ದಕ್ಷಿಣ ಕರ್ನಾಟಕದ ಒಕ್ಕಲಿಗರ ಸೀಮೆಯ ಪ್ರಬಲ ಶಕ್ತಿ ಎನಿಸಿರುವ ಜೆಡಿಎಸ್‌, ಈ ಬಾರಿ ಉತ್ತರ ಕರ್ನಾಟಕಕ್ಕೂ ಲಗ್ಗೆ ಇಡುವ ಪ್ರಯತ್ನ ಮಾಡಿದೆ. ಅನಾರೋಗ್ಯದ ನಡುವೆಯೂ ಉತ್ತರ–ದಕ್ಷಿಣ ಎನ್ನದೇ ರಾಜ್ಯದ ಉದ್ದಗಲಕ್ಕೂ ಏಕಾಂಗಿ ‘ಸಾರಥಿ’ಯಂತೆ ಹೆಲಿಕಾಪ್ಟರ್‌ನಲ್ಲಿ ಓಡಾಡಿ, ಅಬ್ಬರದ ಪ್ರಚಾರ ನಡೆಸಿದ್ದಾರೆ ಎಚ್‌.ಡಿ. ಕುಮಾರಸ್ವಾಮಿ. ಸರಳ ಬಹುಮತ ಸಿಗಬಹುದು ಎಂಬ ನಿರೀಕ್ಷೆ ಅವರದ್ದು. ಒಂದು ವೇಳೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಜತೆ ಮಾತ್ರ ಕೈಜೋಡಿಸುವುದಿಲ್ಲ ಎಂದು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಕಡ್ಡಿ ಮುರಿದಂತೆ ಹೇಳಿದ್ದಾರೆ:

 * ಜೆಡಿಎಸ್‌ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಯಾವ ವಿಶ್ವಾಸದಲ್ಲಿ ಹೇಳುತ್ತೀರಿ?

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಚುನಾವಣಾ ಪ್ರವಾಸ ಮಾಡಿಬಂದ ಮೇಲೆ ಅಂತಹದ್ದೊಂದು ವಿಶ್ವಾಸ ಮೂಡಿದೆ. ಕನ್ನಡ ನಾಡಿನ ಎಲ್ಲ ವರ್ಗದ ಜನರ ನಾಡಿಮಿಡಿತ ಏನೆಂಬುದನ್ನು ಬಲ್ಲೆ. ಅವರ ಅಪೇಕ್ಷೆ ಈಡೇರಿಕೆ ನಮ್ಮ ಪಕ್ಷದಿಂದ ಮಾತ್ರ ಸಾಧ್ಯವೆಂಬ ಅರಿವೂ ಪ್ರಜ್ಞಾವಂತ ಮತದಾರರಲ್ಲಿ ಇದೆ. ಇದಕ್ಕೆ ಆಧಾರ ಏನು ಎಂದು ಕೇಳಬಹುದು. ಪ್ರಚಾರ, ಪ್ರವಾಸದ ಸಂದರ್ಭದಲ್ಲಿ ಲಕ್ಷಗಟ್ಟಲೆ ಜನರನ್ನು ಭೇಟಿ ಮಾಡಿದಾಗ, ರಾಜ್ಯದಲ್ಲಿ ಜೆಡಿಎಸ್‌ ಪಕ್ಷವನ್ನೇ ಅಧಿಕಾರಕ್ಕೆ ತರಬೇಕು ಎಂಬ ದೃಢ ನಿಶ್ಚಯ ಮಾಡಿರುವ ಅನುಭವ ಆಯಿತು. ಜೆಡಿಎಸ್‌ ನೇತೃತ್ವದ ಸರ್ಕಾರ ಎಂದರೆ ಜನತಾ ಸರ್ಕಾರ ಎಂಬುದು ಅವರ ಮನದಿಂಗಿತವಾಗಿತ್ತು.

l ಹಾಗಿದ್ದರೆ, ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ನಿಮ್ಮ ಪ್ರಣಾಳಿಕೆ ಈಡೇರಿಸುವವರಿಗೇ ಬೆಂಬಲ ನೀಡುತ್ತೇವೆ ಎಂದು ಏಕೆ ಹೇಳಿದಿರಿ? ಇದು ದ್ವಂದ್ವವಲ್ಲವೇ?

