ಬೆಂಗಳೂರು: ಸಮ್ಮಿಶ್ರ ಸರಕಾರದ ನಿಯೋಜಿತ ಸಿಎಂ ಆಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಬರಿಗಾಲಿನಲ್ಲಿ ದೇವರು ಹಾಗೂ ಕನ್ನಡ ನಾಡಿನ ಜನತೆಯ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ರಾಜ್ಯಪಾಲ ರಾಜ್ಯಪಾಲ ವಜೂಭಾಯ್ ವಾಲಾ ಅವರು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ನಂತರ ಹೂಗುಚ್ಚ ನೀಡುವ ಮೂಲಕ ರಾಜ್ಯಪಾಲರು ಶುಭ ಕೋರಿ ದರು. ಬೆನ್ನಲ್ಲೇ ಉಪಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಹೆಚ್.ಡಿ.ಕುಮಾರಸ್ವಾಮಿ ಅವರು ರೇಷ್ಮೆ ಪಂಚೆ, ರೇಷ್ಮೆ ಶರ್ಟ್ ಧರಿಸಿದ್ದರು. ಪ್ರತಿಜ್ಞಾ ವಿಧಿ ಸ್ವೀಕರಿಸಿದ ಬಳಿಕ ಕುಮಾರಸ್ವಾಮಿ ತಾಯಿ ಚೆನ್ನಮ್ಮ ಕಾಲು ಮುಟ್ಟಿ ನಮಸ್ಕರಿಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಸ್ವಾಗತಿಸಿದರು. ನಂತರ ರಾಷ್ಟ್ರಗೀತೆಗೆ ನೆರೆದ ಗಣ್ಯರಿಂದ ಎದ್ದು ನಿಂತು ಗೌರವ ಸಲ್ಲಿಸಲಾಯಿತು. ಪ್ರತಿಜ್ಞಾ ವಿಧಿ ಸಮಾರಂಭಕ್ಕೆ ಗಣ್ಯಾತಿಗಣ್ಯರ ದಂಡು ಆಗಮಿಸಿತ್ತು. ವೇದಿಕೆ ಮೇಲೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಗಣ್ಯರ ಕುಶಲೋಪರಿ ವಿಚಾರಿಸುತ್ತ, ಮೊಮ್ಮಗ ಪ್ರಜ್ಷಲ್ ರನ್ನು ಕೇಂದ್ರ ನಾಯಕರಿಗೆ ಪರಿಚಯಿಸಿದರು.

ಕುಮಾರಸ್ವಾಮಿ 2ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಬಿಜೆಪಿ ಜತೆಗಿನ ಮೈತ್ರಿ ವೇಳೆ ಮೊದಲನೇ ಬಾರಿ ಸಿಎಂ ಆಗಿದ್ದರು. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಉತ್ತರ ಭಾರತದ ಹಲವು ರಾಷ್ಟ್ರೀಯ ನಾಯಕರು ವೇದಿಕೆಯಲ್ಲಿ ಹಾಜರಿದ್ದು, ನೆರೆದ ಜನಸ್ತೋಮದತ್ತ ಕೈಬೀಸುತ್ತ ತೃತೀಯ ರಂಗದ ಶಕ್ತಿ ಪ್ರದರ್ಶನ ನಡೆಸಿದರು.