ಬೆಂಗಳೂರು:‘ಈ ಬಾರಿ ನನ್ನ ಇಮೇಜನ್ನು ವೋಟ್ ಆಗಿ ಪರಿವರ್ತನೆ ಮಾಡಿಕೊಳ್ಳುವ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಜೆಡಿಎಸ್ ಅಧಿಕಾರ ಹಿಡಿಯು ವುದು ನೂರಕ್ಕೆ ಇನ್ನೂರರಷ್ಟು ಗ್ಯಾರಂಟಿ, ಈ ವಿಶ್ವಾಸ ದಿಂದಲೇ ರಾಜ್ಯದ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧವಾಗಿದೆ’ ಇದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಅಚಲ ವಿಶ್ವಾಸ. ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಬುಧವಾರ ಹಮ್ಮಿ ಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಚುನಾವಣೆ ಸಿದ್ಧತೆ, ಭವಿಷ್ಯದ ಆದ್ಯತೆಗಳ ಕುರಿತ ಕನಸನ್ನು ತೆರೆದಿಟ್ಟರು.

ಎರಡು ಕಡೆ ಸ್ಪರ್ಧೆ ಕಾರ್ಯಕರ್ತರ ಬಯಕೆ: ರಾಮನಗರ ಹಾಗೂ ಚನ್ನಪಟ್ಟಣ ಎರಡೂ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ನನಗೆ ಅನಿವಾರ್ಯವಾಗಿರಲಿಲ್ಲ. ಕಾರ್ಯಕರ್ತರಿಗೆ ಅನಿವಾರ್ಯವಾಗಿತ್ತು. ನನ್ನ ಮನಸ್ಸಿನಲ್ಲಿ ಇದ್ದುದು ರಾಮನಗರ ಒಂದೇ. ನಮ್ಮ ಕುಟುಂಬದವರನ್ನು ಸ್ಪರ್ಧಿಸಲು ಸಜ್ಜಾಗುವಂತೆ ಹೇಳಿದ್ದೆ. ಆದರೆ ಅವರು ಟೇಕ್​ಆಫ್ ಆಗಲಿಲ್ಲ. ಅಲ್ಲದೆ, ಚನ್ನಪಟ್ಟಣದ ಕಾರ್ಯಕರ್ತರು ಅನಿತಾ ಕುಮಾರಸ್ವಾಮಿ ಸ್ಪರ್ಧಿಸದಿದ್ದರೆ ನೀವೇ ಸ್ಪರ್ಧಿಸಿ ಎಂದು ಒತ್ತಡ ಹೇರಿದ್ದರಿಂದ ನನ್ನ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಸ್ಪರ್ಧಿಸುತ್ತಿದ್ದೇನೆ. ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎಂದು ಇನ್ನು ಮುಂದೆ ಯಾರೂ ಹೇಳಲು ಆಗುವುದಿಲ್ಲ. ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧೆ ಎಂದು ಒಂದು ವರ್ಷದ ಹಿಂದೆಯೇ ಹೇಳಿದ್ದೆ. ಈಗಲೂ ಅದಕ್ಕೆ ಬದ್ಧ. ಆ ಕಾರಣಕ್ಕಾಗಿಯೇ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕಿದೆ ಎಂದು ಸಮರ್ಥಿಸಿಕೊಂಡರು.

ವಾರದಲ್ಲಿ ಪ್ರಣಾಳಿಕೆ: ಈಗಾಗಲೇ ನಾನು ಪಕ್ಷದ ಪ್ರಣಾಳಿಕೆ ಅಂಶಗಳನ್ನು ಜನರ ಎದುರು ಹೇಳುತ್ತಲೇ ಬಂದಿದ್ದೇನೆ. ಮುಂದಿನ ಒಂದು ವಾರದ ಒಳಗೆ ಸಮಗ್ರ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದಲಿತ ಸಿಎಂ: ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತರನ್ನು ಸಿಎಂ ಮಾಡುತ್ತೇವೆಂದು ಹೇಳಲಿ ಎಂದು ಸಿಎಂ ಈಗ ಟಾಂಗ್ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರನ್ನು ದೆಹಲಿಗೆ ಕಳುಹಿಸಿದ್ದಾರೆ. ಪರಮೇಶ್ವರ್ ಗೋಗರೆದರೂ ಡಿಸಿಎಂ ಮಾಡಲಿಲ್ಲ. ಶ್ರೀನಿವಾಸ್ ಪ್ರಸಾದ್ ಅವರನ್ನು ಮೂಲೆಗುಂಪು ಮಾಡಲಿಲ್ಲವೆ ಎಂದು ಪ್ರಶ್ನಿಸಿದರು.

ಉತ್ತರದಲ್ಲಿ ಶಕ್ತಿ ಪ್ರದರ್ಶನ: ಹುಬ್ಬಳ್ಳಿ-ಧಾರವಾಡಗಳಲ್ಲಿ 1-2, ಬೆಳಗಾವಿ ಜಿಲ್ಲೆಯಲ್ಲಿ 3, ಕಲಬುರಗಿ 3-4, ರಾಯಚೂರು 7ರಲ್ಲಿ ಐದು ಸೀಟು ಗೆದ್ದು ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಶಕ್ತಿಯೇ ಇಲ್ಲ ಎನ್ನುವವರಿಗೆ ನಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತೇವೆ ಎಂದು ಎಚ್ಡಿಕೆ ಸವಾಲು ಹಾಕಿದರು.