ನಾನು ಹೇಳಿದ್ದೇ ಬೇರೆ, ಮಾಧ್ಯಮದಲ್ಲಿ ಬಿಂಬಿತವಾಗಿದ್ದೇ ಬೇರೆ. ಕಳೆದ ಒಂದು ತಿಂಗಳಿಂದ ಬೇರೆ ಬೇರೆ ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಚುನಾವಣಾ ಸಮೀಕ್ಷೆಗಳಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ತೋರಿಸಿಲ್ಲ. ಜೆಡಿಎಸ್‌ 35ರಿಂದ 40 ಸ್ಥಾನಗಳನ್ನು ಗೆಲ್ಲಬಹುದು ಎಂಬಂತೆ ಬಿಂಬಿಸಲಾಗುತ್ತಿದೆ. ಒಂದು ವೇಳೆ ಅದೇ ರೀತಿಯ ಫಲಿತಾಂಶ ಬಂದರೆ, ನಾವಂತೂ ಅಧಿಕಾರಕ್ಕಾಗಿ ದುಂಬಾಲು ಬಿದ್ದು ಯಾರ ಮನೆ ಬಳಿಗೂ ಹೋಗುವುದಿಲ್ಲ; ಆದರೆ, ನಮ್ಮ ಪಕ್ಷದ ಪ್ರಣಾಳಿಕೆಯನ್ನು ಈಡೇರಿಸುವವರನ್ನು ಬೆಂಬಲಿಸುವುದಾಗಿ ಹೇಳಿದ್ದು ನಿಜ ಎಂದು ಹೇಳಿದ್ದೆ. ಆದರೆ, ಪ್ರಕಟವಾಗಿರುವ ಸಮೀಕ್ಷೆಗಳು ಸತ್ಯಕ್ಕೆ ದೂರವಾಗಿವೆ. ಸರಳ ಬಹುಮತಕ್ಕೆ ಅಗತ್ಯವಿರುವ 113 ಸ್ಥಾನಗಳ ಮ್ಯಾಜಿಕ್‌ ಸಂಖ್ಯೆಯನ್ನು ನಾವು ಮುಟ್ಟುತ್ತೇವೆ. ನಾನು ಚಿಕ್ಕಮಗಳೂರಿನಲ್ಲಿ ನೀಡಿದ್ದ ಹೇಳಿಕೆಯನ್ನು ಎಲೆಕ್ಟ್ರಾನಿಕ್‌ ಮಾಧ್ಯಮಗಳು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ಬದಲಿಸಿಕೊಂಡು ಬಿತ್ತರಿಸಿವೆ.

l ತ್ರಿಶಂಕು ಸ್ಥಿತಿ ನಿರ್ಮಾಣವಾದರೆ, ಮುಖ್ಯಮಂತ್ರಿ ಆಗುವ ನಿಮ್ಮ ಕನಸು ಭಗ್ನವಾಗುತ್ತದಲ್ಲ?

ನಾನು ಮುಖ್ಯಮಂತ್ರಿ ಆಗಲೇಬೇಕು ಎಂಬ ಹಟಕ್ಕೆ ಬಿದ್ದವನಲ್ಲ. ಆದರೆ, ರಾಜ್ಯದ ಜನ ಎರಡೂ ರಾಷ್ಟ್ರೀಯ ಪಕ್ಷಗಳ ಕೆಟ್ಟ ಆಡಳಿತದಿಂದ ಸಂಕಷ್ಟಕ್ಕೆ ತುತ್ತಾಗಿ, ಬೇಸತ್ತು ರೋಸಿ ಹೋಗಿದ್ದಾರೆ. ಬಡವರು, ರೈತರು, ಯುವಕರ ಸಮಸ್ಯೆಗಳನ್ನು ಕೇಳುವವರೇ ಇಲ್ಲ. ಈ ಕಾರಣಕ್ಕಾಗಿ ಈ ನೆಲದ ಪಕ್ಷ ಅಧಿಕಾರಕ್ಕೆ ಬರುವುದನ್ನು ಆಸೆಗಣ್ಣುಗಳಿಂದ ನೋಡುತ್ತಿದ್ದಾರೆ. ರಾಜ್ಯದ ಎಲ್ಲ ವರ್ಗಗಳ ಜನ ನೆಮ್ಮದಿಯಿಂದ ಬದುಕು ಸಾಗಿಸುವಂತಾಗಬೇಕು.
ಅದಕ್ಕೆ ನಮ್ಮ ಪಕ್ಷ ಬದ್ಧವಾಗಿದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾನೇ ಮುತುವರ್ಜಿ ವಹಿಸಿ ಪ್ರಣಾಳಿಕೆ ರೂಪಿಸಿದ್ದೇನೆ. ಅದರಲ್ಲಿರುವ ಒಂದೊಂದು ಅಂಶವೂ ಜನಸಾಮಾನ್ಯರ ಹೃದಯಕ್ಕೆ ಹತ್ತಿರವಾದುದು.

l ನೀವು ಯಾವುದೇ ಪಕ್ಷದ ಜತೆಗೂ ಕೈಜೋಡಿಸಲು ಸಿದ್ಧವಿರುವ ಅವಕಾಶವಾದಿಗಳು ಎಂಬ ಆರೋಪವಿದೆ. ಸೈದ್ಧಾಂತಿಕ ಬದ್ಧತೆ ಇಲ್ಲದ ನಿಮ್ಮ ಪಕ್ಷವನ್ನು ಏಕೆ ಅಧಿಕಾರಕ್ಕೆ ತರಬೇಕು ಹೇಳಿ?

