ಬೆಂಗಳೂರು: ದೇಶದಲ್ಲಿ ಮೀಸಲಾತಿ ಅನುಷ್ಠಾನಕ್ಕೆ ಕಾಂಗ್ರೆಸ್ ನಿರಂತರ ವಿಳಂಬ ಅನುಸರಿಸುತ್ತ ಬಂದರೆ, ಬಿಜೆಪಿ ಮೀಸಲಾತಿ ವ್ಯವಸ್ಥೆಯನ್ನೇ ಹತ್ತಿಕ್ಕುವ ಸಂಘ ಪರಿವಾರದ ಅಜೆಂಡಾ ಹೊಂದಿದೆ. ಹೀಗಾಗಿ ದಲಿತರು, ಹಿಂದುಳಿದವರು ಹಾಗೂ ಬಡವರು ಈ ಎರಡೂ ಪಕ್ಷಗಳನ್ನು ಧಿಕ್ಕರಿಸಬೇಕು ಎಂದು ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆೆ ಮಾಯಾವತಿ ಕರೆ ನೀಡಿದ್ದಾರೆ.

ಶನಿವಾರ ಯಲಹಂಕ ಹೊರವಲಯದಲ್ಲಿ ಜೆಡಿಎಸ್ ಏರ್ಪಡಿಸಿದ್ದ ವಿಕಾಸ ಪರ್ವ ಸಮಾವೇಶದಲ್ಲಿ ಜೆಡಿಎಸ್- ಬಿಎಸ್ಪಿ ಮೈತ್ರಿಕೂಟದ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವಾತಂತ್ರಾ್ಯನಂತರ ಕಾಂಗ್ರೆಸ್ ಸಂವಿಧಾನದ ಕಲಂ 340 ಅನ್ವಯ ಪೂರ್ಣ ಪ್ರಮಾಣದ ಮೀಸಲಾತಿ ಜಾರಿಗೊಳಿಸಲು ಹಿಂದೇಟು ಹಾಕುತ್ತ ಬರುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಮೀಸಲಾತಿ ಹತ್ತಿಕ್ಕುವ ಪ್ರಯತ್ನದಲ್ಲಿ ತೊಡಗಿದೆ ಎಂದು ಆರೋಪಿಸಿದರು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಬಡವರು, ಶ್ರಮಿಕರು, ಕಾರ್ವಿುಕರು, ರೈತರು ಹಾಗೂ ಸಣ್ಣ ವರ್ತಕರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಸಮಾನ ಶತ್ರುಗಳಾಗಿವೆ. ಜಾತಿವಾದಿ, ಸಂಕೀರ್ಣ ಹಾಗೂ ಹಿಡನ್ ಅಜೆಂಡಾಗಳನ್ನು ಈ ಎರಡೂ ರಾಷ್ಟ್ರೀಯ ಪಕ್ಷಗಳು ಹೊಂದಿವೆ ಎಂದು ದೂರಿದರು. ಕರ್ನಾಟಕದಲ್ಲಿ ಸದ್ಯ ದಲಿತಾಕರ್ಷಣೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಗಳನ್ನು ಉತ್ತರಪ್ರದೇಶದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸ ಲಾಗಿತ್ತು. ಇದೀಗ ಅದೇ ಯೋಜನೆಗಳನ್ನು ನಕಲು ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು. ಸದ್ಯ ಅಧಿಕಾರದಲ್ಲಿರುವ ಬಿಜೆಪಿ ಕೂಡ ದಲಿತರ ಮೀಸಲಾತಿಯನ್ನು ಯಾವ ಕ್ಷಣದಲ್ಲಿ ಕಸಿಯುತ್ತದೆ ಎಂದು ಹೇಳಲಾಗುವುದಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ರೋಹಿತ್ ವೇಮುಲ ಹತ್ಯೆ, ಗುಜರಾತ್​ನ ಊನಾ ಹತ್ಯಾಕಾಂಡ ಸೇರಿ ದೇಶದಲ್ಲಿ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿವೆ ಎಂದರು.

