ಬೆಂಗಳೂರು: ರಾಜ್ಯದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಗೆ ಕಡಿವಾಣ ಹಾಕಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಖಡಕ್‌ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಹಿರಿಯ ಅಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಿ ಒಂದೆರಡು ದಿನಗಳಲ್ಲಿ ಆದೇಶ ಹೊರಡಿಸುವಂತೆಯೂ ಸೂಚಿಸಿದ್ದಾರೆ.

ಹಲವು ಇಲಾಖೆಗಳು, ನಿಗಮ ಮಂಡಳಿಗಳು ಹೊಸ ಕಾರುಗಳಿಗಾಗಿ ಪ್ರಸ್ತಾವ ಸಲ್ಲಿಸಿವೆ. ಇವುಗಳನ್ನು ಪುನರ್‌ಪರಿಶೀಲನೆ ನಡೆಸುವಂತೆ ಕುಮಾರಸ್ವಾಮಿ ತಾಕೀತು ಮಾಡಿದ್ದಾರೆ. ಸಚಿವರಿಗಾಗಿ 20 ಹೊಸ ಕಾರುಗಳ ಖರೀದಿಗೆ ಒಪ್ಪಿಗೆ ನೀಡಿದ ಬೆನ್ನಲ್ಲೇ, ಮುಖ್ಯಮಂತ್ರಿ ಈ ಉಪಕ್ರಮ ಕೈಗೊಂಡಿದ್ದಾರೆ. ಹೊಸ ಯೋಜನೆಗಳಿಗೆ ಅನುಮೋದನೆ ನೀಡದಂತೆಯೂ ಸೂಚನೆ ನೀಡಲಾಗಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾದ ಎಸ್‌. ಸುರೇಶ್‌ ಕುಮಾರ್‌ ಹಾಗೂ ಶೋಭಾ ಕರಂದ್ಲಾಜೆ ಸರ್ಕಾರಿ ಬಂಗಲೆ ನವೀಕರಣ ಮಾಡಲಾಗಿತ್ತು. ಅದರ ವೆಚ್ಚ ನೋಡಿ ದಂಗಾಗಿದ್ದ ಸಚಿವರೇ, ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದರು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೂ ಬಂಗಲೆಗಳ ನವೀಕರಣಕ್ಕೆ ದುಬಾರಿ ವೆಚ್ಚ ಮಾಡಲಾಗಿತ್ತು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಮೈತ್ರಿ ಸರ್ಕಾರದ ಅವಧಿಯಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಕಾರಣಕ್ಕೆ ಕುಮಾರಸ್ವಾಮಿ ಅವರು, ಸಚಿವರ ನಿವಾಸಗಳ ಹಾಗೂ ಸರ್ಕಾರಿ ಕಚೇರಿಗಳ ನವೀಕರಣಕ್ಕೂ ಅನಗತ್ಯ ವೆಚ್ಚ ಮಾಡಬಾರದು ಎಂದು ನಿರ್ದೇಶನ ನೀಡಿದ್ದಾರೆ.

ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ₹1.14 ಲಕ್ಷ ಕೋಟಿ ಬೇಕು ಎಂದು ಮುಖ್ಯಮಂತ್ರಿ ಅವರೇ ಅಂದಾಜಿಸಿದ್ದಾರೆ. ನೀರಾವರಿಗೆ ₹1.5 ಲಕ್ಷ ಕೋಟಿ ಮೀಸಲಿಡುವುದಾಗಿ ಜೆಡಿಎಸ್‌ ‍ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಇದಕ್ಕೆಲ್ಲ ಹಣ ಹೊಂದಿಸುವುದು ಮೈತ್ರಿ ಸರ್ಕಾರಕ್ಕೆ ಸವಾಲಾಗಿದೆ. ಅನಗತ್ಯ ವೆಚ್ಚಗಳನ್ನೂ ಮಾಡುವುದಿಲ್ಲ ಎಂದೂ ವಿಶ್ವಾಸಮತ ಗೆದ್ದ ಬೆನ್ನಲ್ಲೇ ಹೇಳಿದ್ದರು. ಈಗ ಅದನ್ನು ಕಾರ್ಯರೂಪಕ್ಕೆ ಇಳಿಸಲು ಮುಂದಾಗಿದ್ದಾರೆ.

ರಾಜ್ಯದಲ್ಲಿ ‍ಅತಿವೃಷ್ಟಿ ಕಾಣಿಸಿಕೊಂಡ ಕಾರಣಕ್ಕೆ 2009ರಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅನೇಕ ಮಿತವ್ಯಯದ ಕ್ರಮಗಳನ್ನು ಕೈಗೊಂಡಿತ್ತು. ಹೊಸ ಹುದ್ದೆಗಳನ್ನು ಸೃಜಿಸುವುದಕ್ಕೆ, ಹಳೆಯ ವಾಹನಗಳ ಬದಲಾವಣೆ, ಯೋಜನೇತರ ವೆಚ್ಚವನ್ನು ಶೇ 10ರಷ್ಟು ಕಡಿಮೆ ಮಾಡಲು ಹಾಗೂ ಪಂಚತಾರಾ ಹೋಟೆಲ್‌ಗಳಲ್ಲಿ ಸಭೆಗಳನ್ನು ನಡೆಸದಂತೆ ನಿರ್ದೇಶನ ನೀಡಿತ್ತು. ಒಂಬತ್ತು ವರ್ಷಗಳ ಬಳಿಕ ಮೈತ್ರಿ ಸರ್ಕಾರ ಅನಗತ್ಯ ವೆಚ್ಚಗಳಿಗೆ ಕಡಿವಾಣ ಆಸಕ್ತಿ ತೋರಿದೆ.

ಬೆಂಗಾವಲು ಪಡೆಗೂ ಕತ್ತರಿ ಪ್ರಯೋಗ

ಮುಖ್ಯಮಂತ್ರಿ ಅವರ ಬೆಂಗಾವಲು ಪಡೆಗೂ ಕತ್ತರಿ ಪ್ರಯೋಗ ಮಾಡಲು ಕುಮಾರಸ್ವಾಮಿ ಆಸಕ್ತಿ ತೋರಿದ್ದಾರೆ.

ಬೆಂಗಾವಲು ಪಡೆಯಲ್ಲಿ 10ಕ್ಕೂ ಅಧಿಕ ವಾಹನಗಳಿವೆ. ಇದರಿಂದ ದುಂದುವೆಚ್ಚ ಉಂಟಾಗುತ್ತಿದೆ ಹಾಗೂ ಸಾರ್ವಜನಿಕರಿಗೂ ಕಿರಿಕಿರಿ ಉಂಟಾಗುತ್ತಿದೆ. ವಾಹನಗಳ ಹಾಗೂ ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡುವ ಬಗ್ಗೆ ಪರಿಶೀಲನೆ ನಡೆಸಿ ಎಂದು ಡಿಜಿಪಿ ಅವರಿಗೆ ಸೂಚನೆ ನೀಡಿದ್ದಾರೆ. ಸೋಮವಾರ ಈ ಬಗ್ಗೆ ವರದಿ ನೀಡುವುದಾಗಿ ಡಿಜಿಪಿ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

You missed