ಬಡವರು, ರೈತರು, ಮಹಿಳೆಯರು, ಯುವಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಬದುಕು ಹಸನು ಮಾಡುವ ಬಗ್ಗೆ ಅಚಲ ನಂಬಿಕೆ ಇಟ್ಟಿದ್ದೇವೆ. ಇದನ್ನು ಅವಕಾಶವಾದ ಎನ್ನುವುದಿಲ್ಲ. ಎಲ್ಲ ಜನರನ್ನೂ ಒಳಗೊಳ್ಳುವ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟಿದ್ದೇವೆ. ಅದಕ್ಕೆ ನಮ್ಮ ಪ್ರಣಾಳಿಕೆಯೇ ಉದಾಹರಣೆ. ನಿರುದ್ಯೋಗ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಎಲ್ಲರಿಗೂ ಸಾಮಾಜಿಕ ಭದ್ರತೆಯ ಆಶ್ವಾಸನೆಯನ್ನೂ ನೀಡಿದ್ದೇವೆ. ರಾಜ್ಯದ ಆರೂವರೆ ಕೋಟಿ ಜನರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇವೆ. ರಾಜ್ಯದಲ್ಲಿ ಆಡಳಿತ ಹಾಳಾಗಿ ಹೋಗಿದೆ. ಸಂಪತ್ತು ಸದ್ಬಳಕೆ
ಆಗುತ್ತಿಲ್ಲ. ಇದನ್ನು ಸರಿಪಡಿಸುವುದು ನಮ್ಮ ಏಕೈಕ ಉದ್ದೇಶ.

l ಹಾಗಿದ್ದರೆ, ಬಿಜೆಪಿ ಜತೆ ಹೋಗುತ್ತೀರಾ?

ನಮಗೇ ಸರಳ ಬಹುಮತ ಬರುವುದರಿಂದ ಯಾರ ಆಸರೆಯೂ ಬೇಕಾಗುವುದಿಲ್ಲ. ಅತಂತ್ರ ಸ್ಥಿತಿ ನಿರ್ಮಾಣವಾಗುವುದಿಲ್ಲ ಎಂಬುದು ದೃಢವಾದ ನಂಬಿಕೆ.

l ನೀವು ಹೋದ ಕಡೆ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ‘ಕುಮಾರಣ್ಣ’ನೇ ಮುಂದಿನ ಸಿ.ಎಂ ಎಂದು ನಿಮ್ಮ ಅಭಿಮಾನಿಗಳು ಸಂಭ್ರಮಿಸಿ ಹೇಳುತ್ತಾರೆ. ಇದನ್ನು ವಾಸ್ತವ ಎಂದು ನಂಬುತ್ತೀರಾ? ಆ ಬೆಂಬಲ ಮತವಾಗಿ ಪರಿವರ್ತನೆಗೊಳ್ಳುತ್ತದೆ ಎಂಬ ವಿಶ್ವಾಸವಿದೆಯೇ?

ವಾಸ್ತವ– ಭ್ರಮೆಯ ನಡುವಿನ ವ್ಯತ್ಯಾಸ ಗೊತ್ತಿದೆ. ನಾನು ಭ್ರಮೆಯಲ್ಲಿ ಬದುಕುತ್ತಿಲ್ಲ. ಈ ಚುನಾವಣೆಯಲ್ಲಿ ಜನರಿಗೆ ಹೆಚ್ಚು ನಿಕಟವಾಗಿದ್ದೇನೆ. ಸುಖಾಸುಮ್ಮನೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ. ಪ್ರತಿಯೊಂದು ಕ್ಷೇತ್ರದ ಬಗ್ಗೆ ಅಧ್ಯಯನ ನಡೆಸಿಯೇ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೇವೆ. ಹಿಂದಿನ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ನಮಗೆ ಶಕ್ತಿ ಇರಲಿಲ್ಲ. ಈ ಬಾರಿ ಆ ಸಮಸ್ಯೆ ಇಲ್ಲ. ಆ ಭಾಗದಲ್ಲೂ ಸಾಕಷ್ಟು ಶಕ್ತಿಶಾಲಿ ಅಭ್ಯರ್ಥಿಗಳು ಸಿಕ್ಕಿದ್ದಾರೆ. ಹುಬ್ಬಳ್ಳಿ ವಾಸ್ತವ್ಯದ ಉದ್ದೇಶವೇ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಶಕ್ತಿ ತುಂಬುವುದಾಗಿತ್ತು. ಆದರೆ, ನನ್ನ ಆರೋಗ್ಯ ಕೈಕೊಟ್ಟಿದ್ದರಿಂದ ನನ್ನ ಇಚ್ಛೆ ಪೂರ್ಣ ಪ್ರಮಾಣದಲ್ಲಿ ಈಡೇರಲಿಲ್ಲ. ಇಲ್ಲವಾದಲ್ಲಿ ಅತ್ಯಧಿಕ ಸ್ಥಾನ ಗೆಲ್ಲುವ ಗುರಿ ತಲುಪುವುದಕ್ಕೆ ಸಾಧ್ಯವಿತ್ತು. ಆದರೂ ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೀಟು ಗೆಲ್ಲುವ ಮೂಲಕ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತೇವೆ.