ಕಾಂಗ್ರೆಸ್ ವಿಶ್ವಾಸಘಾತುಕ: ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿ ಮಾಡುವ ಭರವಸೆ ನೀಡಿತ್ತು. ಆದರೆ ದಲಿತರನ್ನು ಕೇವಲ ಮತ ಪಡೆಯಲು ಬಳಸಿಕೊಂಡು ವಿಶ್ವಾಸಘಾತುಕ ಎಂಬುದನ್ನು ತೋರಿಸಿದೆ. ಇನ್ನು ಮುಂದೆ ಕರ್ನಾಟಕದಲ್ಲಿ ದಲಿತರು ಯಾವ ಕಾರಣಕ್ಕೂ ಕಾಂಗ್ರೆಸ್​ನತ್ತ ಹೋಗಬಾರದು. ಉತ್ತರಪ್ರದೇಶ, ಗುಜರಾತ್​ನಂತೆ ಕರ್ನಾಟಕದಲ್ಲೂ ಜಾತಿ, ಧರ್ಮದ ಹೆಸರಿನಲ್ಲಿ ಬಿಜೆಪಿ ಮೋಸ ಮಾಡಲು ಹೊರಟಿದೆ. ಇದೆಲ್ಲವನ್ನೂ ಎಚ್ಚರಿಕೆಯಿಂದ ಗಮನಿಸಿ. ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಬಿಎಸ್ಪಿ ಮೈತ್ರಿಗೆ ಮತನೀಡಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿ ಎಂದು ಮಾಯಾವತಿ ಮನವಿ ಮಾಡಿದರು.

ನೋಟು ಅಮಾನ್ಯ, ಜಿಎಸ್​ಟಿ ಜಾರಿ ಪರಿಣಾಮ ದುಡಿಯುವ ವರ್ಗ ಭಾರಿ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಪ್ರಧಾನಿ ಬಡವರಿಗೆ ಪಕೋಡ ಮಾರಿ ಜೀವನ ನಡೆಸಿ ಎನ್ನುತ್ತಿದ್ದಾರೆ.

| ಮಾಯಾವತಿ ಬಿಎಸ್ಪಿರಾಷ್ಟ್ರೀಯ ಅಧ್ಯಕ್ಷೆ


ನಿಮ್ಮ ಮನೆ ಮಗನು..

ಬೆಂಗಳೂರು: ಎತ್ತ ಕಣ್ಣು ಹಾಯಿಸಿದರೂ, ಜನವೋ ಜನ.. ಜೆಡಿಎಸ್- ಬಿಎಸ್​ಪಿ ಬಾವುಟಗಳು.. ಮಾಜಿ ಸಿಎಂಗಳಾದ ಮಾಯಾವತಿ, ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ವೇದಿಕೆ ಏರುತ್ತಿದ್ದಂತೆಯೇ ಪ್ರಚಂಡ ಕರತಾಡನ…

ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳಿವು. ‘ನಾನು ನಿಮ್ಮವನು.. ನಿಮ್ಮ ಮನೆ ಮಗನು..’ ಚಲನಚಿತ್ರ ಹಾಡಿನೊಂದಿಗೆ ನೆರೆದಿದ್ದ ಅಪಾರ ಜನಸ್ತೋಮದ ಮಧ್ಯೆ ಕಾರ್ಯಕರ್ತರತ್ತ ಕೈಬೀಸುತ್ತ ತೆರೆದ ಬಸ್​ನಲ್ಲಿ ಸಿನಿಮಾ ಶೈಲಿಯಲ್ಲಿ ಆಗಮಿಸಿದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಉಭಯ ಪಕ್ಷಗಳ ಬೆಂಗಲಿಗರು, ಕಾರ್ಯಕರ್ತರಿಂದ ಜೈಕಾರಗಳು ಮೊಳಗಿದವು. ವಿಕಾಸ ಪರ್ವ ಇದು ಕುಮಾರ ಪರ್ವ ಎಂದು ಕೆಲವರು ಗುಣಗಾನಗೈದರು.

