ನಂಜನಗೂಡು: ಲಕ್ಷಾಂತರ ಜೆಡಿಎಸ್ ಕಾರ್ಯಕರ್ತರ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ ಸೇರ್ಪಡೆಗೊಂಡು ಮುಖ್ಯಮಂತ್ರಿ ಹುದ್ದೆಗೇರಿದ ಸಿದ್ದರಾಮಯ್ಯ ಅವರನ್ನು ಸಮಯಸಾಧಕ ಅಂತ ಕರೆಯಬೇಕೋ ಅಥವಾ ಅವಕಾಶವಾದಿ ಎನ್ನಬೇಕೋ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ವಿದ್ಯಾವರ್ಧಕ ಶಾಲೆ ಪಕ್ಕದ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಕಾಸ ಪರ್ವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಜೆಡಿಎಸ್ ಅವಕಾಶವಾದಿ, ಬಿಜೆಪಿ ಕೋಮುವಾದಿ ಎನ್ನುವ ಮೂಲಕ ಸಿದ್ದರಾಮಯ್ಯ ರಾಜ್ಯದ 6.5 ಕೋಟಿ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ. ತಾಕತ್ತಿದ್ದರೆ ಜೆಡಿಎಸ್ ದಲಿತ ಸಿಎಂ ಮಾಡುವುದಾಗಿ ಘೊಷಿಸುವಂತೆ ಸವಾಲು ಹಾಕುತ್ತಾರೆ. ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದಿನ ಬಾರಿಯೂ ನಾನೇ ಸಿಎಂ ಆಗುವುದಾಗಿ ಹೇಳುವ ಅವರಿಗೆ ನಾಚಿಕೆಯಾಗಬೇಕು. ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ವಿ. ಶ್ರೀನಿವಾಸಪ್ರಸಾದ್ ಅವರನ್ನು ಮೂಲೆಗುಂಪು ಮಾಡಿದ ಸಿದ್ದರಾಮಯ್ಯಗೆ ದಲಿತರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದು ಗುಡುಗಿದರು.

ಪರಮೇಶ್ವರ್ ಅವರನ್ನು ಷಡ್ಯಂತ್ರ ಹೂಡಿ ಸೋಲಿಸಿದರು. ವಿಧಾನ ಪರಿಷತ್ ಸದಸ್ಯರಾದ ಮೇಲೆ ಕನಿಷ್ಠ ಉಪಮುಖ್ಯಮಂತ್ರಿ ಸ್ಥಾನ ನೀಡಲು ಬಿಡಲಿಲ್ಲ. ವಿ.ಶ್ರೀನಿವಾಸಪ್ರಸಾದ್ ಅವರನ್ನು ಸಂಪುಟದಿಂದ ಕೈಬಿಟ್ಟು ಮೂಲೆಗುಂಪು ಮಾಡಿದರು. ಐದು ವರ್ಷದ ಅಧಿಕಾರದ ಅಮಲಿನಲ್ಲಿರುವ ಸಿದ್ದರಾಮಯ್ಯ ಹಗುರವಾಗಿ ಮಾತನಾಡುವುದನ್ನು ಇನ್ನಾದರೂ ನಿಲ್ಲಿಸಲಿ ಎಂದರು.

ಸಿದ್ದರಾಮಯ್ಯ ಹಣ ಮಾಡಿರುವ ಮದದಲ್ಲಿ ಚುನಾವಣೆ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಅದನ್ನು ಸವಾಲಾಗಿ ಸ್ವೀಕರಿಸಲಾಗಿದ್ದು, ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತ್ಯುತ್ತರ ನೀಡುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸಹಕಾರ ಬ್ಯಾಂಕ್​ನಲ್ಲಿ 8,160 ರೈತರ ಸಾಲಮನ್ನಾ ಮಾಡುವುದಾಗಿ ಘೊಷಿಸಿದ್ದ ಸಿದ್ದರಾಮಯ್ಯ, ಅದಕ್ಕೆ ಬಿಡುಗಡೆ ಮಾಡಿರುವುದು 1,300 ಕೋಟಿ ರೂ. ಮಾತ್ರ. ಉಳಿದ ಹಣವನ್ನು ಮುಂದಿನ ಜೂನ್​ನಲ್ಲಿ ಬಿಡುಗಡೆಗೊಳಿಸುವುದಾಗಿ ಹೇಳಿಕೆ ನೀಡಿದ್ದಾರೆ. ಮೇ ತಿಂಗಳಲ್ಲಿ ಚುನಾವಣೆ ನಡೆದು ನಮ್ಮ ಪಕ್ಷವೇ ಅಧಿಕಾರಕ್ಕೆ ಬರುವುದಾಗಿ ಸಿದ್ದರಾಮಯ್ಯ ಭ್ರಮೆಯಲ್ಲಿ ಇಂತಹ ಬಾಲಿಶ ಹೇಳಿಕೆ ನೀಡಿ ಜನರನ್ನು ಮರಳು ಮಾಡುತ್ತಿದ್ದಾರೆ. ಮಾತು ಮಾತಿಗೂ ಅವರಪ್ಪರಾಣೆ ಎಂದು ಹೇಳುವ ಸಿದ್ದರಾಮಯ್ಯಗೆ ನಮ್ಮ ಅಪ್ಪಂದಿರನ್ನು ಗುತ್ತಿಗೆ ಕೊಟ್ಟಿಲ್ಲ ಎಂದು ತಿರುಗೇಟು ನೀಡಿದರು.

