ಶಿರಸಿ: ಈ ಭಾಗದ ಜನ ನೆಮ್ಮದಿಯಿಂದ ಇದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಅಣ್ಣ ತಮ್ಮರಾಗಿ ನೆಮ್ಮದಿಯಿಂದ ಚೆನ್ನಾಗಿದ್ದಾರೆ. ಇದರಿಂದ ಮತ ಪಡೆಯುವುದು ಸಾಧ್ಯವಿಲ್ಲ ಎನ್ನುವುದನ್ನು ಈ ಭಾಗದ ಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು. ಅವರ ಬಾಯಿಂದ ಬರುವ ಮಾತು, ಬಳಕೆ ನೋಡಿದರೆ ಅವರು ಹಿಂದೂ ಎಂದೂ ಯಾರೂ ಹೇಳುವುದಿಲ್ಲ, ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಸಚಿವ ಅನಂತ ಕುಮಾರ ಹೆಗಡೆಯವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟಾಂಗ್ ನೀಡಿದರು.

ಉತ್ತರಕನ್ನಡ ಜಿಲ್ಲೆ ಶಿರಸಿಯಲ್ಲಿ ಬುಧವಾರ ನಡೆಯಲಿರುವ ಕುಮಾರ ಪರ್ವ ಯಾತ್ರಾ ಕಾರ್ಯಕ್ರಮಕ್ಕೆ ಆಗಮಿಸಿದ ಅವರು, ನಗರದ ಸ್ಟೇಡಿಯಂ ಹೆಲಿ ಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೀರಾವರಿ ಸೌಲಭ್ಯದ ಕುರಿತಂತೆ ದಿನಕ್ಕೆ ಏಳುಕೋಟಿ ಖರ್ಚು ಮಾಡುತ್ತಾರೆ. ಅವರೇ ಜಾಹೀರಾತಿನಲ್ಲಿ ತೋರಿಸಿದ್ದಾಗಿದೆ. ಆದರೆ ಜನರಿಗೆ ನೀರಿಲ್ಲ. ಭದ್ರಾ ನೀರನ್ನು ಕುಡಿಯುವುದಕ್ಕೆ ನೀಡಬೇಡಿ ಎನ್ನುವುದನ್ನು ಕೇಳಿದರೆ ಇದು ಈ ಸರಕಾರದ ನೀರಾವರಿ ಇಲಾಖೆ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದು ಅರ್ಥವಾಗುತ್ತದೆ ಎಂದ ಅವರು, ಮೈಸೂರು ಮಹಾರಾಜರ ಅವಧಿಗಿಂತ ಅಧಿಕ ಅಭಿವೃದ್ಧಿ ಮಾಡಿದ್ದೇನೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯವರ ಹೇಳಿಕೆ ಕೇಳಿದರೆ ಅವರಿಗೆ ಬುದ್ದಿ ಭ್ರಮಣೆಯಾದಂತಿದೆ. ಆ ಕಾಲದಲ್ಲಿ ಇನ್ನೂ ಸಿದ್ದರಾಮಯ್ಯ ಹುಟ್ಟಿಯೇ ಇರಲಿಲ್ಲ. ಸಂವಿಧಾನ ಜಾರಿಗೆ ಬಂದಿರಲಿಲ್ಲ. ಬಹುಶಃ ಸಿದ್ದರಾಮಯ್ಯನವರಿಗೆ ಎಲ್ಲೊ ಹುಚ್ಚು ಹಿಡಿದಿರಬೇಕು ಎಂದರು.