ಜನಸಾಗರವನ್ನು ಕಂಡು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೆಲಕಾಲ ಗದ್ಗದಿತರಾದರು. ‘ನಾನು ಭಾಷಣ ಮಾಡುವವರೆಗೂ ನೀವು ಕದಲಬೇಡಿ’ ಎಂದು ಆರಂಭದಲ್ಲಿಯೇ ಕಾರ್ಯ ಕರ್ತರಿಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿವಿ ಮಾತು ಹೇಳಿ ಆಸೀನರಾದರು. 2-3 ಕಿ.ಮೀ.ಗಳವರೆಗೆ ಬಸ್​ಗಳು, ಜೀಪ್​ಗಳು, ಕಾರ್​ಗಳು, ಟೆಂಪೋಟ್ರಾ್ಯಕ್ಸ್ ವಾಹನಗಳಲ್ಲಿ ಜನತೆ ಆಗಮಿಸಿದ್ದರಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ವಾಹನ ಸವಾರರಿಂದ ತುಂಬಿ ತುಳುಕುತ್ತಿತ್ತು. ಜನತೆಯನ್ನು ನಿಯಂತ್ರಿಸಲು, ಸಂಚಾರ ವ್ಯವಸ್ಥೆಯನ್ನು ಸರಿಪಡಿಸುವುದಕ್ಕಾಗಿ ತಡರಾತ್ರಿಯವರೆಗೆ ಪೊಲೀಸರು ಹರಸಾಹಸ ಮಾಡಿದರು.

ಜೆಡಿಎಸ್​ನ ಬಹುತೇಕ ಹಾಲಿ- ಮಾಜಿ ಶಾಸಕರು, ವಿವಿಧ ಕ್ಷೇತ್ರಗಳ ಆಕಾಂಕ್ಷಿಗಳು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ, ತಮ್ಮ ಬಲ ಪ್ರದರ್ಶನ ಮಾಡಿದರು. 1985ರಲ್ಲಿ ಜನತಾ ಪಕ್ಷದ ಸಮಾವೇಶದ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಜನಸ್ತೋಮ ಆಗಮಿಸಿರುವುದನ್ನು ಕಂಡು ಖುಷಿಯಾಗುತ್ತಿದೆ ಎಂದು ಜೆಡಿಎಸ್​ನ ಬಸವರಾಜ ಹೊರಟ್ಟಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಿವಿಧ ವರ್ಗಗಳ ಜನತೆಗೆ ಕುಮಾರಸ್ವಾಮಿ ಅವರು, ನೀಡಿರುವ ಸಹಾಯ- ಸಹಕಾರದ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು.

ದಲಿತ ಮತಗಳ ಸೆಳೆಯುವ ಪ್ರಯತ್ನ

ವಿಧಾನಸಭಾ ಚುನಾವಣೆಯಲ್ಲಿ 2 ರಾಷ್ಟ್ರೀಯ ಪಕ್ಷಗಳ ಮಧ್ಯೆ ಸಾಮರ್ಥ್ಯ ಪ್ರದರ್ಶಿಸಲೇಬೇಕೆಂದು ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ 126 ಕ್ಷೇತ್ರಗಳಿಗೆ ಶನಿವಾರ ವಿಕಾಸಪರ್ವ ರ್ಯಾಲಿಯಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟಿಸುವುದರೊಂದಿಗೆ ರಣಕಹಳೆ ಮೊಳಗಿಸಿದೆ. ದಲಿತ ಹಾಗೂ ಒಕ್ಕಲಿಗ ಮತಗಳ ಕ್ರೋಡೀಕರಣ ಮಾಡಿಕೊಂಡು ಚುನಾವಣೆ ಎದುರಿಸುವ ಪ್ರಯತ್ನದಲ್ಲಿರುವ ಜೆಡಿಎಸ್, ಬಿಎಸ್ಪಿ ನಾಯಕಿ ಮಾಯಾವತಿ ಅವರನ್ನು ಕರೆಸಿ ದಲಿತ ಮತಗಳನ್ನು ಸೆಳೆಯುವ ಪ್ರಯತ್ನವನ್ನು ಈ ಸಮಾವೇಶದ ಮೂಲಕ ಮಾಡಿತು. ಸಮಾವೇಶಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಗಮನಿಸಿದರೆ ಜೆಡಿಎಸ್​ನ್ನು ಕಾಂಗ್ರೆಸ್ ಮತ್ತು ಬಿಜೆಪಿ ಹಗುರವಾಗಿ ಪರಿಗಣಿಸುವಂತೆಯೇ ಇಲ್ಲ.