ಬಾದಾಮಿಯಲ್ಲಿ ಬಿಗ್​ಫೈಟ್: ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿದರೂ ಜೆಡಿಎಸ್​ಗೂ ಅವರಿಗೂ ಫೈಟ್ ಆಗುತ್ತದೆ. ಬಿಜೆಪಿ ಅಲ್ಲಿ ಲೆಕ್ಕಕ್ಕೇ ಬರುವುದಿಲ್ಲ. 1 ವರ್ಷದಿಂದ ನಮ್ಮ ಅಭ್ಯರ್ಥಿ ಅಲ್ಲಿ ಫೀಲ್ಡ್​ನಲ್ಲಿದ್ದಾರೆ. ತೇರದಾಳದಲ್ಲಿ ನಮ್ಮ ಅಭ್ಯರ್ಥಿ ನಂಬರ್ 1 ಸ್ಥಾನದಲ್ಲಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಟ್ಟಿ ಬಿಡುಗಡೆಯಾದ ತರುವಾಯ ನಮ್ಮ ಪಕ್ಷಕ್ಕೆ ಇನ್ನೂ 10-15 ಸೀಟು ಲಾಭವಾಗಿದೆ ಎಂದು ಅಭಿಪ್ರಾಯಪಟ್ಟರು.

ಬೆಂಬಲದಿಂದ ಅನುಕೂಲ

ಎಐಎಂಐಎಂ ಮುಖ್ಯಸ್ಥ ಓವೈಸಿ ಬೆಂಬಲದಿಂದ ಎಲ್ಲ ಮುಸ್ಲಿಂ ವೋಟು ಜೆಡಿಎಸ್​ಗೆ ಬರುತ್ತವೆ ಎಂಬ ಭ್ರಮೆಯಲ್ಲಿ ನಾನಿಲ್ಲ. ಫೋಟೋ ಫಿನಿಶಿಂಗ್ ಫಲಿತಾಂಶ ಬರುವ ಕ್ಷೇತ್ರದಲ್ಲಿ ಸ್ವಲ್ಪ ಸಹಾಯವಾಗಬಹುದು. ಆದರೆ, ಮಾಯಾವತಿ ಬೆಂಬಲದಿಂದ ಪಕ್ಷಕ್ಕೆ ಹೆಚ್ಚು ಶಕ್ತಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮದು ಟಾರ್ಗೆಟ್ 113

ಅನೇಕ ಅಭ್ಯರ್ಥಿಗಳು ಕಳೆದೊಂದು ವರ್ಷದಿಂದ ಕ್ಷೇತ್ರದಲ್ಲಿ ಮತದಾರರ ಸಂಪರ್ಕದಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದಾರೆ. 2 ತಿಂಗಳ ಹಿಂದೆಯೇ ನಾವು 126 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದೇವೆ. ಯಾರಿಗೂ ಟಿಕೆಟ್​ಗಾಗಿ ಅಲೆದಾಡುವ ಸ್ಥಿತಿಯಿಲ್ಲ. ನಾನು 140-150 ಟಾರ್ಗೆಟ್ ಇಟ್ಟುಕೊಂಡಿಲ್ಲ. ಮ್ಯಾಜಿಕ್ ನಂಬರ್ 113 ನನ್ನ ಗುರಿ ಎಂದರು.

ಸಾಲಮನ್ನಾ ಹೇಗೆ

ಸಂಪನ್ಮೂಲ ಕ್ರೋಡೀಕರಣದ ಲೆಕ್ಕಾಚಾರ ಹಾಕಿಯೇ ಸಾಲಮನ್ನಾ ಘೋಷಿಸಿದ್ದೇನೆ. ತೆಲಂಗಾಣದಲ್ಲಿ 40 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದಾರೆ. ಅಲ್ಲಿ ರೈತರ ಸಾಲದ ಮೇಲಿನ ಬಡ್ಡಿಯಷ್ಟೇ ಕಟ್ಟಿದ್ದಾರೆ. ಉಳಿದ ಅಸಲು ಪಾವತಿಗೆ ರಿಸರ್ವ್ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್​ಗಳಿಗೆ 4 ಕಂತುಗಳಲ್ಲಿ ಕಟ್ಟುವ ಭರವಸೆಯನ್ನು ಸರ್ಕಾರ ನೀಡಿದೆ. ಅದೇ ರೀತಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕಂತು ರೂಪದಲ್ಲಿ ಸಾಲವನ್ನು ಪಾವತಿಸುತ್ತೇವೆ; ರೈತರಿಗೆ ಬ್ಯಾಂಕ್​ನಿಂದ ಯಾವುದೇ ರೀತಿಯ ನೋಟಿಸ್ ಜಾರಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಎಚ್ಡಿಕೆ ತಿಳಿಸಿದರು.

