ಬೆಂಗಳೂರು: ‘ವಿಧಾನಸಭಾಧ್ಯಕ್ಷರ ಕಚೇರಿಯಲ್ಲೇ ಭ್ರಷ್ಟಾಚಾರ ನಡೆಯುತ್ತಿದ್ದು, ರಾಜ್ಯ ವಿಧಾನಸಭೆ ಅಧ್ಯಕ್ಷರು ತಮ್ಮ ಸ್ಥಾನದ ಘನತೆಯನ್ನು ಕುಗ್ಗಿಸಿದ್ದಾರೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ವಿಷಾದಿಸಿದರು.

ಜೆಡಿಎಸ್‌ ರಾಜ್ಯ ಕಾನೂನು ಘಟಕದ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ‘ಶಾಸನಸಭೆ ದಿನದಿಂದ ದಿನಕ್ಕೆ ತನ್ನ ಗಾಂಭೀರ್ಯ ಕಳೆದುಕೊಳ್ಳುತ್ತಿದೆ. ರಾಜ್ಯ ಮಾತ್ರವಲ್ಲ ಬೇರೆ ರಾಜ್ಯಗಳ ವಿಧಾನಸಭೆ ಅಧ್ಯಕ್ಷರೂ ತಮ್ಮ ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ. ವ್ಯವಸ್ಥೆಯನ್ನೇ ನಾಶ ಮಾಡಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಜನಪ್ರತಿನಿಧಿಗಳು ತಮ್ಮ ವಾಕ್‌ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪೈಪೋಟಿಯ ಭರದಲ್ಲಿ ಅವರ ವರ್ತನೆ ಅತ್ಯಂತ ಕೀಳು ಮಟ್ಟಕ್ಕೆ ಇಳಿದಿದೆ. ಭವಿಷ್ಯದಲ್ಲಿ ಇಂತಹ ವ್ಯವಸ್ಥೆಯನ್ನು ಸರಿ ಮಾಡುವುದು ಕಷ್ಟ ಇದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಕೊಡಲು ನನ್ನ ಬಳಿ ಏನೂ ಇಲ್ಲ…!’
‘ಯಾರಿಗೂ ಏನೂ ಕೊಡೊ ಶಕ್ತಿ ಇಲ್ಲ. ನಿಮ್ಮ ಮಾಲೀಕರಿಗೆ ಕೊಡಲೂ ನನ್ನ ಬಳಿ ಶಕ್ತಿ ಇಲ್ಲ. ಬೇಜಾರು ಮಾಡ್ಕೊಬೇಡಿ. ಕಾಫಿ ಕುಡ್ಕೊಂಡು ಹೋಗ್ರಪ್ಪಾ…’

ಜೆಡಿಎಸ್‌ನ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ರೀತಿ ಹೇಳಿದ ದೇವೇಗೌಡ  ‘ನಿಮ್ಮ ಸಹಕಾರ ಇಲ್ಲದೇ ನಾನು ಏನೂ ಮಾಡಲು ಆಗುವುದಿಲ್ಲ’ ಎಂದರು!

‘ಇನ್ನೇನು ಸ್ವಲ್ಪ ಹೊತ್ತಿನಲ್ಲೇ ಚಿಕ್ಕಬಳ್ಳಾಪುರದಿಂದ ಒಂದೈವತ್ತು ಜನ ಕಾಂಗ್ರೆಸ್‌ನವರು ಜೆಡಿಎಸ್‌ ಸೇರಲು ಬರ್ತಿದ್ದಾರೆ. ಸ್ವಲ್ಪ ಇರಿ. ನೋಡ್ಕೊಂಡು ಹೋಗಿ’ ಎಂದು ಮಾಧ್ಯಮ ಪ್ರತಿನಿಧಿಗಳ ಜೊತೆ 45 ನಿಮಿಷಕ್ಕೂ ಹೆಚ್ಚು ಕಾಲ ಮಾತನಾಡಿದರು.

By R

You missed