ಬೆಂಗಳೂರು: ‘ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ವಿಧಾನಸೌಧದ ಮುಂಭಾಗದಲ್ಲಿ ಬುಧವಾರ (ಮೇ 23) ನಡೆಯಲಿದೆ’ ಎಂದು ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಭಾನುವಾರ ಮಾತನಾಡಿದ ಅವರು, ‘ಈ ಮೊದಲು ಕಂಠೀರವ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಿದ್ದ ಸಮಾರಂಭವನ್ನು ಈಗ ವಿಧಾನಸೌಧಕ್ಕೆ ಬದಲಾಯಿಸಲಾಗಿದೆ’ ಎಂದರು.

ಸಂಪುಟದ ಬಗ್ಗೆ ಚರ್ಚಿಸಿಲ್ಲ: ‘ಸಂಪುಟ ರಚನೆಯ ಬಗ್ಗೆ ಇನ್ನೂ ಚರ್ಚಿಸಿಲ್ಲ. ನಾನು ಸೋಮವಾರ ದೆಹಲಿಗೆ ತೆರಳುತ್ತಿದ್ದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಮತ್ತು ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ ಪ್ರಮುಖರೊಂದಿಗೆ ಸಂಪುಟ ರಚನೆ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ಸೋತವರಿಗೆ ಸಮಾಧಾನ: ಚುನಾವಣೆಯಲ್ಲಿ ಪರಾಭವಗೊಂಡ ಜೆಡಿಎಸ್‌ ಅಭ್ಯರ್ಥಿಗಳ ಜೊತೆ ಸುಮಾರು 20 ನಿಮಿಷಗಳ ಕಾಲ ಚರ್ಚಿಸಿದ ಕುಮಾರಸ್ವಾಮಿ, ‘ನಾನು ನಿಮ್ಮ ಜೊತೆಗಿದ್ದೇನೆ. ನಿಮ್ಮ ಕೈಬಿಡುವುದಿಲ್ಲ. ಧೈರ್ಯವಾಗಿರಿ’ ಎಂದು ಭರವಸೆ ತುಂಬಿದರು.

ಪಾವಗಡ ಕ್ಷೇತ್ರದಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ವೆಂಕಟರಮಣಪ್ಪ ಎದುರು ಕೇವಲ 328 ಮತಗಳ ಅಂತರದಿಂದ ಸೋತಿರುವ ಕೆ.ಎಂ. ತಿಮ್ಮರಾಯಪ್ಪ, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸೋಲು ಅನುಭವಿಸಿರುವ ಸಿ.ಬಿ.ಸುರೇಶ್‌ ಬಾಬು, ಮಾಲೂರು ಕ್ಷೇತ್ರದ ಕೆ.ಎಸ್. ಮಂಜುನಾಥಗೌಡ, ಕುಣಿಗಲ್‌ನ ಡಿ. ಕೃಷ್ಣಕುಮಾರ್, ನವಲಗುಂದ ಕ್ಷೇತ್ರದ ಎನ್‌.ಎಚ್. ಕೋನರಡ್ಡಿ ಇದ್ದರು.

ಶ್ರೀರಂಗಂ ಗೆ ಪ್ರಯಾಣ: ಕುಮಾರಸ್ವಾಮಿ ಅವರು ಸಹೋದರ ಎಚ್‌.ಡಿ. ರೇವಣ್ಣ ಜೊತೆ ವಿಶೇಷ ವಿಮಾನದಲ್ಲಿ ಭಾನುವಾರ ಸಂಜೆ ಶ್ರೀರಂಗಂ ಗೆ ಪ್ರಯಾಣ ಬೆಳೆಸಿದರು. ತಿರುಚಿರಾಪಳ್ಳಿ ಜಿಲ್ಲೆಯ ಶ್ರೀರಂಗಂನ ರಂಗನಾಥ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾತ್ರಿ 8.30ಕ್ಕೆ ವಾಪಸಾದರು.

By R

You missed