ಬೆಂಗಳೂರು, ಮೇ 30-ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಪುಟ ವಿಸ್ತರಣೆಯಂತಹ ಮಹತ್ವದ ವಿಚಾರಗಳ ಕುರಿತಂತೆ ಇಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶಾಸಕರಿಗೆ ಮಾರ್ಗದರ್ಶನ ಮಾಡಿದರು.  ನಗರದಲ್ಲಿಂದು ಜೆಡಿಎಸ್ ಶಾಸಕರ ಸಭೆ ಕರೆದು ಚರ್ಚಿಸಿದ ಅವರು, ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸಂಪುಟ ವಿಸ್ತರಣೆ, ಖಾತೆ ಹಂಚಿಕೆ, ಪ್ರಚಲಿತ ರಾಜಕೀಯ ವಿದ್ಯಮಾನ, ಇನ್ನಿತರ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಸಂದರ್ಭ ಒದಗಿ ಬಂದಿದ್ದು, ಎಲ್ಲರೂ ಒಟ್ಟಾಗಿ ಮುನ್ನಡೆಯಬೇಕಿದೆ ಎಂದು ಸೂಚಿಸಿದರು.

ಶಾಸಕರು ಒಗ್ಗಟ್ಟಿನಿಂದ ಇರಬೇಕು. ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರು ಯಾವ ರೀತಿ ನಡೆದುಕೊಳ್ಳಬೇಕು, ಸಮಸ್ಯೆಗಳು ಎದುರಾದಾಗಲೂ ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕು, ಯಾವುದೇ ರೀತಿಯ ಒಡಕಿಗೂ ದಾರಿ ಮಾಡಿಕೊಡಬಾರದು ಎಂಬ ವಿಚಾರವಾಗಿ ಮಾರ್ಗದರ್ಶನ ನೀಡಿದರು.