ಮೊದಲ ಪಟ್ಟಿ ಬಿಡುಗಡೆ

ಬೆಂಗಳೂರು: ಯಲಹಂಕದಲ್ಲಿ ಶನಿವಾರ ಸಂಜೆ ನಡೆದ ವಿಕಾಸ ಪರ್ವ ಸಮಾವೇಶದಲ್ಲಿ ಜೆಡಿಎಸ್ 126 ವಿಧಾನಸಭೆ ಕ್ಷೇತ್ರಗಳ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಎರಡು ಸ್ಥಾನಗಳನ್ನು ದೇವೇಗೌಡರ ಪುತ್ರರಾದ ಎಚ್.ಡಿ.ಕುಮಾರ ಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಅವರಿಗೆ ಮತ್ತು ಇನ್ನೆರಡು ಸ್ಥಾನಗಳನ್ನು ಅವರ ಬೀಗರಾದ ಮೈಸೂರು ವಿವಿಯ ವಿಶ್ರಾಂತ ಕುಲಪತಿ ಕೆ.ಎಸ್.ರಂಗಪ್ಪ ಅವರಿಗೆ ಮೈಸೂರಿನ ಚಾಮರಾಜ ಹಾಗೂ ಮದ್ದೂರಿನಿಂದ ಹಾಲಿ ಶಾಸಕ ಡಿ.ಸಿ. ತಮ್ಮಣ್ಣ ಅವರಿಗೆ ಟಿಕೆಟ್ ನೀಡಲಾಗಿದೆ.

