ಬೆಂಗಳೂರು: ಶಿರಾ ಶಾಸಕ ಹಾಗೂ ಜೆಡಿಎಸ್ ಹಿರಿಯ ಮುಖಂಡ ಬಿ.ಸತ್ಯನಾರಾಯಣ (69) ಅವರು ಮಂಗಳವಾರ ರಾತ್ರಿ ನಿಧನರಾದರು.

ಸತ್ಯನಾರಾಯಣ ಅವರು ಬಹುಕಾಲದಿಂದ ಲಿವರ್‌ ಸಮಸ್ಯೆಯಿಂದ ಬಳಲುತ್ತಿದ್ದರು. ಈಚೆಗೆ ಬಹು ಅಂಗಾಂಗ ವೈಫಲ್ಯದಿಂದಾಗಿ ಅವರ ದೇಹಸ್ಥಿತಿ ವಿಷಮಿಸಿತ್ತು, ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ  ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಅವರು ಇಂದು ರಾತ್ರಿ 10:45ಕ್ಕೆ ನಿಧನರಾಗಿದ್ದಾಗಿ ಆಸ್ಪತ್ರೆಯ ನಿರ್ದೇಶಕ ಡಾ.ಮನೀಶ್ ರೈ ತಿಳಿಸಿದ್ದಾರೆ.

ಇತ್ತೀಚೆಗೆ ಶಿರಾ ತಾಲ್ಲೂಕು ಭುವನಹಳ್ಳಿಯ ತಮ್ಮ ತೋಟದಲ್ಲಿ ಕೊಳವೆ ಬಾವಿ ಕೊರೆಸಿದ್ದರು. ಈ ಸಂದರ್ಭದಲ್ಲಿ ಡಸ್ಟ್ ಅಲರ್ಜಿ ಆಗಿತ್ತು. ಹಾಗಾಗಿ ಅವರನ್ನು ಚಿಕಿತ್ಸೆಗೆಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಜೆಡಿಎಸ್‌ನಿಂದ ಸ್ಪರ್ಧಿಸಿ 3 ಬಾರಿ ಶಾಸಕರಾಗಿದ್ದರು. 2 ಬಾರಿ ಸಚಿವರಾಗಿದ್ದರು. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷರಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಮಣಿಸಿ ಶಾಸಕರಾಗಿದ್ದರು. ಇವರಿಗೆ ಐವರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