ನಾಗಮಂಗಲ: ಸಿದ್ದರಾಮಯ್ಯ ಒಬ್ಬ ಅವಕಾಶವಾದಿ. ಆತ ಒಂದು ಶಕ್ತಿ ಎಂದು ರಾಜ್ಯದಾದ್ಯಂತ ತಲೆಯ ಮೇಲೆ ಹೊತ್ತು ತಿರುಗಲಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

ಪಟ್ಟಣದ ಸಾರಿಗೆ ಬಸ್‌ ನಿಲ್ದಾಣದ ಸಮೀಪ ನಡೆದ ವಿಕಾಸ ಪರ್ವ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜೆಡಿಎಸ್ ಒಂದು ಅಪ್ಪ–ಮಕ್ಕಳ ಪಕ್ಷ ಎಂದು ಮುಖ್ಯಮಂತ್ರಿ ಟೀಕೆ ಮಾಡುತ್ತಾರೆ. ಆದರೆ ಅವರನ್ನು ಮುಖ್ಯಮಂತ್ರಿ ಮಾಡಲು ಸೋನಿಯಾ ಗಾಂಧಿ ಅವರ ಬಳಿಗೆ ಕರೆದೊಯ್ದಿದ್ದು ಕುಮಾರಸ್ವಾಮಿ. ಜೆಡಿಎಸ್ ಪಕ್ಷದ 7 ಜನ ಶಾಸಕರನ್ನು ಕರೆದೊಯ್ದು ಜೆಡಿಎಸ್‌ ಪಕ್ಷ ಮುಗಿಸಲು ಮಹಾವಂಚನೆ ಮಾಡಿದ್ದಾರೆ. ಅವರು ಜೆಡಿಎಸ್ ಪಕ್ಷಕ್ಕೆ ಕೊಟ್ಟ ನೋವಿನ ಪರಿಣಾಮವೇ ಇಂದು ಕಾಂಗ್ರೆಸ್‌ ದೂಳಿಪಟವಾಗುತ್ತಿದೆ. ಸಿದ್ದರಾಮಯ್ಯ ಒಬ್ಬ ಮಹಾವಂಚಕ. ಸಂಸದ ಸಿ.ಎಸ್. ಪುಟ್ಟರಾಜು ಅವ ರನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಲು ಚಲುವರಾಯಸ್ವಾಮಿ ಹುನ್ನಾರ ಮಾಡಲಿಲ್ಲವೇ? ಆತ ಆತ್ಮ ಮುಟ್ಟಿ ಕೊಂಡು ಹೇಳಲಿ. ಅಶೋಕ್ ಜಯರಾಂ ಅವರನ್ನು ಕಳೆದ ಬಾರಿ ಬೆಳೆಸಲು ಹೋದಾಗ ಅವರ ಹೆಸರನ್ನು ಹೇಳಬೇಡಿ ಎಂದು ತಾಕೀತು ಮಾಡಿದ್ದು ಚಲುವರಾಯಸ್ವಾಮಿ ಎಂದರು.

ಕುಮಾರಸ್ವಾಮಿ ಅವರನ್ನು ಮುಗಿಸಲು ಮಾಡಿದ ಯೋಜನೆ ಎಲ್ಲರಿಗೂ ಗೊತ್ತು. ಕುಮಾರಸ್ವಾಮಿಗೆ ಆರೋಗ್ಯ ಕೆಟ್ಟಿದೆ ಎಂದು ತೀರ್ಮಾನಿಸಿ ಈತನೇ ರಾಜ, ಮಾಗಡಿ ಬಾಲಕೃಷ್ಣನೇ ಮಂತ್ರಿ ಎಂದುಕೊಂಡಿದ್ದರು. ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ನನ್ನ ಬಳಿ ನಿಂತಿದ್ದರು. ಅದನ್ನು ಇಂದು ಮರೆತಿದ್ದೀರಾ? ಒಬ್ಬ ಸಾಮಾನ್ಯ ಗುತ್ತಿಗೆದಾರ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಕಾರಣ ಯಾರ ಎಂಬುದು ನಾಡಿಗೆ ಗೊತ್ತು ಎಂದರು.

