ಬೆಂಗಳೂರು: ‘ಸಣ್ಣ ಕೈಗಾರಿಕಾ ಕ್ಷೇತ್ರಕ್ಕೆ ಸೇರಿದವರೊಬ್ಬರನ್ನು ನಮ್ಮ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡುತ್ತೇವೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು (ಕಾಸಿಯಾ) ನಗರದಲ್ಲಿ ಬುಧವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು.

‘ಮುಂದಿನ ಬಾರಿ ನನ್ನ ನೇತೃತ್ವದಲ್ಲೇ ಸರ್ಕಾರ ರಚನೆಯಾಗಲಿದೆ. ಆಗ, ‘ಇನ್‌ಸ್ಪೆಕ್ಟರ್‌ ರಾಜ್‌’ ಪದ್ಧತಿ ತೆಗೆದು ಹಾಕಿ, ಕೈಗಾರಿಕಾ ಸ್ನೇಹಿ ನೀತಿ ಜಾರಿಗೆ ತರುತ್ತೇನೆ’ ಎಂದರು.

‘ದೊಡ್ಡ ಕೈಗಾರಿಕೆಗಳಿಂದ ಹೆಚ್ಚಿನ ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ. ಹೆಚ್ಚು ಉದ್ಯೋಗ ಸೃಷ್ಟಿಸುವ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ರಾಜ್ಯ ಹಣಕಾಸು ನಿಗಮಕ್ಕೆ ₹ 500 ಕೋಟಿ ಅನುದಾನ ಒದಗಿಸುತ್ತೇನೆ’ ಎಂದು ಆಶ್ವಾಸನೆ ನೀಡಿದರು.

‘ನಗರದಲ್ಲಿ ಸಂಚಾರ ದಟ್ಟಣೆ ಮಿತಿಮೀರಿದೆ. ಬಳ್ಳಾರಿ ರಸ್ತೆಯ ಎಸ್ಟೀಮ್‌ ಮಾಲ್‌ನಿಂದ ಹೆಬ್ಬಾಳ ಮೇಲ್ಸೇತುವೆ ತಲುಪಲು ಒಂದು ಗಂಟೆ ಬೇಕು. ನನಗೆ ಸಾಕಷ್ಟು ಬಾರಿ ಈ ಅನುಭವ ಆಗಿದೆ. ನೀರಿನ ಸಮಸ್ಯೆಯೂ ಉಲ್ಬಣಿಸುತ್ತಿದೆ. ಈ ಸಮಸ್ಯೆಗಳ ಪರಿಹಾರಕ್ಕೆ ನೀಲನಕ್ಷೆ ರೂಪಿಸಲು ತಜ್ಞರಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.

‘ಮುಖ್ಯಮಂತ್ರಿಯಾದ ಬಳಿಕ ತಿಂಗಳಿಗೊಮ್ಮೆ ನಿಮ್ಮನ್ನು ವಿಧಾನಸೌಧಕ್ಕೆ ಕರೆಸಿಕೊಂಡು ನಾನೇ ನಿಮಗೆ ಕಾಟ ಕೊಡುವೆ. ನಿಮ್ಮ ಕ್ಷೇತ್ರದ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುತ್ತೇನೆ’ ಎಂದು ಉದ್ಯಮಿಗಳಿಗೆ ಭರವಸೆ ನೀಡಿದರು.

ನಾಲ್ಕು ವರ್ಷಗಳಲ್ಲಿ ಇಂಧನ ಇಲಾಖೆ ಕೇವಲ 600 ಮೆಗಾ ವಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡಿದೆ. ಆದರೆ, 2,000 ಮೆಗಾ ವಾಟ್ ಸೌರ ವಿದ್ಯುತ್ ಉತ್ಪಾದಿಸಿರುವುದಾಗಿ ಮಾಧ್ಯಮಗಳಿಗೆ ಸುಳ್ಳು ಜಾಹೀರಾತು ನೀಡಿದೆ ಎಂದು ಆರೋಪಿಸಿದರು.