ಬೇರೆ ಪಕ್ಷದಿಂದ ಜೆಡಿಎಸ್​ಗೆ

ವಲಸೆ ಬಂದವರಿಗೆ ಆದ್ಯತೆ ನೀಡಲಾಗಿದೆ. ಮುದ್ದೇಬಿಹಾಳದ ಕಾಂಗ್ರೆಸ್​ನ ಎ.ಎಸ್.ಪಾಟೀಲ (ನಡಹಳ್ಳಿ), ಹುಣಸೂರಿನಲ್ಲಿ ಮಾಜಿ ಸಚಿವ ಎಚ್. ವಿಶ್ವನಾಥ್, ಬೆಳಗಾವಿ ಗ್ರಾಮೀಣದಲ್ಲಿ ಕಾಂಗ್ರೆಸ್​ನಿಂದ ಬಂದ ಶಿವನಗೌಡ ಪಾಟೀಲ್, ಕೆಜೆಪಿಯಲ್ಲಿದ್ದು ನಂತರ ಕಾಂಗ್ರೆಸ್ ಸೇರಿದ್ದ ಮಂಜುನಾಥಗೌಡ ಅವರಿಗೆ ತೀರ್ಥಹಳ್ಳಿಯಲ್ಲಿ, ಮಾಗಡಿಯಿಂದ ಎ. ಮಂಜು, ಶ್ರೀರಂಗಪಟ್ಟಣದಲ್ಲಿ ರವೀಂದ್ರ ಶ್ರೀಕಂಠಯ್ಯ, ನಾಗಮಂಗಲದಲ್ಲಿ ಸುರೇಶ್​ಗೌಡ, ಬಿಜೆಪಿಯಿಂದ ಬಂದ ಆನಂದ ಅಸ್ನೋಟಿಕರ್ ಅವರಿಗೆ ಕಾರವಾರದಿಂದ ಟಿಕೆಟ್ ನೀಡಲಾಗಿದೆ. ನಿವೃತ್ತ ಅಧಿಕಾರಿಗಳಾದ ಲೋಕೇಶ್ವರ್​ಗೆ ತಿಪಟೂರು, ಬಳಿಗಾರ್​ಗೆ ಶಿಕಾರಿಪುರ, ವೀರಭಧ್ರಯ್ಯಗೆ ಮಧುಗಿರಿಯಿಂದ ಟಿಕೆಟ್ ನೀಡಲಾಗಿದೆ. ಮಾಜಿ ಎಂಎಲ್ಸಿ ಎಚ್.ಸಿ. ನೀರಾವರಿಗೆ ಕುಷ್ಟಗಿಯಿಂದ ನಿಲ್ಲಿಸಲಾಗುತ್ತಿದೆ. ಆದಾಯ ತೆರಿಗೆ ಇಲಾಖೆ ದಾಳಿಗೆ ಸಿಲುಕಿದ್ದ ಚಿತ್ರನಟ ದೊಡ್ಡಣ್ಣ ಅವರ ಅಳಿಯ ಕೆ.ಸಿ. ವೀರೇಂದ್ರಗೆ ಚಿತ್ರದುರ್ಗ, ರಾಮಕೃಷ್ಣ ಹೆಗಡೆ ಅವರ ಸಂಬಂಧಿ ಶಶಿಭೂಷಣ ಹೆಗಡೆ ಅವರಿಗೆ ಶಿರಸಿಯಿಂದ ಟಿಕೆಟ್ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ ನಾಲ್ಕು ಜನ ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಮಾಜಿ ಸಚಿವ ಗೋವಿಂದೇಗೌಡರ ಪುತ್ರ ವೆಂಕಟೇಶ್ ಅವರನ್ನು ಶೃಂಗೇರಿಯಿಂದ ಕಣಕ್ಕೆ ಇಳಿಸಲಾಗುತ್ತಿದೆ. ಮಂಡ್ಯದ ಸಂಸದ ಸಿ.ಎಸ್. ಪುಟ್ಟರಾಜು ಅವರನ್ನು ವಿಧಾನಸಭೆಗೆ ತರುವ ಪ್ರಯತ್ನ ನಡೆದಿದ್ದು, ಅವರನ್ನು ಮೇಲುಕೋಟೆಯಿಂದ ಕಣಕ್ಕೆ ಇಳಿಸಲಾಗುತ್ತಿದೆ. ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ. ಮಾಜಿ ಶಾಸಕರು ಟಿಕೆಟ್ ಗಿಟ್ಟಿಸಿದ್ದಾರೆ. ಕೆಲ ಹೊಸ ಮುಖಗಳಿಗೂ ಆದ್ಯತೆ ನೀಡಲಾಗಿದೆ.

ಬಂಡಾಯ ಕ್ಷೇತ್ರದಲ್ಲಿ: ಜೆಡಿಎಸ್​ನಲ್ಲಿ ಬಂಡಾಯವೆದ್ದಿದ್ದ 7 ಶಾಸಕರ ಪೈಕಿ ಮೂರು ಕ್ಷೇತ್ರದಲ್ಲಿ ಟಿಕೆಟ್ ಪ್ರಕಟಿಸಲಾಗಿದೆ. ಮಾಗಡಿ, ಶ್ರೀರಂಗಪಟ್ಟಣ ಹಾಗೂ ನಾಗಮಂಗಲದಲ್ಲಿ ಕಾಂಗ್ರೆಸ್​ನಿಂದ ಬಂದವರಿಗೆ ಟಿಕೆಟ್ ಪ್ರಕಟಿಸಲಾಗಿದೆ. ಉಳಿದಂತೆ ಗಂಗಾವತಿ, ಚಾಮರಾಜಪೇಟೆ, ಪುಲಿಕೇಶಿ ನಗರ, ಹಗರಿಬೊಮ್ಮನಹಳ್ಳಿಯಲ್ಲಿ ಇನ್ನಷ್ಟೆ ಅಭ್ಯರ್ಥಿಗಳ ಆಯ್ಕೆಯಾಗಬೇಕಿದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಚ್ಡಿಕೆ ಹಾಗೂ ಮಾಯಾವತಿ ಫೋಟೋ ಇಟ್ಟುಕೊಂಡು ಮತಯಾಚಿಸಿ ಪ್ರಾದೇಶಿಕ ಪಕ್ಷದ ಉಳಿವಿಗಾಗಿ ನಿರ್ಣಾಯಕ ಹೋರಾಟ ಮಾಡುತ್ತೇವೆ ಎಂದು ಎಚ್.ಡಿ. ದೇವೇಗೌಡ ಹೇಳಿದರು. ರಾಜ್ಯದ ಪ್ರತಿಯೊಬ್ಬ ಜೆಡಿಎಸ್ ಕಾರ್ಯಕರ್ತ ತಾನೇ ಕುಮಾರಸ್ವಾಮಿ ಎಂಬಂತೆ ಕೆಲಸ ಮಾಡಿದರೆ, ಎಚ್ಡಿಕೆ ಮತ್ತೆ ಸಿಎಂ ಆಗುತ್ತಾರೆ. ನಮಗೆ ಬಿಎಸ್ಪಿ ಬೆಂಬಲದಿಂದ ಆನೆಬಲ ಬಂದಂತಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದ ಅನೇಕ ಕಡೆಗಳಲ್ಲಿ ಬಿಎಸ್ಪಿ ಬಗೆಗೆ ಒಲವಿದೆ. ಜೆಡಿಎಸ್ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಬಿಎಸ್ಪಿ ಬೆಂಬಲ ನೀಡಲಿದೆ, ಬಿಎಸ್ಪಿ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲಿಸಲಿದೆ ಎಂದು ಹೇಳಿದರು.

