದಲೂ ತಪ್ಪಾಗಿದೆ. ಈ ಬಾರಿ ಹಾಗಾಗಲು ನಾನು ಬಿಡುವುದಿಲ್ಲ’ ಎಂದರು.

ಮೂಡದ ಒಮ್ಮತ: ಇನಾಯಿತುಲ್ಲಾ ಶಾಬಂದ್ರಿ ಜೆಡಿಎಸ್​ನಿಂದ ಸ್ಪರ್ಧಿಸುವ ಕುರಿತು ತಂಜಿಂ ಪದಾಧಿಕಾರಿಗಳಲ್ಲಿ ಒಮ್ಮತ ಮೂಡಿಲಿಲ್ಲ. ಬಹುತೇಕರು ಇನಾಯಿತುಲ್ಲಾ ಸ್ಪರ್ಧಿಸುವುದು ಬೇಡವೆ ಬೇಡ. ನಾವು ಅವರಿಗೆ ಬೆಂಬಲಿಸುವುದಿಲ್ಲ ಎಂದರು. ಮಾಜಿ ಸಿಎಂ ಕುಮಾರಸ್ವಾಮಿ ಎದುರೇ ವಾಗ್ವಾದ ನಡೆದರೂ ಒಮ್ಮತದ ನಿರ್ಧಾರ ಮೂಡಿಲ್ಲ. ಕಳೆದ ಬಾರಿ ತಂಜಿಂನಿಂದ ಸಂಪೂರ್ಣ ಬೆಂಬಲ ಪಡೆದ, ಇನಾಯಿತುಲ್ಲಾ ಈ ಬಾರಿ ಕೊಂಚ ಅತಂತ್ರರಾಗಿದ್ದಾರೆ.

 

source=vijayavani

By R

You missed