ಮತದಾರರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಲಹೆ

ನಂಜನಗೂಡು: ಚುನಾವಣೆ ವೇಳೆ ವರುಣ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತ ಕೆಂಪಯ್ಯ ಪಾಪದ ಹಣ ಹಂಚಿಕೆ ಮಾಡಲು ಬರುತ್ತಾರೆ. ಮತದಾರರು ಜಾಗೃತಿಯಿಂದ ಇರಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದರು.

ತಾಲೂಕಿನ ಎಸ್.ಹೊಸಕೋಟೆ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಕಾಸ ಪರ್ವ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಕೆಂಪಯ್ಯ ಪೊಲೀಸ್ ವಾಹನದಲ್ಲೇ ಹಣ ಸಾಗಿಸಿದ್ದರು. ಆ ಪಾಪದ ಹಣವನ್ನು ಈ ಬಾರಿಯೂ ವರುಣ ಕ್ಷೇತ್ರಕ್ಕೆ ತಂದು ಹಂಚುವ ಅಪಾಯವಿದೆ. ಆ ಹಣಕ್ಕೆ ಮತದಾರರು ಕೈಯೊಡ್ಡದಂತೆ ಕರೆ ನೀಡಿದರು.

ರೈತರ ಜಮೀನನ್ನು ಕೊಳ್ಳೆ ಹೊಡೆದು 1300 ಕೋಟಿ ರೂ. ಗುಳುಂ ಮಾಡಿದ್ದ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಅವ್ಯವಹಾರ ಕುರಿತು ಸಿದ್ದರಾಮಯ್ಯ ಸಂಪುಟ ಸಚಿವರೊಬ್ಬರು ವರದಿ ಕೊಟ್ಟಿದ್ದರು. ಆದಾಗ್ಯೂ ಖೇಣಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಕೊಳ್ಳೆ ಹೊಡೆದಿದ್ದ 1300 ಕೋಟಿ ರೂ.ಅನ್ನು ಸರ್ಕಾರದ ಖಜಾನೆಗೆ ಸೇರಿಸುವ ಬದಲಾಗಿ ಆಲಿಬಾಬಾ ಮತ್ತು 40 ಮಂದಿ ತಂಡದ ಖಜಾನೆಗೆ ಜಮಾ ಆಗಿರುವುದು ಸಾಬೀತಾಗಿದೆ ಆರೋಪಿಸಿದರು.

ರಾಜ್ಯ ಸರ್ಕಾರ 1.35 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಆ ಹಣವನ್ನು ಮುಂದಿನ ಚುನಾವಣೆಯಲ್ಲಿ ವಿನಿಯೋಗಿಸಲು ಸಿದ್ದರಾಮಯ್ಯ ಸಂಚು ರೂಪಿಸಿದ್ದಾರೆ. ಕಳೆದ ವರ್ಷ ಚುನಾವಣೆ ಎದುರಿಸಲು ಸಿದ್ದರಾಮಯ್ಯಗೆ ಕುರುಬರು ಕುರಿ ಮಾರಿ ಹಣ ಕೊಟ್ಟಿದ್ದರು. ಈಗ ಅವರು ಸಮೃದ್ಧವಾಗಿದ್ದಾರೆ. ಕುರಿ ಮಾರಿ ಹಣ ಕೊಡುವ ಅಗತ್ಯವಿಲ್ಲ ಎಂದು ಲೇವಡಿ ಮಾಡಿದರು.

ಭಯ ಬಿಡಿ: ಜೆಡಿಎಸ್ ಬಗ್ಗೆ ಕ್ಷೇತ್ರದ ಮತದಾರರಿಗೆ ಒಲವಿದ್ದರೂ ಸಮಾವೇಶಕ್ಕೆ ಆಗಮಿಸಲು ಭಯಪಡುತ್ತಿದ್ದಾರೆ. ಹಣದ ಆಮಿಷಯೊಡ್ಡಿ ಸಮಾವೇಶಕ್ಕೆ ಹೋಗದಂತೆ ಪ್ರತಿಪಕ್ಷಗಳು ಹುನ್ನಾರ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎಲ್ಲರೂ ಜಾತಿ ಭೇದ ಬಿಟ್ಟು ಹೊರಬರಬೇಕು. ಕಳೆದ ಚುನಾವಣೆಯ ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ನಾಪತ್ತೆಯಾಗಿದ್ದರು. ಅದಕ್ಕೆ ಕಾರಣ ಬೇರೆಯದ್ದೇ ಇದೆ. ಈ ಬಾರಿ ಸಿದ್ದರಾಮಯ್ಯ ಜತೆ ರಾಜಿಯಾಗುವ ಪ್ರಶ್ನೆಯೇ ಇಲ್ಲ. ವಿದೇಶದಲ್ಲಿ ನೆಲೆಸಿದ್ದ ವರುಣಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಭಿಷೇಕ್ ಜನಸೇವೆ ದೃಷ್ಟಿಯಿಂದ ಕಣಕ್ಕಿಳಿದಿದ್ದಾರೆ. ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸಲು ಇನ್ನೂ ಮೂರ‌್ನಾಲ್ಕು ಬಾರಿ ಕ್ಷೇತ್ರಕ್ಕೆ ಭೇಟಿ ಕೊಡಲಿದ್ದೇನೆ ಎಂದು ಹೇಳಿದರು.

