ಬೆಂಗಳೂರು: ಬೆಂಗಳೂರು ನಗರವನ್ನು ಮಾಲಿನ್ಯ ಮತ್ತು ವಾಹನ ದಟ್ಟಣೆಯ ನರಕದ ಕೂಪದಿಂದ ಪಾರು ಮಾಡಲು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಕೆಲವು ನಿರ್ಬಂಧಗಳನ್ನು ವಿಧಿಸಲು ಚಿಂತನೆ ನಡೆಸಿದ್ದಾರೆ.

‘ಇದರಿಂದ ನಗರದಲ್ಲಿ ವಾಹನ ದಟ್ಟಣೆಯನ್ನು ತಗ್ಗಿಸಬಹುದು. ಜನರ ಆರೋಗ್ಯವನ್ನೂ ಕಾಪಾಡಬಹುದು’ ಎಂದು ತಮ್ಮಣ್ಣ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ನಿರ್ಬಂಧಗಳನ್ನು ಜಾರಿಗೆ ತರುವುದಕ್ಕೆ ಮೊದಲು 12 ತಿಂಗಳು ಈ ಬಗ್ಗೆ ಅರಿವು ಮೂಡಿಸಲು ಉದ್ದೇಶಿಸಲಾಗಿದೆ. ಆ ಬಳಿಕವೂ ಪರಿಸ್ಥಿತಿ ಸುಧಾರಿಸದಿದ್ದರೆ ಕಠಿಣ ನಿರ್ಬಂಧಗಳನ್ನು ಜಾರಿ ಮಾಡುವುದು ಅನಿವಾರ್ಯ ಎಂದರು.

* ಕಾರ್ ಪೂಲಿಂಗ್‌ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು. ಇದರಿಂದ ಹೆಚ್ಚು ಕಾರುಗಳು ರಸ್ತೆಗೆ ಬರುವುದನ್ನು ತಡೆಯಬಹುದು.

* ಪ್ರತಿಯೊಂದು ಮನೆಯವರೂ ಕನಿಷ್ಠ ವಾಹನಗಳನ್ನು ಹೊಂದಬೇಕು. ಡಿಸೆಲ್‌ ವಾಹನಗಳ ನೋಂದಣಿ ತಗ್ಗಿಸಲಾಗವುದು.

* ಕಾರು ಖರೀದಿಸ ಬಯಸುವವರ ಮನೆಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದಿದ್ದರೆ, ನೋಂದಣಿಗೆ ಅವಕಾಶ ಇಲ್ಲ ಎಂಬ ನಿಯಮ ಕಟ್ಟುನಿಟ್ಟಾಗಿ ಜಾರಿ.

* ಸಾರ್ವಜನಿಕರು ನಗರದಲ್ಲಿ ಓಡಾಟಕ್ಕೆ ಮೆಟ್ರೊ ಮತ್ತು ಬಿಎಂಟಿಸಿ ಬಸ್ಸುಗಳನ್ನು ಬಳಸಬೇಕು. ಇದರಿಂದ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಆಗುತ್ತದೆ.

ಇಲಾಖೆಗೆ ₹ 1500 ಕೋಟಿ: ಸಾರಿಗೆ ಇಲಾಖೆಯಿಂದ ಸರ್ಕಾರಕ್ಕೆ ₹ 6500 ಕೋಟಿ ಆದಾಯ ಬರುತ್ತದೆ. ಆದರೆ, ಬಜೆಟ್‌ನಲ್ಲಿ ಇಲಾಖೆ ಸಿಗುತ್ತಿರುವ ಅನುದಾನ ಅತಿ ಕಡಿಮೆ. ಕನಿಷ್ಠ ₹ 1500 ಕೋಟಿಯಾದರೂ ನೀಡಬೇಕು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್‌ ಬಸ್ಸುಗಳ ಖರೀದಿಯೂ ಸೇರಿದಂತೆ ಹಲವು ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