 

ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ ಮಧ್ಯದ ಬಾಟಲಿ ತಯಾರಿಸಲು ಅಗುವುದು ಕೇವಲ ₹ 15. ಆದರೆ ಬಾಟಲಿಗೆ ₹ 70–80 ಹಣವನ್ನು ಜನರಿಂದ ಕಿತ್ತುಕೊಂಡು ಅದರಲ್ಲಿ ಬಂದ ಹಣವನ್ನು ಅನ್ನ ಭಾಗ್ಯಕ್ಕೆ ಆಗುವ ಖರ್ಚನ್ನು ತೆಗೆದು ಕೊಳ್ಳುತ್ತಿದ್ದಾರೆ. ಮುಂದೆ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರನ್ನು ಸಾಲ ದಿಂದ ಮುಕ್ತಗೊಳಿಸುವ ಯೋಜನೆ ರೂಪಿಸಲಾಗುವುದು. ಇಸ್ರೇಲ್‌ ಮಾದರಿಯಲ್ಲಿ ಯೋಜನೆಗಳನ್ನು ಜಾರಿ ಗೊಳಿಸಿ ರೈತರ ಆರ್ಥಿಕ ಸ್ಥಿತಿ ಉತ್ತಮ ಗೊಳಿಸಲಾಗುವುದು’ ಎಂದರು.

ಇಂದು ನಡೆಯುತ್ತಿರುವ ಸಭೆ ರಾಜ್ಯದ ಇತಿಹಾಸದಲ್ಲಿ ಯಾವುದೇ ವಿಧಾನಸಭಾ ಕ್ಷೇತ್ರದಲ್ಲೂ ಕಂಡಿಲ್ಲ, ಇಲ್ಲಿ ನಡೆದ ಮೆರವಣಿಗೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಸುರೇಶಗೌಡರಿಗಾಗಿ ಜನರು ಮಾಡಿರುವ ಖರ್ಚಿನ ಋಣವನ್ನು ತೀರಿಸುವ ಹೊಣೆ ನನ್ನದು ಎಂದು ಹೇಳಿದರು.