ಭ್ರಷ್ಟಚಾರದಲ್ಲಿ ನಿಸ್ಸೀಮರು: ತಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಆರೋಪವನ್ನು ದಾಖಲೆ ಸಮೇತ ಸಾಬೀತುಮಾಡಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ತಲಕಾಡು ಸೇರಿದಂತೆ ವರುಣ ಭಾಗದ ಕಪಿಲಾ ನದಿ ತಟದಲ್ಲಿ ಅಕ್ರಮ ಮರಳುಗಾರಿಕೆ ನಡೆಸಿ ಕೇರಳಕ್ಕೆ ಸಾಗಿಸುತ್ತಿರಲಿಲ್ಲವೇ? ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ 400 ಪುಟಗಳ ದಾಖಲೆ ಬಿಡುಗಡೆ ಮಾಡಿರಲಿಲ್ಲವೇ. ಇದಕ್ಕಿಂತ ಇನ್ನೇನು ಬೇಕೋ ತಿಳಿಯುತ್ತಿಲ್ಲ. ಸಿದ್ದರಾಮಯ್ಯ ಮೂಲತಃ ವಕೀಲರು. ಸಿಕ್ಕಿ ಹಾಕಿಕೊಳ್ಳದ ಹಾಗೇ ಭ್ರಷ್ಟಾಚಾರ ಮಾಡುವುದರಲ್ಲಿ ನಿಸ್ಸೀಮರು. ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಕೆಂಪಯ್ಯ ಆಯೋಗದ ಮುಂದಿರುವ ದಾಖಲೆಗಳೇ ಸಾಕು. ಇವರು ಎಂತಹ ಭ್ರಷ್ಟಾಚಾರಿ ಅನ್ನೋದನ್ನು ಸಾಬೀತು ಮಾಡಲು ಎಂದು ವಾಗ್ದಾಳಿ ನಡೆಸಿದರು.

ಧರ್ಮಕ್ಕಾಗಿ ಕುಮಾರ ಪರ್ವ: 6.5 ಕೋಟಿ ನಾಡಿನ ಜನತೆಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುಬೇಕೆಂಬ ತೀರ್ಮಾನ ಮಾಡಿ ಆರೋಗ್ಯವನ್ನು ಬದಿಗಿಟ್ಟು ಧರ್ಮ ಯುದ್ಧಕ್ಕೆ ಇಳಿದಿದ್ದೇನೆ. ದ್ವಾಪರ ಯುಗದಲ್ಲಿ ಧರ್ಮಕ್ಕಾಗಿ 18 ಪರ್ವ ಘಟಿಸಿದರೆ, ಕಲಿಯುಗದಲ್ಲಿ ಧರ್ಮ ಸ್ಥಾಪನೆಗಾಗಿ ಒಂದೇ ಒಂದು ಕುಮಾರ ಪರ್ವ ಸಾಕು ಎಂದರು.

ಅಪ್ಪ-ಮಕ್ಕಳು ಆರ್ಭಟ: ತಿ.ನರಸೀಪುರ ಹಾಗೂ ವರುಣ ಕ್ಷೇತ್ರಗಳಿಗೆ ತಮ್ಮ ಮಕ್ಕಳ ಟಿಕೆಟ್‌ಗಾಗಿ ಸಿದ್ದರಾಮಯ್ಯ, ಮಹದೇವಪ್ಪ ಅರ್ಜಿ ಹಾಕಿಸಿಕೊಂಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ಸಿದ್ದರಾಮಯ್ಯಗೆ 25 ವರ್ಷದಿಂದ ಇಲ್ಲದ ಅಭಿವೃದ್ಧಿ ಕಾಳಜಿ ಇದ್ದಕ್ಕಿದಂತೆ ಈಗ ಬಂದಿದೆ. ಸೋಲಿನ ಭೀತಿ ಎದುರಾಗಿ ದೇವೇಗೌಡರ ಜತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ದೂರಿದರು.

ನಂಜನಗೂಡು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಈಗಾಗಲೇ ಜಿಲ್ಲಾ ಪಂಚಾಯಿತಿ ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್.ದಯಾನಂದಮೂರ್ತಿ ಜತೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ತಿಳಿಸಲಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ದಯಾನಂದಮೂರ್ತಿ ಅಭ್ಯರ್ಥಿ ಎಂಬುದನ್ನು ಪರೋಕ್ಷವಾಗಿ ಹೇಳಿದರು.

By R

You missed