ನಾಯಕರನ್ನು ರೂಪಿಸುವ ಕಾರ್ಖಾನೆ ಜೆಡಿಎಸ್

<<ರಾಜ್ಯದ ಜನರ ಬಗೆಗಿನ ನನ್ನ ಬದ್ಧತೆ ಪ್ರಶ್ನಿಸುವಂತಿಲ್ಲ | ಫೋನ್ ಇನ್ ಕಾರ್ಯಕ್ರಮದಲ್ಲಿ ಎಚ್ಡಿಕೆ ಸ್ಪಷ್ಟ ಉತ್ತರ>>

ಜೆಡಿಎಸ್ ಪಕ್ಷ ನಾಯಕರನ್ನು ತಯಾರು ಮಾಡುತ್ತದೆ, ಆಮೇಲೆ ಅಂಥವರು ರಾಷ್ಟ್ರೀಯ ಪಕ್ಷಗಳಿಗೆ ಹೋಗಿ ಅಧಿಕಾರ ನಡೆಸುತ್ತಾರೆ. ಹಾಗಂತ ನಮಗೇನೂ ವ್ಯಥೆ ಇಲ್ಲ, ಇನ್ನಷ್ಟು ನಾಯಕರನ್ನು ಈ ಚುನಾವಣೆಯಲ್ಲಿ ಹುಟ್ಟು ಹಾಕುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 247 ಸುದ್ದಿವಾಹಿನಿ ಜಂಟಿಯಾಗಿ ಏರ್ಪಡಿಸಿದ್ದ ರಾಜ್ಯದ ಮತದಾರರೊಂದಿಗಿನ ಫೋನ್ ಇನ್ ನೇರ ಮಾತುಕತೆ ಕಾರ್ಯಕ್ರಮದಲ್ಲಿ ಬುಧವಾರ ಪಾಲ್ಗೊಂಡು ಮಾತನಾಡಿದ ಅವರು, ಈ ಬಾರಿ ಕೇವಲ ಹಳೆ ಮೈಸೂರು ಭಾಗ ಮಾತ್ರವಲ್ಲದೆ ಉತ್ತರ ಕರ್ನಾಟಕದಾದ್ಯಂತ ಅತಿ ಹೆಚ್ಚು ಕ್ಷೇತ್ರಗಳನ್ನು ಜೆಡಿಎಸ್ ಗೆಲ್ಲಲಿದೆ ಎಂದು ಹೇಳಿದರು.

ನಮ್ಮ ಕುಟುಂಬದಲ್ಲಿ ಒಡಕಿದೆ ಎಂದು ಎಲ್ಲರೂ ಮಾತನಾಡುತ್ತಾರೆ. ನಾನು ಹಿಂದೆಯೇ ಹೇಳಿದಂತೆ ನಮ್ಮ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸುತ್ತಿದ್ದೇವೆ. ಈಗ ಎಲ್ಲ ಪಕ್ಷಗಳಲ್ಲೂ ಅಪ್ಪ-ಮಕ್ಕಳು ಸ್ಪರ್ಧಿಸುತ್ತಿರುವುದರಿಂದ ಅವರೇ ಬಾಯಿ ಮುಚ್ಚಿದ್ದಾರೆ. ಕೆಲವರು ವಿಕ್ಸ್ ಹಚ್ಚಿಕೊಂಡು ಕಣ್ಣೀರು ಹಾಕುತ್ತೇನೆ ಎಂದಿದ್ದಾರೆ. ಆದರೆ ರಾಜ್ಯದ ಜನತೆ ಬಗೆಗಿರುವ ನನ್ನ ಅಂತಃಕರಣದ ಬದ್ಧತೆಯನ್ನು ಯಾರು ಪ್ರಶ್ನಿಸುವಂತಿಲ್ಲ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.

ರಾಜ್ಯದಲ್ಲಿ ಜಲಸಂಪನ್ಮೂಲದ ಸದ್ಬಳಕೆ ಆಗಬೇಕಿದೆ. ಅದಕ್ಕಾಗಿ ನದಿಗಳ ಜೋಡಣೆ ಅತ್ಯಂತ ಅವಶ್ಯ. ಆದರೆ ದೆಹಲಿಯಲ್ಲಿ ಇದರ ಬಗೆಗೆ ಚರ್ಚೆ ಮಾಡುತ್ತಾರೆಯೇ ವಿನಾ ಯೋಜನೆ ಅನುಷ್ಠಾನಗೊಳ್ಳುತ್ತಿಲ್ಲ. ದೇಶದಲ್ಲಿ 70 ಸಾವಿರ ಟಿಎಂಸಿ ನೀರು ಲಭ್ಯವಿದ್ದು, ಆ ಪೈಕಿ 30 ಸಾವಿರ ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗುತ್ತದೆ. ಈ ಬಗ್ಗೆ ಗಂಭೀರ ಚಿಂತನೆ ಹಾಗೂ ಆಂದೋಲನವೇ ನಡೆಯಬೇಕಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಬೆಳಗ್ಗೆಯಿಂದಲೇ ಕರೆಗಳ ಸುರಿಮಳೆ!

