ಹಾಸನ: ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಭಾಗದ ಹಲವು ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ಮತ್ತು ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸಲು ಕೂಡಲೇ ವಿಧಾನಸಭೆ ಅಧಿವೇಶನ ಕರೆಯಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದ ಆಗಿರುವ ಅನಾಹುತವನ್ನು ಕಣ್ಣಿಂದ ನೋಡಲು ಆಗುವುದಿಲ್ಲ. ಬೆಳಗಾವಿಯಲ್ಲಿ ಆಗಿರುವ ‌ ನಷ್ಟ ಸರಿಪಡಿಸಲು ಎಷ್ಟು ವರ್ಷ ಬೇಕಾಗುತ್ತದೆ ಗೊತ್ತಿಲ್ಲ. ಅನೇಕ ಕಡೆ ಮನೆ ನೆಲಸಮವಾಗಿ ಜನರು ಬೀದಿಗೆ ಬಿದ್ದಿದ್ದಾರೆ. ನೊಂದ‌ ಜನರಿಗೆ ಪಕ್ಷಾತೀತವಾಗಿ ನೆರವಾಗುವುದು ಜನಪ್ರತಿನಿಧಿಗಳ ಕರ್ತವ್ಯ. ಈ ಬಗ್ಗೆ ಚರ್ಚಿಸಲು ಕೂಡಲೇ ವಿಧಾನಸಭೆ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿದರು.
ರಾಜ್ಯದ ನೆರೆ ಪರಿಸ್ಥಿತಿ ಬಗ್ಗೆ ವಿರೋಧ ಪಕ್ಷದ ನಾಯಕರನ್ನೂ ಕರೆದು ಮಾತನಾಡಬೇಕು. ಅಷ್ಟೇ ಅಲ್ಲ, ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿ ಹೆಚ್ಚಿನ ಪರಿಹಾರಕ್ಕೆ ಬೇಡಿಕೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.
ಹಿಂದೆ ಉತ್ತರ ಭಾರತದ ಕೆಲ ರಾಜ್ಯಗಳಿಗೆ ಪರಿಹಾರ ಘೋಷಣೆ ಮಾಡಿದಂತೆ ಕರ್ನಾಟಕಕ್ಕೂ ಪ್ರಧಾನಿ ಅವರು ವಿಶೇಷ ಪ್ಯಾಕೇಜ್ ಘೋಷಿಸಬೇಕು. ನನ್ನ ಜೀವನದಲ್ಲಿ ಇಷ್ಟೊಂದು ಮಳೆ ನೀರು ನೋಡಿರಲಿಲ್ಲ. ಹೊಳೆನರಸೀಪುರ, ಸಕಲೇಶಪುರ ಸೇರಿ ₹ 300 ರಿಂದ 400 ಕೋಟಿ ನಷ್ಟವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು ಎಂದರು. ‌ ರಾಜ್ಯದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿರುವ ಕೆಎಂಎಫ್ ಚುನಾವಣೆ ಬಗ್ಗೆ ಏನನ್ನೂ ಮಾತನಾಡುವುದಿಲ್ಲ ಆ ಬಗ್ಗೆ ಸಮಯ ಬಂದಾಗ ಮಾತನಾಡುತ್ತೇನೆ. ಈಗ ರಾಜಕೀಯ ಮಾತನಾಡುವ ಸಮಯ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.