ಬೆಂಗಳೂರು, ಫೆಬ್ರವರಿ 26 : ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹ್ಯೂಬ್ಲೋಟ್‌ ಕಂಪನಿಯ ವಜ್ರ ಖಚಿತ 50 ರಿಂದ 70 ಲಕ್ಷ ಬೆಲೆಬಾಳುವ ವಾಚ್ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ‘ವಾಚು ಡಾ.ಸುಧಾಕರ್ ಶೆಟ್ಟಿ ಅವರಿಗೆ ಸೇರಿದ್ದಿರಬಹುದು’ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದು ಈ ಬಗ್ಗೆ ಸಿಬಿಐ ತನಿಖೆಯಾದರೆ ಸೂಕ್ತ’ ಎಂದು ಹೇಳಿದರು.

ಶುಕ್ರವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು, ‘ಸರ್ಕಾರ ಕತೆಯನ್ನು ಚೆನ್ನಾಗಿ ಕಟ್ಟುತ್ತದೆ. ವಾಚ್ ವಿವಾದ ಹೊರಬಂದ ಮೊದಲ ದಿನವೇ ಸಿದ್ದರಾಮಯ್ಯ ಅವರ ಸ್ನೇಹಿತರು ಏಕೆ ಸ್ಪಷ್ಟನೆ ನೀಡಲಿಲ್ಲ?’ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಚ್ ಕಟ್ಟಬೇಡಿ ಎಂದು ನಾನು ಹೇಳಿಲ್ಲ. 2 ಕೋಟಿ ರೂ. ವಾಚನ್ನು ಬೇಕಾದರೂ ಅವರು ಕಟ್ಟಿಕೊಳ್ಳಲಿ. ಅವರನ್ನು ಸಮರ್ಥನೆ ಮಾಡಿಕೊಳ್ಳುವ ನೆಪದಲ್ಲಿ ನನ್ನ ಮಗನ ಬಗ್ಗೆ ಏಕೆ ಮಾತನಾಡಬೇಕು?, ನಾನು ಸಿದ್ದರಾಮಯ್ಯ ಮಗನ ವ್ಯವಹಾರ ಕುರಿತು ಪ್ರಶ್ನಿಸಿದ್ದೆನೇಯೇ?’ ಎಂದರು.

ಕುಮಾರಸ್ವಾಮಿ ಅವರು ಹೇಳಿದ್ದೇನು….. * ಈ ಸರ್ಕಾರ ಯಾವ ವಿವಾದದಲ್ಲೂ ಸತ್ಯಾಂಶ ಹೊರಬರದಂತೆ ನೋಡಿಕೊಳ್ಳುತ್ತದೆ. ಎಲ್ಲಾ ವಿವಾದವನ್ನು ಗುಂಡಿ ತೋಡಿ ನೆಲಸಮ ಮಾಡಲು ಸರ್ಕಾರದಲ್ಲಿ ನುರಿತ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಇಲವಾಲ ಬಸ್ ದರೋಡೆ ಪ್ರಕರಣ, ಲೋಕಾಯುಕ್ತ ಹಗರಣ, ಒಂದಂಕಿ ಲಾಟರಿ ಹಗರಣ ಯಾವುದರಲ್ಲಿಯೂ ಇನ್ನೂ ಸತ್ಯಾಂಶ ಹೊರಗೆ ಬಂದಿಲ್ಲ.

* ವಾಚು ವಿವಾದವನ್ನು ದೊಡ್ಡದು ಮಾಡಿಕೊಂಡಿದ್ದು ಮುಖ್ಯಮಂತ್ರಿಗಳು. ಅವರಿಗೆ ವಾಚ್ ಕಟ್ಟಬೇಡಿ ಎಂದು ನಾನು ಹೇಳಿಲ್ಲ. 2 ಕೋಟಿ ರೂ. ಬೆಲೆಬಾಳುವ ವಾಚ್ ಕಟ್ಟಿಕೊಂಡು ತಿರುಗಲಿ. ವಾಚ್ ವಿವಾದಲ್ಲಿ ಕತೆ ಹೇಳಿ ಜನರನ್ನು ನಂಬಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳ ಆಪ್ತ ಸ್ನೇಹಿತರು ತಮ್ಮ ಕೈಯಲ್ಲಿರುವ ವಾಚ್‌ ಅನ್ನು ಏಕೆ ಬಿಚ್ಚಿ ಕೊಡಬೇಕು. ಹೊಸ ವಾಚ್ ನೀಡುತ್ತಾರೆ ಅಲ್ಲವೇ?

* ಕಾಂಗ್ರೆಸ್‌ನ 9ಕ್ಕೂ ಅಧಿಕ ನಾಯಕರು ಶೋರೂಂನಲ್ಲಿರುವ ಕಾರಿನ ಫೋಟೋ ಇಟ್ಟುಕೊಂಡು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ನನ್ನ ಮಗನ ಬಳಿ ಇರುವ ಕಾರು ಉಡುಗೊರೆ ಪಡೆದಿದ್ದಲ್ಲ. ಅದು ಅವನು ಖರೀದಿ ಮಾಡಿದ್ದು, ಅದರ ಎಲ್ಲಾ ದಾಖಲೆಗಳು ಪಾರದರ್ಶಕವಾಗಿವೆ.