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಫೋನ್-ಇನ್ ನೇರ ಮಾತುಕತೆ ಕಾರ್ಯಕ್ರಮ ಮಧ್ಯಾಹ್ನ 12.30ಕ್ಕೆ ಆರಂಭಗೊಳ್ಳಬೇಕಿತ್ತು. ಮಡಿಕೇರಿ ಜಿಲ್ಲೆಯ ಪ್ರವಾಸದಲ್ಲಿದ್ದ ಅವರು ದಿಗ್ವಿಜಯ ನ್ಯೂಸ್ ಚಾನೆಲ್ ಸ್ಟುಡಿಯೋ ತಲುಪಿ ಜನರೆದುರು ನೇರ ಪ್ರಸಾರಕ್ಕೆ ಕುಳಿತಾಗ ಮಧ್ಯಾಹ್ನ 2.30 ಆಗಿತ್ತು. ಅವರೊಂದಿಗೆ ಮಾತನಾಡಲು ಬೆಳಗ್ಗೆ ಯಿಂದಲೇ ಕರೆಗಳು ಬರಲು ಆರಂಭಿಸಿದ್ದವು. ಬೆಳಗ್ಗೆಯಿಂದ ಸಂಜೆ 4 ಗಂಟೆವರೆಗೆ ಸಾವಿರಾರು ಜನರು ದೂರವಾಣಿ ಕರೆ ಮಾಡಿ, ಮಾತನಾಡಲು ಪ್ರಯತ್ನಿಸಿದರು. ಆದರೆ ಮಧ್ಯಾಹ್ನ 2.30ರಿಂದ 3.30ರ ಅವಧಿಯ ನೇರ ಪ್ರಸಾರದಲ್ಲಿ ರಾಜ್ಯದ ನಾನಾ ಭಾಗದ 22 ಜನರು ಕುಮಾರಸ್ವಾಮಿ ಅವರೊಂದಿಗೆ ನೇರವಾಗಿ ದೂರವಾಣಿಯಲ್ಲಿ ಮಾತನಾಡಿ, ಪ್ರಶ್ನೆಗಳನ್ನು ಕೇಳಿದರು.

ಮಾತುಕತೆ ನಡುವೆಯೂ ರಾಜಕೀಯ ಚಟುವಟಿಕೆ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಿಗ್ವಿಜಯ ನ್ಯೂಸ್ ಚಾನೆಲ್ ನೇರ ಪ್ರಸಾರದಲ್ಲಿ ಪಾಲ್ಗೊಳ್ಳುತ್ತಿರುವ ಮಾಹಿತಿ ಪಡೆದ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಬೆಳಗ್ಗೆಯಿಂದಲೇ ಅವರನ್ನು ಭೇಟಿ ಮಾಡಲು ಕಚೇರಿಗೇ ಬಂದಿದ್ದರು. ಕುಮಾರಸ್ವಾಮಿ ಅಲ್ಲಿಂದ ನೇರವಾಗಿ ದಿಗ್ವಿಜಯ ನ್ಯೂಸ್ ಕಚೇರಿಗೆ ಬಂದಾಗ ಮಧ್ಯಾಹ್ನವಾಗಿತ್ತು. ಜ್ವರದಿಂದ ಬಳಲುತ್ತಿದ್ದ ಕುಮಾರಸ್ವಾಮಿ ಅನಾರೋಗ್ಯ ಲೆಕ್ಕಿಸದೇ ನೇರಪ್ರಸಾರದಲ್ಲಿ ಭಾಗಿಯಾದರು. ನಂತರ ವಿಜಯವಾಣಿ ಸಂಪಾದಕೀಯ ಬಳಗದೊಂದಿಗೆ ರಾಜಕೀಯ ವಿದ್ಯಮಾನಗಳ ಕುರಿತು ರ್ಚಚಿಸಿದರು. ಬಳಿಕ ಸೊರಬ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಸೇರಿದಂತೆ ನೆರೆದಿದ್ದ ಹಲವಾರು ಮುಖಂಡರು ಕಾರ್ಯಕರ್ತರನ್ನು ಭೇಟಿ ಮಾಡಿದರು. ಈ ನಡುವೆಯೇ ದಿಗ್ವಿಜಯ ನ್ಯೂಸ್ ಕಚೇರಿ ಎದುರೇ ಮಾಜಿ ಉಪ ಮೇಯರ್ ಪುಟ್ಟರಾಜು ಜೆಡಿಎಸ್​ಗೆ ಸೇರ್ಪಡೆಗೊಂಡರು. ತರೀಕೆರೆ ಶಾಸಕ ಶ್ರೀನಿವಾಸ್ ಮಾತುಕತೆ ನಡೆಸಿದರು.

ಮುನಿರತ್ನ ಜತೆ ರಾಜಿ ಇಲ್ಲ

ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ವಿಚಾರದಲ್ಲಿ ರಾಜಿಯೇ ಇಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಮುನಿರತ್ನ ತಯಾರಿಸುತ್ತಿರುವ ಸಿನಿಮಾದಲ್ಲಿ ನನ್ನ ಪುತ್ರ ನಿಖಿಲ್ ಮಾತ್ರವಲ್ಲದೆ ಬೇರೆ ಪಕ್ಷಗಳ ಹಲವಾರು ನಟರು ನಟಿಸಿದ್ದಾರೆ. ನನ್ನ ಪುತ್ರನ ಕಾರಣಕ್ಕಾಗಿ ರಾಜಿ ಮಾಡಿಕೊಳ್ಳುವ ರಾಜಕಾರಣ ನಾನು ಮಾಡುವುದಿಲ್ಲ ಎಂದರು.

