ಬೆಂಗಳೂರು: ಸಿಗಡಿ ರಫ್ತು ಸಂದರ್ಭದಲ್ಲಿ ಅವುಗಳಲ್ಲಿರುವ ಜೀವಪ್ರತಿರೋಧಕ ಅಂಶಗಳನ್ನು ಪತ್ತೆ ಹಚ್ಚಿ ನಿಯಂತ್ರಣ ಹೇರುವ ವಿಚಾರಕ್ಕೆ ಸಂಬಂಧಿಸಿ ಮಾರ್ಗಸೂಚಿ ಸಿದ್ಧಪಡಿಸಲು ದಕ್ಷಿಣ ವಲಯ (ಅಂತರರಾಜ್ಯ) ಪರಿಷತ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಡೆದ ಪರಿಷತ್‌ನ 28ನೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಗೃಹ ಸಚಿವ ರಾಜನಾಥ್‌ ಸಿಂಗ್‌, ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ
ಮಾತನಾಡಿದರು.

‘ಸಭೆಯಲ್ಲಿ ಚರ್ಚೆಗೆ ಎತ್ತಿಕೊಂಡ 27 ವಿಷಯಗಳ ಪೈಕಿ 22ರನ್ನು ಚರ್ಚಿಸಿ ಇತ್ಯರ್ಥಪಡಿಸಲಾಗಿದೆ. ಉಳಿದಿರುವ ವಿಷಯಗಳ ಕುರಿತು ತಮಿಳುನಾಡಿನಲ್ಲಿ ನಡೆಯಲಿರುವ ಮುಂದಿನ ಸಭೆ ಚರ್ಚಿಸಲಾಗುವುದು’ ಎಂದು ಅವರು ತಿಳಿಸಿದರು.

ಮೀನುಗಾರರಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಬಯೋ ಮೆಟ್ರಿಕ್‌ ಕಾರ್ಡ್‌ಗಳನ್ನು ನೀಡಲಾಗುತ್ತಿದ್ದು, ಈವರೆಗೆ ಶೇ 95ರಷ್ಟು ಮಂದಿಗೆ ವಿತರಿಸಲಾಗಿದೆ. ಎಸ್‌ಸಿ, ಎಸ್‌ಟಿ ಸಮುದಾಯದ ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಎಲ್ಲ ಕೋರ್ಸ್ ಗಳಲ್ಲಿ ಶಿಷ್ಯವೇತನ ನೀಡಲು ಏಕರೂಪದಲ್ಲಿ ಅನುದಾನ ಬಿಡುಗಡೆ, ನವೀಕರಿಸಬಹುದಾದ ಇಂಧನದ ಸದ್ಬಳಕೆ, ಪ್ರವಾಸೋದ್ಯಮ ರೈಲುಗಳ ವಿಸ್ತರಣೆ ವಿಷಯಗಳ ಕುರಿತು ಚರ್ಚೆ ನಡೆಯಿತು ಎಂದರು.

ಪವಿತ್ರವಾದ ಶೇಷಾಚಲಂ‌ ಬೆಟ್ಟದಿಂದ (ಆಂಧ್ರಪ್ರದೇಶ) ರಕ್ತ ಚಂದನ ಅಕ್ರಮ ‌ಸಾಗಣೆ ವಿಷಯದಲ್ಲಿ ಅಂತಿಮ ‌ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಈ ಕುರಿತು ಸಮಿತಿ ರಚಿಸಲು‌ ನಿರ್ಧರಿಸಲಾಗಿದೆ. ಪುದುಚೇರಿ ವಿಮಾನ ನಿಲ್ದಾಣ ಅಭಿವೃದ್ಧಿ, ಚೆನ್ನೈ ನಗರಕ್ಕೆ ಕುಡಿಯುವ ನೀರು ಪೂರೈಕೆ, ಪೊಲೀಸ್ ಇಲಾಖೆ ಆಧುನೀಕರಣ, ಎಲ್‌ಪಿಜಿ‌ ಗೋದಾಮುಗಳಿಗೆ ನಿವೇಶನ ಯೋಜನೆಗಳಿಗೆ ನಿರಕ್ಷೇಪಣಾ ಪತ್ರ (ಎನ್‌ಓಸಿ) ನೀಡುವ ವಿಷಯದಲ್ಲಿ ರಾಜ್ಯಗಳ ಮಧ್ಯೆ ಎದುರಾಗುವ ಗೊಂದಲಗಳನ್ನು ಪರಸ್ಪರ ಚರ್ಚಿಸಿ, ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ತೀರ್ಮಾನಿಸಲಾಯಿತು ಎಂದು ಅವರು ವಿವರಿಸಿದರು.

ಪುದುಚೇರಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ತಮಿಳುನಾಡು ರಾಜ್ಯದ ಭೂಮಿ ಅಗತ್ಯ ಇದೆ. ಪುದುಚೇರಿ ಕೇಂದ್ರಾಡಳಿತ ಪ್ರದೇಶವಾಗಿದ್ದು, ಭೂ ಸ್ವಾಧೀನಕ್ಕೆ ಹಣದ ಅಗತ್ಯವಿದೆ. ಹೀಗಾಗಿ, ಈ ವಿಷಯದಲ್ಲಿ ಅಂತಿಮ‌ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಪುಲಿಕಾಟ್ ಕೆರೆಯಲ್ಲಿ ಮೀನುಗಾರಿಕೆ ನಡೆಸುವ ವಿಷಯದಲ್ಲಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಮೀನುಗಾರರ ಮಧ್ಯೆ ಇರುವ ಬಿಕ್ಕಟ್ಟು ಇತ್ಯರ್ಥಪಡಿಸಲು ಕೂಡಾ ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದರು.

‘ಗಡಿ ಸಮಸ್ಯೆ, ಭಾಷಾ ಅಲ್ಪಸಂಖ್ಯಾತರು ಮತ್ತು ಅಂತರರಾಜ್ಯ ಸಾರಿಗೆ ಸೇರಿದಂತೆ ಆರ್ಥಿಕ ಮತ್ತು ಸಾಮಾಜಿಕ ಯೋಜನೆಗಳ ವಿಷಯದ ಕುರಿತು ವಲಯ ಪರಿಷತ್‌ ಸಭೆಯಲ್ಲಿ ಚರ್ಚಿಸಿ, ತೀರ್ಮಾನಗಳನ್ನು ಕೈಗೊಳ್ಳುವುದು ಕಡ್ಡಾಯ. ಆ ಮೂಲಕ, ಸಾಮಾನ್ಯ ವಿಷಯಗಳಲ್ಲಿ ರಾಜ್ಯಗಳ ನಡುವಿನ ಸಮಸ್ಯೆಗಳನ್ನು ಪರಸ್ಪರ ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ಸಾಧ್ಯ’ ಎಂದೂ ರಾಜನಾಥ್‌ ಸಿಂಗ್‌ ಅಭಿಪ್ರಾಯಪಟ್ಟರು.

ನದಿಯ ನೀರು ಹಂಚಿಕೆಗೆ ಸಮಿತ: ‘ಚೆನ್ನೈ ನಗರದ ಕುಡಿಯುವ ನೀರಿ ಅಗತ್ಯವನ್ನು ಈಡೇರಿಸಲು ಕೃಷ್ಣಾ ಅಚ್ಚುಕಟ್ಟು ಪ್ರದೇಶ ಹೊಂದಿರುವ ರಾಜ್ಯಗಳು ನದಿಯ ನೀರು ಹಂಚಿಕೆ ಸಂಬಂಧ ಸಮಿತಿ ರಚಿಸಲು ಒಪ್ಪಿವೆ’ ಎಂದು ದಕ್ಷಿಣ ವಲಯ ಪರಿಷತ್‌ನ ಕಾರ್ಯದರ್ಶಿ ಆರ್‌. ಬುಹರಿಲ್‌ ತಿಳಿಸಿದರು.

ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಪುದುಚೇರಿ ಮುಖ್ಯಮಂತ್ರಿ ಸಿ. ನಾರಾಯಣಸ್ವಾಮಿ, ತಮಿಳುನಾಡು ಉಪ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ, ಆಂಧ್ರಪ್ರದೇಶ ಮತ್ತು ಕೇರಳದ ಸಚಿವರು ಸಭೆಯಲ್ಲಿ
ಇದ್ದರು.

By R

You missed