ಜೆಡಿಎಸ್‌ ಅಭ್ಯರ್ಥಿ ಸುರೇಶ್‌ಗೌಡ ಮಾತನಾಡಿ ಹಣದಿಂದ ಮತವನ್ನು ಕೊಂಡುಕೊಳ್ಳುತ್ತೇನೆ ಎಂಬ ಭ್ರಮೆಯಲ್ಲಿರುವ ಚಲುವರಾಯಸ್ವಾಮಿ ಅವರಿಗೆ ಇಲ್ಲಿ ಸೇರಿರುವ ಜನರೇ ಉತ್ತರ ಕೊಡುತ್ತಾರೆ. ಬೆಂಗಳೂರಿನಲ್ಲೊಬ್ಬ ಮೀರ್ ಸಾದಿಕ್, ನಾಗಮಂಗಲದಲ್ಲೊಬ್ಬ ಮಲ್ಲಪ್ಪಶೆಟ್ಟಿ ಇದ್ದಾನೆ. ಕಾಲೇಜಿನ ವಿದ್ಯಾರ್ಥಿಗಳನ್ನು ಹಣ ಮತ್ತು ಅಧಿಕಾರದ ಮತ್ತಿನಲ್ಲಿ ಡಾಬಾಗಳಿಗೆ ಕಳುಹಿಸಿ, ತಾಲ್ಲೂಕಿನ ಶೈಕ್ಷಣಿಕ ವಾತಾವರಣವನ್ನು ಕಲುಷಿತಗೊಳಿಸಿದವರು ನೀವು. ಇಲ್ಲಿ ನಡೆಯುತ್ತಿರುವುದು ಪಾಂಡವರ ಮತ್ತು ಕೌರವರ ನಡುವಿನ ಕದನ. ನಮಗೆ ದೇವೇಗೌಡರು, ಕುಮಾರಸ್ವಾಮಿ ಅವರು ಕೃಷ್ಣನಿದ್ದಂತೆ. ಅವರ ಸಾರಥ್ಯದಲ್ಲಿ ಚುನಾವಣೆ ಎದುರಿಸುತ್ತೇವೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ನಿಮಗೆ ಶಕ್ತಿ ತುಂಬದಿದ್ದರೆ ನೀವು ಇಂದು ಎಲ್ಲಿರುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಎಲ್.ಆರ್. ಶಿವರಾಮೇಗೌಡ ಮಾತನಾಡಿ ಕುಮಾರಸ್ವಾಮಿ ಅವರು ಮನೆಯ ಭಿಕ್ಷೆಯಿಂದ ಶಾಸಕ, ಮಂತ್ರಿ ಮತ್ತು ಲೋಕಸಭಾ ಸದಸ್ಯರಾಗಿ ಹಣ ಮಾಡಿ ಇಂದು ಅವರಿಗೆ ಸವಾಲು ಹಾಕುವ ಮಟ್ಟಕ್ಕೆ ಬೆಳೆದ ನಿಮಗೆ ಇಲ್ಲಿ ಸೇರಿಸುವ ಜನರೇ ಉತ್ತರ. ನೀವು ಕ್ಷೇತ್ರ ಬದಲಿಸುವುದು ಒಳ್ಳೆಯದು. ಶಿವನ ಕತ್ತಿನಲ್ಲಿ ನಾಗರಹಾವು ಇದ್ದಾಗಷ್ಟೇ ಅದಕ್ಕೆ ಭಕ್ತಿಯ ಗೌರವ. ಅದು ಕೆಳಗೆ ಇಳಿದು ಬಂದರೆ ಸತ್ತು ಹೋಗುತ್ತದೆ ಎಂದು ಟೀಕಿಸಿದರು.

ವಿಧಾನಪರಿಷತ್ ಉಪಸಬಾಪತಿ ಮರಿತಿಬ್ಬೇಗೌಡ, ಸಂಸದ ಸಿ.ಎಸ್. ಪುಟ್ಟರಾಜು, ಶಾಸಕರಾದ ಡಿ.ಸಿ. ತಮ್ಮಣ್ಣ, ಕೆ.ಸಿ. ನಾರಾಯಣಗೌಡ, ವಿಧಾನಪರಿಷತ್ ಸದಸ್ಯರಾದ ಎನ್. ಅಪ್ಪಾಜೇಗೌಡ, ಕೆ.ಟಿ. ಶ್ರೀಕಂಠೇಗೌಡ, ಶರವಣ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ತಾಲ್ಲೂಕು ಅಧ್ಯಕ್ಷ ಜವರೇಗೌಡ, ಅಶೋಕ್ ಜಯರಾಂ, ಜೆಡಿಎಸ್ ನಾಯಕಿ ಲಕ್ಷ್ಮಿ ಅಶ್ವಿನ್ ಗೌಡ , ಡಿ.ಎನ್. ಬೆಟ್ಟೇಗೌಡ, ನಾಗರತ್ನಮ್ಮ, ಡಿ.ಕೆ. ಶಿವಪ್ರಕಾಶ್, ಮುತ್ತಣ್ಣ, ರುಕ್ಮಿಣಿ ಶಂಕರ್, ರೇಣುಕ ರಾಮಕೃಷ್ಣ, ಶೇಖ್‌ ಅಹ್ಮದ್ ಸೇರಿದಂತೆ ಹಲವರಿದ್ದರು.

By R

You missed