ಲ್ಯಾಪ್​ಟಾಪ್, ಬಸ್​ಪಾಸ್​ಗಳನ್ನು ಪರಿಶಿಷ್ಟ ಜಾತಿ/ ಪಂಗಡದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಆದರೆ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳಲ್ಲೂ ಬಡವರಿದ್ದು, ಅವರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಈ ತಾರತಮ್ಯಕ್ಕೆ ಕೊನೆ ಯಾವಾಗ?

|ಬಸವರಾಜ್ ಸಿಂಧನೂರು

-ಮೀಸಲಾತಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿರುವುದು ಕಂಡುಬರುತ್ತಿದೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಸೌಲಭ್ಯ ಹಂಚಿಕೆಯಲ್ಲಾಗುತ್ತಿರುವ ತಾರತಮ್ಯ ನಿವಾರಿಸಲಾಗುವುದು.

ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರು ಏನನ್ನು ನಿರೀಕ್ಷಿಸಬಹುದು?

|ತಿಪ್ಪೆಸ್ವಾಮಿ ಮೊಳಕಾಲ್ಮೂರು

-ಜೆಡಿಎಸ್ ಪಕ್ಷದ ಮೇಲೆ ರೈತರು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಅವರ ನಿರೀಕ್ಷೆ ಹುಸಿಗೊಳಿಸುವುದಿಲ್ಲ. ಆಯಾ ಜಿಲ್ಲೆಯ ಹವಾಗುಣ, ನೀರಾವರಿ ಸೌಲಭ್ಯವನ್ನಾಧರಿಸಿ ಯಾವ ಬೆಳೆ ಬೆಳೆಯಬೇಕು ಎಂಬುದರ ಸಮಗ್ರ ಮಾಹಿತಿ ನೀಡಲಾಗುವುದು. ರೈತರ ಆರ್ಥಿಕ ಬೆಳವಣಿಗೆಗಾಗಿ ಕೃಷಿ ನೀತಿ ಬದಲಾವಣೆ ಮಾಡಬೇಕಿದೆ. ರೈತರು ಬೆಳೆಯುವ ಬೆಳೆಗಳನ್ನು ವಿದೇಶಕ್ಕೆ ರಫ್ತು ಮಾಡಲು ಸರ್ಕಾರದಿಂದ ನೆರವು ನೀಡಲಾಗುವುದು.

ಯಾವುದೇ ಸರ್ಕಾರ ವಕೀಲರಿಗೆ ಸಮರ್ಪಕ ನೆರವು ಮತ್ತು ಯೋಜನೆಯನ್ನು ನೀಡಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಂಕಷ್ಟದಲ್ಲಿರುವ ವಕೀಲರ ನೆರವಿಗೆ ಯೋಜನೆ ರೂಪಿಸಿ.

|ಕಾಂತರಾಜು ವಕೀಲ

-ವಕೀಲರ ಕ್ಷೇಮಾಭಿವೃದ್ಧಿಗಾಗಿಯೇ 100 ಕೋಟಿ ರೂ. ಮೀಸಲಿಡಬೇಕೆಂದು ನಿರ್ಧರಿಸಲಾಗಿದೆ.

ಶಿಕ್ಷಕರಿಗೆ ಯಾವ ರೀತಿಯಲ್ಲಿ ನೆರವಾಗಲಿದ್ದೀರಿ?

|ನಟೇಶ್ ಬೆಂಗಳೂರು

-ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಅನುದಾನ ರಹಿತ ಶಾಲೆಗಳಿಗೆ ಅನುದಾನ ನೀಡುವ ಕೆಲಸ ಆರಂಭಿಸಿದೆ. ಶಿಕ್ಷಕರಿಗೆ ಎಕ್ಸ್​ಪ್ರೇಷಿಯಾ ನೀಡುವುದಕ್ಕೆ ಆದೇಶಿಸಿದೆ. 55 ಸಾವಿರ ಶಿಕ್ಷರ ನೇಮಕಕ್ಕೆ ಚಾಲನೆ ನೀಡಿದ್ದೆ. ಅಧಿಕಾರಕ್ಕೆ ಬಂದರೆ ಶಿಕ್ಷಕರಿಗಿರುವ ಸಮಸ್ಯೆಗಳ ನಿವಾರಣೆಗೆ ಒತ್ತು ನೀಡಿ, ಯೋಜನೆಗಳನ್ನು ರೂಪಿಸುತ್ತೇನೆ.