l ಒಂದು ಕಡೆ ಸಿದ್ದರಾಮಯ್ಯ ನಿಮ್ಮನ್ನು ನಗಣ್ಯ ಎಂಬಂತೆ ನೋಡುತ್ತಿದ್ದಾರೆ. ಇನ್ನೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ನಿಮ್ಮ ತಂದೆಯವರನ್ನು ಹೊಗಳಿ ಅಟ್ಟಕ್ಕೇರಿಸುತ್ತಲೇ, ಜೆಡಿಎಸ್‌ಗೆ ಮತ ಹಾಕಬೇಡಿ ಎನ್ನುತ್ತಿದ್ದಾರಲ್ಲ?

ರಾಜ್ಯದಲ್ಲಿ ಜೆಡಿಎಸ್‌ಗೆ ಸಿಗುತ್ತಿರುವ ಜನ‌ಬೆಂಬಲದಿಂದ ರಾಷ್ಟ್ರೀಯ ಪಕ್ಷಗಳು ಭಯಗ್ರಸ್ತವಾಗಿವೆ. ಇದರ ಪರಿಣಾಮವಾಗಿ, ಅವುಗಳ ಮುಖಂಡರು ವಿಭಿನ್ನ ವ್ಯಾಖ್ಯಾನಗಳನ್ನು ಮಾಡುತ್ತಿದ್ದಾರೆ. ನಮ್ಮನ್ನು ನಗಣ್ಯವಾಗಿ ನೋಡುತ್ತಿರುವುದರ ಹಿಂದೆ ಅಸೂಯೆ ಕಾಣುತ್ತಿದೆ. ಹೀಗಾಗಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾನು ಈ ಅಸೂಯೆ, ಕುಹಕ ಮತ್ತು ತಾತ್ಸಾರದ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವವನಲ್ಲ. ಸಂಪನ್ಮೂಲ ಕೊರತೆ, ಅನಾರೋಗ್ಯದ ನಡುವೆಯೂ ರಾಜ್ಯ ಸುತ್ತಿ, ಬೆವರು ಹರಿಸಿ ಪಕ್ಷ ಕಟ್ಟಿದ್ದೇನೆ. ಶ್ರಮದ ಮೇಲೆ ಪಕ್ಷ ನಿಂತಿದೆ. ಇನ್ನು ಎರಡು ದಿನಗಳಲ್ಲಿ ಹೆಚ್ಚು ಜನರ ಮನವೊಲಿಸುತ್ತೇನೆ. ಒಂದು ವಾರ ಕಾದು ನೋಡಿ, ಎಲ್ಲಾ ಗೊತ್ತಾಗುತ್ತದೆ.

l ಬಿಜೆಪಿ– ಕಾಂಗ್ರೆಸ್‌ನ ಜಿದ್ದಾಜಿದ್ದಿಗೆ ಕಾರಣವೇನು? ಇದರಿಂದ ಜೆಡಿಎಸ್‌ ಸೊರಗಿ ಹೋದಂತೆ ಕಾಣುತ್ತಿದೆಯಲ್ಲ?

ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ರಾಜ್ಯದ ವಿಧಾನಸಭೆ ಚುನಾವಣೆ ಸೆಮಿಫೈನಲ್‌. ಈ ಚುನಾವಣೆ ಅವರ ಭವಿಷ್ಯ ನಿರ್ಧರಿಸುತ್ತದೆ ಎಂದು ಭಾವಿಸಿದ್ದಾರೆ. ಆದ್ದರಿಂದ ಪ್ರಧಾನಿ ಮೋದಿ, ಸೋನಿಯಾ ಗಾಂಧಿಯಿಂದ ಹಿಡಿದು ಎಲ್ಲರೂ ರಾಜ್ಯಕ್ಕೆ ದಾಳಿ ಇಟ್ಟಿದ್ದಾರೆ.