ಕೇಂದ್ರದಿಂದ 80 ಎಲೆಕ್ಟ್ರಿಕ್‌ ಬಸ್‌ಗಳು: ಕೇಂದ್ರ ಸರ್ಕಾರ ಉಚಿತವಾಗಿ 80 ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಲಿದೆ. ಅಧಿಕ ಮಾಲಿನ್ಯಕಾರಕ ಡಿಸೆಲ್‌ ಬಸ್‌ಗಳನ್ನು ಕಡಿಮೆ ಮಾಡಿ, ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಾಚರಣೆಗೆ ಬಿಡಲು ನಿರ್ಧರಿಸಲಾಗಿದೆ. ಇನ್ನು 150 ಬಸ್ಸುಗಳನ್ನು ನೀಡುವಂತೆ ಕೇಂದ್ರಕ್ಕೆ ಕೋರಿಕೆ ಸಲ್ಲಿಸಲಾಗಿದೆ ಎಂದು ತಮ್ಮಣ್ಣ ತಿಳಿಸಿದರು.

ಪರಿಸರ ಇಲಾಖೆ ಕೇವಲ ಸಲಹೆಗಳನ್ನು ಮಾತ್ರ ನೀಡುವುದಕ್ಕೆ ಸೀಮಿತವಾಗದೆ, ಎಲೆಕ್ಟ್ರಿಕ್‌ ಬಸ್‌ಗಳನ್ನೂ ನೀಡಬೇಕು ಎಂದೂ ಅವರು ಸಲಹೆ ನೀಡಿದರು.

ಬಸ್ಸುಗಳು ಸೋರಲು ಕೆಟ್ಟ ರಸ್ತೆ ಕಾರಣ!

ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಮಳೆ ನೀರು ಸೋರಲು ಮುಖ್ಯ ಕಾರಣ ರಾಜ್ಯದಲ್ಲಿ ರಸ್ತೆ ಸರಿ ಇಲ್ಲದಿರುವುದು ಎಂದು ತಮ್ಮಣ್ಣ ತಿಳಿಸಿದರು.

‘ಹಳ್ಳಿಗಾಡಿನಲ್ಲಿ ರಸ್ತೆಗಳು ಕೆಟ್ಟು ಹೋಗಿವೆ. ಇಂತಹ ರಸ್ತೆಗಳು ಪ್ರತಿ ನಿತ್ಯ ಬಸ್ಸುಗಳು ಸಂಚರಿಸುವುದರಿಂದ ನಟ್ಟು–ಬೋಲ್ಟ್‌ ಕಳಚಿ ಬೇಗನೆ ಹಾಳಾಗುತ್ತಿವೆ. ಈ ಬಗ್ಗೆ ನನ್ನಲ್ಲಿ ಪ್ರಶ್ನೆ ಕೇಳುವುದಕ್ಕಿಂತ ಲೋಕೋಪಯೋಗಿ ಮತ್ತು ನಗರಾಭಿವೃದ್ಧಿ ಸಚಿವರುಗಳಿಗೆ ಪ್ರಶ್ನೆ ಹಾಕಬೇಕು’ ಎಂದು ಹೇಳಿದರು.

‘ಚಾಲಕರು ಮತ್ತು ನಿರ್ವಾಹಕರ ನಿರ್ಲಕ್ಷ್ಯದಿಂದಾಗಿಯೂ ಬಸ್ಸುಗಳು ಕೆಟ್ಟು ಹೋಗುತ್ತಿವೆ. ಡಿಪೊಗಳಲ್ಲಿ ಸುಸ್ಥಿತಿಯಲ್ಲಿ ಇಲ್ಲದ ಬಸ್ಸುಗಳನ್ನು ನೀಡಿದರೆ, ಚಾಲಕರು ಅದನ್ನು ಪಡೆಯಲು ನಿರಾಕರಿಸಬೇಕು’ ಎಂದೂ ಅವರು ತಿಳಿಸಿದರು.

source: Prajavani

By R

You missed