ಲಿಂಗಾಯತ, ಒಕ್ಕಲಿಗ ಸಮುದಾಯಗಳಲ್ಲೂ ಆರ್ಥಿಕ ಹಿಂದುಳಿದವರಿದ್ದಾರೆ. ಆದರೆ, ಬಹುತೇಕ ಯೋಜನೆಗಳು ದಲಿತರಿಗೆ ಮಾತ್ರ ಸಿಗುತ್ತಿವೆ. ಹೀಗಾಗಿ ಇತರ ಸಮುದಾಯದವರ ಏಳಿಗೆ ಸಾಧ್ಯವಾಗುತ್ತಿಲ್ಲವಲ್ಲ?

|ಮಲ್ಲಿಕಾರ್ಜುನ್ ಕಲಬುರಗಿ

-ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದವರ ಅಭಿವೃದ್ಧಿ ಮಾಡುವುದು ಸರ್ಕಾರದ ಕರ್ತವ್ಯ. ಆದರೆ, ಮೀಸಲಾತಿ ಘೋಷಿಸಿದರೂ ಅದು ನಿಜವಾದ ಫಲಾನುಭವಿಗಳಿಗೆ ಸಿಗುತ್ತಿಲ್ಲ. ದಲಿತರಷ್ಟೇ ಅಲ್ಲದೆ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರಲ್ಲೂ ಬಡವರಿದ್ದಾರೆ. ದಲಿತರ ಜತೆಗೆ ಬೇರೆ ಸಮುದಾಯದಲ್ಲಿನ ಆರ್ಥಿಕ ಹಿಂದುಳಿದವರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.

ಮೊಬೈಲ್ ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿ ಚಾಲಕರಿಗೆ ಅನ್ಯಾಯವಾಗುತ್ತಿದ್ದು, ಅದನ್ನು ನಿವಾರಿಸಬೇಕಿದೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೀರಿ?

|ಗೋವಿಂದ್ ಮಂಡ್ಯ

-ಈ ಹಿಂದೆ ಅವರು ಸಮಸ್ಯೆಗೀಡಾದಾಗ ನಾನೇ ಮಧ್ಯಪ್ರವೇಶಿಸಿ ಅದನ್ನು ಬಗೆಹರಿಸುವ ಕೆಲಸ ಮಾಡಿದ್ದೇನೆ. ಟ್ಯಾಕ್ಸಿ, ಆಟೋ ಚಾಲಕರಿಗೆ ಸಾಲ ಸಿಗುವಂತೆ ಮಾಡುವುದು, ಪೊಲೀಸರಿಂದಾಗುತ್ತಿರುವ ಕಿರುಕುಳ ತಪ್ಪಿಸಲು ಸರ್ಕಾರದಿಂದಲೇ ಕ್ರಮ ಕೈಗೊಳ್ಳುತ್ತೇನೆ.

ಬಿಎಂಟಿಸಿಯನ್ನು ನಿಗಮ ಮಾಡಿದ ನಂತರದಿಂದ ಈವರೆಗೆ ಅವರನ್ನು ಸರ್ಕಾರಿ ನೌಕರರೆಂದು ಗುರುತಿಸಿಲ್ಲ. ಹೀಗಾಗಿ ವೇತನ ಆಯೋಗದ ಶಿಫಾರಸುಗಳು ಬಿಎಂಟಿಸಿ ನೌಕರರಿಗೆ ಅನ್ವಯಿಸುತ್ತಿಲ್ಲ. ಅಲ್ಲದೆ, ವೈದ್ಯಕೀಯ ಭತ್ಯೆಯೂ ಸಿಗುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಿ.

|ಅಶೋಕ್ ಬಿಎಂಟಿಸಿ ನೌಕರ

-ಬಿಎಂಟಿಸಿ ನೌಕರರು ಈಗಾಗಲೇ ನನ್ನನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದ ಕೂಡಲೇ ಬಿಎಂಟಿಸಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಕ್ರಮ ತೆಗೆದು ಕೊಳ್ಳುತ್ತೇನೆ. ಅಲ್ಲದೆ, ವೇತನ ಆಯೋಗದ ಶಿಫಾರಸು ಮತ್ತು ವೈದ್ಯಕೀಯ ನೆರವು ಸಿಗುವಂತೆ ಮಾಡಲಾಗುವುದು.

ಅತಿಥಿ ಉಪನ್ಯಾಸಕರ ಸಮಸ್ಯೆ ಬಗ್ಗೆ ಗಮನಹರಿಸಿ. ಹಾಗೆಯೇ, ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ತಪ್ಪಿಸಿ. (ಫೇಸ್​ಬುಕ್ ಪ್ರಶ್ನೆ)

-ಖಾಸಗಿ ಶಾಲೆಗಳನ್ನು ನಿಯಂತ್ರಿಸಲು ಹೋದರೆ, ಅವರು ನ್ಯಾಯಾಲಯದ ಮೊರೆ ಹೋಗಿ ಯಾವುದೇ ಕ್ರಮ ಕೈಗೊಳ್ಳದಂತೆ ಮಾಡುತ್ತಾರೆ. ಅದರ ಬದಲು ಸರ್ಕಾರಿ ಶಾಲೆ, ಕಾಲೇಜುಗಳನ್ನು ಖಾಸಗಿ ಶಾಲೆಗಳ ಮಟ್ಟಕ್ಕೆ ಬೆಳೆಸಲು ಯೋಜನೆ ರೂಪಿಸಬೇಕಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಆ ಕಾರ್ಯ ಮಾಡಲಿದೆ. ಇನ್ನು, ಅತಿಥಿ ಉಪನ್ಯಾಸಕರಿಗಿರುವ ಸಮಸ್ಯೆ ನಿವಾರಣೆಗೂ ಕ್ರಮ ಕೈಗೊಳ್ಳಲಾಗುವುದು.