ಸಮಾವೇಶದಿಂದ ಸಂಚಾರದಟ್ಟಣೆ

‘ವಿಕಾಸ ಪರ್ವ’ ಸಮಾವೇಶಕ್ಕೆ ಲಕ್ಷಾಂತರ ಮಂದಿ ಕಾರ್ಯಕರ್ತರು ಸಾವಿರಾರು ವಾಹನಗಳಲ್ಲಿ ಆಗಮಿಸಿದ ಪರಿಣಾಮ, ವಿಮಾನ ನಿಲ್ದಾಣ ರಸ್ತೆ, ಸುತ್ತಲಿನ ಪ್ರದೇಶದಲ್ಲಿ ಸಂಚಾರದಟ್ಟಣೆ ಅಧಿಕವಾಗಿತ್ತು. ಅರಮನೆ ರಸ್ತೆಯಿಂದ ನಿಟ್ಟೆ ಮೀನಾಕ್ಷಿ ಕಾಲೇಜುವರೆಗೆ ಮಧ್ಯಾಹ್ನದಿಂದ ರಾತ್ರಿ 9 ಗಂಟೆವರೆಗೆ ವಾಹನದಟ್ಟಣೆ ಹೆಚ್ಚಾಗಿತ್ತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಸಮಾವೇಶದ ವಾಹನಗಳು ಶನಿವಾರ ಬೆಳಗ್ಗೆ ಯಿಂದಲೇ ನಗರ ಪ್ರವೇಶಿಸಿದವು.

4 ಕಿ.ಮೀ. ಸಾಲು!: ಎಲ್ಲ ಕಡೆಗಳಿಂದ ನಗರ ಪ್ರವೇಶಿಸಿದ ವಾಹನಗಳು ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕ ಹೊಂದಿದ ಪರಿಣಾಮ ನಿಟ್ಟೆ ಮೀನಾಕ್ಷಿ ಕಾಲೇಜಿನಿಂದ ನಾಗೇನಹಳ್ಳಿ ಗೇಟ್​ವರೆಗೆ 4 ಕಿ.ಮೀ.ವರೆಗೆ ವಾಹನ ಸಾಲುಗಟ್ಟಿ ನಿಂತಿದ್ದವು. ಇದರಿಂದಾಗಿ ಸಮಾವೇಶಕ್ಕೆ ವಾಹನದಲ್ಲಿ ಬಂದಿದ್ದ ಕಾರ್ಯಕರ್ತರು ನಡೆದುಕೊಂಡು ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಸೂಕ್ತ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ಹೋಗಲು ಆಗದೆ ಪರಿತಪಿಸಿ ಪೊಲೀಸರು ಮತ್ತು ರಾಜಕೀಯ ಪಕ್ಷದ ನಾಯಕರಿಗೆ ಹಿಡಿ ಶಾಪ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

 

Source: Vijayavani

By R

You missed