ಕುಮಾರಸ್ವಾಮಿ ನೀಡಿದ ಭರವಸೆಗಳು
* ಅರ್ಜಿ ಸಲ್ಲಿಸಿದ ಬಳಿಕ ಕಚೇರಿಗಳಿಗೆ ಅಲೆಸುವ ಪದ್ಧತಿಗೆ ಕಡಿವಾಣ. ಅರ್ಜಿದಾರರ ಮನೆಗೆ ಅರ್ಜಿಯ ಅನುಪಾಲನಾ ಪತ್ರ ರವಾನೆ
* ನಗರದ ನಾಲ್ಕು ದಿಕ್ಕುಗಳಲ್ಲಿ ಕೈಗಾರಿಕಾ ಟೌನ್‌ಶಿಪ್ ಸ್ಥಾಪನೆ
* ಕೈಗಾರಿಕಾ ವಸಾಹತುಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ₹ 500 ಕೋಟಿ ಮೀಸಲು
* ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಅರ್ಜಿಗಳ ಶೀಘ್ರ ವಿಲೇವಾರಿ
* ಅತಿಸಣ್ಣ ಹಾಗೂ ಸಣ್ಣ ಕೈಗಾರಿಕೆಗಳ ಉದ್ದಿಮೆದಾರರಿಗೆ ವಿಮೆ ಸೌಲಭ್ಯ ಜಾರಿ
* ಉದ್ದಿಮೆದಾರರ ಪ್ರೋತ್ಸಾಹಕ್ಕೆ ವಿಶೇಷ ಯೋಜನೆ ಜಾರಿ
* ಕೌಶಲ ವಿಶ್ವವಿದ್ಯಾಲಯ ಸ್ಥಾಪನೆ
* ಕಾಸಿಯಾ ಸೆಂಟರ್ ಆಫ್ ಎಕ್ಸಲೆನ್ಸ್ ಆ್ಯಂಡ್ ಇನೋವೇಷನ್ ಯೋಜನೆ ಜಾರಿ. ಇದಕ್ಕಾಗಿ ₹ 5 ಕೋಟಿ ಮೀಸಲು
* ಮಹಿಳಾ ಉದ್ಯಮಿಗಳಿಗೆ ₹ 2 ಕೋಟಿವರೆಗೆ ಶೇ 4 ರ ಬಡ್ಡಿ ದರದಲ್ಲಿ ಸಾಲ

‘50 ಲಕ್ಷ ಕೊಳೆಗೇರಿ ನಿವಾಸಿಗಳಿಗೆ ಹಕ್ಕು ಪತ್ರ’
ಬೆಂಗಳೂರು: 
ಪಕ್ಷ ಅಧಿಕಾರಕ್ಕೆ ಬಂದರೆ ನಗರದ 50 ಲಕ್ಷ ಕೊಳೆಗೇರಿ ನಿವಾಸಿಗಳಿಗೆ ಹಕ್ಕು ಪತ್ರ ನೀಡುವುದಾಗಿಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಇದಕ್ಕಾಗಿ ನೀಲ ನಕ್ಷೆ ರೂಪಿಸಲಾಗಿದೆ ಎಂದು ಬುಧವಾರ ವಿಕಾಸಪರ್ವದ ಪಾದಯಾತ್ರೆಗೂ ಮುನ್ನ ತಿಳಿಸಿದರು.

‘ಬಿಜೆಪಿ ಮತ್ತು ಕಾಂಗ್ರೆಸ್‌ನವರು ನಗರದ ಕೆರೆಕಟ್ಟೆಗಳನ್ನು ನುಂಗಿ ಹಾಕಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಈ ಎರಡೂ ಪಕ್ಷಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಹಿಂದೆ ನಗರಕ್ಕೆ ಜೆಡಿಎಸ್‌ ನೀಡಿದ ಕೊಡುಗೆಗಳ ಬಗ್ಗೆಯೂ ಮಾಹಿತಿ ನೀಡಬೇಕು’ ಎಂದು ಕಾರ್ಯಕರ್ತರಿಗೆ ಸೂಚಿಸಿರುವುದಾಗಿ ಹೇಳಿದರು.

‘ಈ ಚುನಾವಣೆ ನಮಗೆ ಸತ್ವ ಪರೀಕ್ಷೆ. ಇದರಲ್ಲಿ ಶ್ರಮವಹಿಸಿ ಗೆಲ್ಲಲೇಬೇಕು. ಬೆಂಗಳೂರು ನಾಗರೀಕರಿಗೆ ನೀಡಿದ ಕೊಡುಗೆಗಳನ್ನು ಜನರಿಗೆ ತಿಳಿಸಬೇಕು. ರೋಡ್‌ ಶೋ ಹೆಸರಿನಲ್ಲಿ ಜನರಿಗೆ ತೊಂದರೆ ಕೊಡುವುದು ಬೇಡ. ಮನೆ–ಮನೆಗೆ ತೆರಳಿ ಜೆಡಿಎಸ್‌ ಕೆಲಸಗಳನ್ನು ತಲುಪಿಸುವ ಕೆಲಸ ಮಾಡಿ’ ಎಂದೂ ಅವರು ಕಾರ್ಯಕರ್ತರಿಗೆ ತಿಳಿಸಿದರು.

‘ಜೆಡಿಎಸ್‌ ನಗರಕ್ಕೆ ಏನು ಮಾಡಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬಿಬಿಪಿಎಂ ಸೃಷ್ಟಿ ಮಾಡಿದ್ದೇ ನಮ್ಮ ಅವಧಿಯಲ್ಲಿ. ಹಲವು ಹೊಸ ಬಡಾವಣೆಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಿದ್ದೇವೆ. ₹ 400 ಕೋಟಿ ವೆಚ್ಚದಲ್ಲಿ ಟಿಟಿಎಂಸಿ ನಿಲ್ದಾಣಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದೂ ನಮ್ಮ ಅವಧಿಯಲ್ಲಿ’ ಎಂದರು.