ಸರ್ಕಾರಗಳು ಜಾತಿ ಆಧಾರದ ಮೇಲೆ ಸೌಲಭ್ಯ ನೀಡುತ್ತಿವೆ. ನಮ್ಮದು ಕೂಡ ಬಡಕುಟುಂಬ. ಆದರೆ, ಯಾವುದೇ ಸರ್ಕಾರಿ ಸೌಲಭ್ಯ ಸಿಗುತ್ತಿಲ್ಲ. ಸರ್ಕಾರದ ಈ ಜಾತಿಭೇದವನ್ನು ವಿರೋಧ ಪಕ್ಷ ಏಕೆ ಪ್ರತಿಭಟಿಸುತ್ತಿಲ್ಲ?

|ವಿನೋದ್ ಚಾಮರಾಜನಗರ

-ಸಮಾಜದಲ್ಲಿನ ಕೆಲವು ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡಲು ಹೋದರೆ ನಮ್ಮನ್ನು ವಿಲನ್ ಎಂಬಂತೆ ಬಿಂಬಿಸಲಾಗುತ್ತದೆ. ಅಷ್ಟಕ್ಕೂ ಎಲ್ಲ ಜಾತಿಯಲ್ಲಿಯೂ ಬಡವರಿದ್ದಾರೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಕೌಶಲ ವಿಶ್ವವಿದ್ಯಾಲಯ ಸ್ಥಾಪಿಸುವ ಯೋಚನೆಯಿದೆ.

ಸರ್ಕಾರ ಸಶಕ್ತರಿಗೆ ನಿರುದ್ಯೋಗ ಭತ್ಯೆ ನೀಡುವುದು ಬೇಡ, ಬದಲಾಗಿ ಉದ್ಯೋಗ ಕಲ್ಪಿಸಿಕೊಡ ಬೇಕು. ಈ ನಿಟ್ಟಿನಲ್ಲಿ ನಿಮ್ಮ ಪರಿಕಲ್ಪನೆ ಹೇಗಿದೆ?

|ತೇಜಸ್ ಉದ್ಯೋಗಾಕಾಂಕ್ಷಿ

ಯುವಸಮೂಹಕ್ಕೆ ಮೊದಲನೆ ವರ್ಷವೇ 50 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ನಮ್ಮದು. ಸೋಲಾರ್ ಎನರ್ಜಿಗೆ ಬೇಕಾದ ಉಪಕರಣವನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ನಮ್ಮ ಸರ್ಕಾರ ಬಂದರೆ ಸೋಲಾರ್ ಉಪಕರಣ ತಯಾರಿಕೆಗೆ ಕಾರ್ಖಾನೆ ಆರಂಭಿಸಲಾಗುವುದು. ಈ ಕಾರ್ಖಾನೆಯೊಂದರಿಂದಲೇ ಸುಮಾರು 4 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ.

ವೇತನ ಆಯೋಗ ವೇತನ ಬದಲಾವಣೆ ಮಾಡುತ್ತದೆ ಎಂಬ ಭರವಸೆಯಿತ್ತು. ಆದರೆ, ಔರಾದಕರ್ ವರದಿ ಜಾರಿಯಾಗಿಲ್ಲ. ಇದರಿಂದ ಆರಕ್ಷಕರಿಗೇ ರಕ್ಷಣೆಯಿಲ್ಲದಂತಾಗಿದೆ. ನಿಮ್ಮ ಸರ್ಕಾರ ಬಂದರೆ ಇದಕ್ಕೆ ಪರಿಹಾರ ಸಿಗುತ್ತದೆಯೆ?

|ಗಜೇಂದ್ರ ಚಿಕ್ಕಮಗಳೂರು

-ದೊಡ್ಡ ಅಧಿಕಾರಿಗಳು ಅವರಿಗೆ ಬೇಕಾದ ಸೌಲಭ್ಯವನ್ನು ಸುಲಭವಾಗಿ ಮಾಡಿಕೊಳ್ಳುತ್ತಿದ್ದಾರೆ. ಕೆಳಹಂತದ ಸಿಬ್ಬಂದಿಗೆ ಆಗುತ್ತಿರುವ ಅನ್ಯಾಯ ಗಮನದಲ್ಲಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಆರಕ್ಷಕರ ಜತೆಗೆ ವಿಧಾನಸೌಧದಲ್ಲಿ ರ್ಚಚಿಸಿ, ಕ್ರಮ ಕೈಗೊಳ್ಳುತ್ತೇನೆ.