* ನಮ್ಮ ಬಳಿ ಅಮೋಘ ಕೇಬಲ್ ನೆಟ್‌ವರ್ಕ್ ಉದ್ಯಮವಿತ್ತು. ಅದನ್ನು ಡೆಲ್ ಕಂಪನಿಗೆ 83 ಕೋಟಿ ರೂ.ಗಳಿಗೆ ಮಾರಾಟ ಮಾಡಿದ್ದೇವೆ. ಅದಕ್ಕೆ 13 ಕೋಟಿ ಆದಾಯ ತೆರಿಗೆ ಕಟ್ಟಿದ್ದೇನೆ. ಆ ಉದ್ಯಮದ ಸಂಪಾದನೆಯಲ್ಲಿ ಬಂದ ಹಣದಲ್ಲಿ ನಿಖಿಲ್ ಕಾರು ಖರೀದಿ ಮಾಡಿದ್ದಾನೆ.

* ಕುಮಾರಸ್ವಾಮಿ ಅವರು 1.3 ಕೋಟಿ ಮೌಲ್ಯದ ವಾಚ್ ಅನ್ನು ದುಬೈನಲ್ಲಿ ಉಡುಗೊರೆಯಾಗಿ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದು ಯಾವ ವಾಚು ಎಂಬುದು ನನಗೆ ತಿಳಿದಿಲ್ಲ. ಇಂತಹ ವಾಚು ನನ್ನ ಬಳಿ ಇಲ್ಲ. ಇಂತಹ ವಾಚು ಕಳೆದು ಹೋಗಿದೆ ಎಂದು ನಾನು ಪೊಲೀಸ್ ಠಾಣೆಗೆ ದೂರು ಕೊಡಬೇಕು ಎಂದು ವ್ಯಂಗ್ಯವಾಡಿದರು.
* ನನ್ನ ಮನೆಯ ಬಾಗಿಲು ತೆರೆದಿಟ್ಟಿದ್ದೇನೆ. ಪೊಲೀಸರನ್ನು ಕಳುಹಿಸಿ ತನಿಖೆ ಮಾಡಿ ಎಂದು ಅಂದೇ ಹೇಳಿದ್ದೇನೆ. ನನ್ನ ಜೀವನ ತೆರೆದ ಪುಸ್ತಕ. ನಾನು ಜನರ ದುಡ್ಡನ್ನು ಲೂಟಿ ಹೊಡೆದಿಲ್ಲ. ಜನರಿಗೆ ಮೋಸ ಮಾಡಿಲ್ಲ
* ಸಿದ್ದರಾಮಯ್ಯ ಅವರ ಕೈಯಲ್ಲಿರುವ ವಾಚ್ ಡಾ.ಸುಧಾಕರ ಶೆಟ್ಟಿ ಅವರದ್ದು. ವಾಚ್ ಕಳೆದು ಹೋಗಿದೆ ಎಂದು ಅವರು 7/5/2015ರಂದು ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ. ನಮ್ಮ ಮನೆಗೆ ಯಶೋಧಾ, ಆನಂದ ಪೂಜಾರಿ (ಡ್ರೈವರ್), ಕೆಲಸದವರಾದ ಮಹಾಲಕ್ಷ್ಮೀ ಮಾತ್ರ ಬರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

* ಆನಂದ ಪೂಜಾರಿ ಅವರ ಬಳಿ ನಾನು ಮಾತುಕತೆ ನಡೆಸಿದಾಗ ಅವರು ಪೊಲೀಸರು ವಿಚಾರಣೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಈ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಈ ಬಗ್ಗೆ ತುರ್ತಾಗಿ ತನಿಖೆಯಾದರೆ ವಾಚ್ ಯಾರಿಗೆ ಸೇರಿದ್ದು? ಎಂಬುದು ಬಹಿರಂಗವಾಗಲಿದೆ.

* ನನ್ನ ಸ್ನೇಹಿತರ ಮೂಲಕ ಸುಧಾಕರ ಶೆಟ್ಟಿ ಅವರನ್ನು ನಾನು ಭೇಟಿ ಮಾಡಿದ್ದೆ. ಆಗ ವಾಚ್ ನನ್ನದು ಎಂದು ಅವರು ಹೇಳಿದ್ದರು. ವಜ್ರ ಖಚಿತ ವಾಚ್, ರೋಲೆಕ್ಸ್ ವಾಚ್, ವಜ್ರ ಖಚಿತ ಉಂಗುರ, ವಜ್ರದ ಹರಳುಗಳ್ಳುಳ್ಳ ಕೈ ಗಡಿಯಾರ ಮನೆಯಿಂದ ನಾಪತ್ತೆಯಾಗಿದೆ ಎಂದು ಅವರು ದೂರು ನೀಡಿದ್ದಾರೆ. ಈ ಬಗ್ಗೆ ನಿಖರವಾದ ತನಿಖೆಯಾಗಬೇಕು.

You missed