2013ರಿಂದ ಸಿನಿಮಾಗಳಿಗೆ ಸಬ್ಸಿಡಿ ಹಣ ನೀಡುತ್ತೇವೆ ಎಂದು ಸರ್ಕಾರ ಹೇಳುತ್ತಲೇ ಇದೆ. ಜನತಾ ಚಿತ್ರಮಂದಿರಗಳು ಒಂದೂ ಆಗಿಲ್ಲ. ಇದಕ್ಕೆ ಪರಿಹಾರ ಏನು?

|ಗಾಲಿ ಲಕ್ಕಿ ನಿರ್ದೇಶಕ

-ಕನ್ನಡ ಚಿತ್ರಗಳು ಉಳಿಯಲು ಜನತಾ ಚಿತ್ರಮಂದಿರ ಅತ್ಯಗತ್ಯ. ಹೊಸ ಹುಡುಗರು ತೆಗೆಯುವ ಚಿತ್ರಕ್ಕೆ ಇದರಿಂದ ಪ್ರೋತಾಹ ಸಿಗುತ್ತದೆ. ನಿರ್ವಪಕರಿಗೂ ಚಿತ್ರಮಂದಿರಗಳಲ್ಲಿ ಮೊದಲನೇ ವಾರದ ಬಾಡಿಗೆ ಕಟ್ಟಿ ಚಿತ್ರ ಬಿಡುಗಡೆ ಮಾಡುವುದು ಕಷ್ಟವಾಗಿದೆ. ತಮಿಳುನಾಡು, ಆಂಧ್ರಪ್ರದೇಶದಲ್ಲಿ ಜನತಾ ಚಿತ್ರಮಂದಿರದ ವ್ಯವಸ್ಥೆಯಿದೆ. ಇನ್ನು ಸಿನಿಮಾಗಳಿಗೆ ಸಬ್ಸಿಡಿ ನೀಡದಿರುವುದು ತಪು್ಪ. ಸರ್ಕಾರಕ್ಕೆ ಸಿನಿಮಾದಿಂದಲೂ ದುಡ್ಡ್ದು ಬರುತ್ತದೆ. ಈ ದುಡ್ಡನ್ನು ಸಿನಿರಂಗದ ಕಲ್ಯಾಣಕ್ಕೆ ವಿನಿಯೋಗಿಸಬೇಕು.

ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳುತ್ತಿದ್ದೀರಿ. ಆದರೆ, ಸಮ್ಮಿಶ್ರ ಸರ್ಕಾರ ರಚನೆಯಾದರೂ ರೈತರ ಸಾಲ ಮನ್ನಾ ಆಗಲಿದೆಯೇ?

|ಯೋಗೀಶ್ ಶಿವಮೊಗ್ಗ

-ಸಮ್ಮಿಶ್ರ ಸರ್ಕಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ರಾಜ್ಯದಲ್ಲಿ ಜೆಡಿಎಸ್ ಬಹುಮತದ ಆಧಾರದಲ್ಲಿ ಅಧಿಕಾರಕ್ಕೆ ಬರಲಿದೆ. ಬಹುಮತ ಬರದಿದ್ದರೂ, ಯಾವ ಪಕ್ಷ ನಮ್ಮ ಬೆಂಬಲ ಬಯಸುತ್ತದೆಯೋ ಅದು ಮೊದಲು ರೈತರ ಸಾಲ ಮನ್ನಾ ಮಾಡಬೇಕೆಂದು ಷರತ್ತು ವಿಧಿಸಲಾಗುತ್ತದೆ. ಅದು ಈಡೇರಿದರಷ್ಟೇ ಮುಂದಿನ ಮಾತುಕತೆ ನಡೆಸಲಾಗುವುದು.

ಮಗನ ಶಿಕ್ಷಣಕ್ಕಾಗಿ ಕಳೆದ ಒಂದು ವರ್ಷದಿಂದ ಬ್ಯಾಂಕಿನಿಂದ ಬ್ಯಾಂಕಿಗೆ ಶಿಕ್ಷಣ ಸಾಲಕ್ಕಾಗಿ ಅಲೆಯುತ್ತಿರುವೆ. ಈ ಸಮಸ್ಯೆ ಬಗೆಹರಿಸಲು ನೀವು ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ?

|ರೇವಣ್ಣ ಮಾದೇನಹಳ್ಳಿ

-ಈ ರೀತಿಯ ಬಹಳಷ್ಟು ಸಮಸ್ಯೆ ನನ್ನ ಬಳಿಗೆ ಬಂದಿವೆ. ಹಲವರಿಗೆ ಸ್ವತಃ ನಾನೇ ಧನಸಹಾಯ ಮಾಡಿರುವೆ. ಸರ್ಕಾರದ ಯೋಜನೆಯಲ್ಲಿನ ಹಲವಾರು ಲೋಪದೋಷಗಳಿಂದ ಫಲಾನುಭವಿಗಳಿಗೆ ಲಾಭ ಸಿಗುತ್ತಿಲ್ಲ. ಮುಂದೆ ಈ ಯೋಜನೆ ಸಮರ್ಪಕವಾಗಿ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ.

ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ನಿಮ್ಮ ನಿರ್ಣಯ ಏನು?

|ಮುರಳಿ ಮೈಸೂರು

-ಕೆಲವರಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ಸಿಗುತ್ತದೆ ಎಂಬ ಭಾವನೆಯಿದೆ. ಆದರೆ, ನನ್ನ ಪ್ರಕಾರ ವೀರಶೈವ-ಲಿಂಗಾಯತ ಹಿಂದು ಧರ್ಮದಿಂದ ಪ್ರತ್ಯೇಕವಾಗುವುದನ್ನು ಒಪ್ಪಲಾಗದು. ಈ ಸೂಕ್ಷ್ಮ ವಿಚಾರವನ್ನು ಧಾರ್ವಿುಕ ಗುರುಗಳಿಗೆ ಬಿಡಬೇಕಾಗಿದೆ.