ಹೆಬ್ಬೆಟ್ಟಿನ ಶಾಸಕ: ಜೆಡಿಎಸ್​ನಿಂದ ಎರಡು ಬಾರಿ ಸ್ಪರ್ಧಿಸಿದ್ದ ಅಭ್ಯರ್ಥಿ ಕಾಂಗ್ರೆಸ್ ಆಮಿಷಕ್ಕೆ ಬಲಿಯಾಗಿ ಉಪಚುನಾವಣೆಯಲ್ಲಿ ಪಕ್ಷ ತೊರೆದು ಗೆದ್ದು ಶಾಸಕರಾದ ಮೇಲೆ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಮಾಡಲಿದ್ದಾರೆ ಎಂದು ಜನರು ಬಯಸಿದ್ದರು. ಒಂದು ಕಡೆ ಸಂಸದರು, ಮತ್ತೊಂದು ಕಡೆ ಜಿಲ್ಲಾ ಉಸ್ತುವಾರಿ ಸಚಿವರು ಅವರನ್ನು ಕಾಡಲಾರಂಭಿಸಿ ಹೆಬ್ಬೆಟ್ಟಿನ ಶಾಸಕರಾಗಿ ಬಿಟ್ಟಿದ್ದಾರೆ ಎಂದು ಪರೋಕ್ಷವಾಗಿ ಕಳಲೆ ಕೇಶವಮೂರ್ತಿಯನ್ನು ಲೇವಡಿ ಮಾಡಿದರು.

ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನ, ಮಾಜಿ ಶಾಸಕ ಹೆಜ್ಜಿಗೆ ಶ್ರೀನಿವಾಸಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ಆರ್.ವಿ.ಮಹದೇವಸ್ವಾಮಿ, ಜಿಪಂ ಸದಸ್ಯ ಬೀರಿಹುಂಡಿ ಬಸವಣ್ಣ ಮೊದಲಾದವರು ಹಾಜರಿದ್ದರು.

ಬ್ರಹ್ಮ, ವಿಷ್ಣು, ಮಹೇಶ್ವರರಂತಿರಿ

ನಂಜನಗೂಡು ಕ್ಷೇತ್ರಕ್ಕೆ ಪಕ್ಷದಿಂದ ಆರ್.ಸೋಮಸುಂದರ್, ಬೆಳವಾಡಿ ಶಿವಕುಮಾರಸ್ವಾಮಿ ಹಾಗೂ ಎಚ್.ಎಸ್.ದಯಾನಂದಮೂರ್ತಿ ಆಕಾಂಕ್ಷಿಗಳಾಗಿದ್ದಾರೆ. ಅಭ್ಯರ್ಥಿ ಯಾರಾಗಬೇಕೆಂಬುದನ್ನು ಮುಂದಿನ ವಾರದಲ್ಲಿ ಬಿಡುಗಡೆಯಾಗುವ ಎರಡನೇ ಹಂತದ ಅಭ್ಯರ್ಥಿ ಪಟ್ಟಿಯಲ್ಲಿ ಘೊಷಣೆ ಮಾಡಲಾಗುವುದು. ಯಾರೇ ಅಭ್ಯರ್ಥಿಯಾದರೂ ಮೂವರು ಆಕಾಂಕ್ಷಿಗಳು ಬ್ರಹ್ಮ, ವಿಷ್ಣು, ಮಹೇಶ್ವರರಂತೆ ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.

ಶ್ರೀಕಂಠನ ದರ್ಶನ ಪಡೆದ ಎಚ್​ಡಿಕೆ: ಸಮಾವೇಶಕ್ಕೂ ಮೊದಲು ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಮ್ಮ ಕುಲದೇವರ ದರ್ಶನ ಪಡೆಯುವ ಹೊತ್ತಿನಲ್ಲಿ ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಘೊಷಣೆ ಮಾಡಿರುವುದು ಸಂತಸ ಸಂತಸ ತಂದಿದೆ. ರಾಜ್ಯದಲ್ಲಿ ಉತ್ತಮ ಸರ್ಕಾರ ರಚನೆ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಬೇಡಿಕೊಂಡಿ ರುವುದಾಗಿ ತಿಳಿಸಿದರು.

ನಂಜನಗೂಡು ಜೆಡಿಎಸ್ ಅಭ್ಯರ್ಥಿ ನಾನೇ ಎಂಬುದಾಗಿ ಸಮಾವೇಶದಲ್ಲಿ ಎಚ್.ಡಿ.ಕುಮಾರಸ್ವಾಮಿ ಅಧಿಕೃತ ಘೊಷಣೆ ಮಾಡಲಿದ್ದಾರೆಂಬ ನಿರೀಕ್ಷೆಯಲ್ಲಿದ್ದ ಜಿಪಂ ಸದಸ್ಯ ಎಚ್.ಎಸ್.ದಯಾ ನಂದಮೂರ್ತಿ ನಿರಾಶೆಗೊಂಡಿದ್ದಾರೆ.

 

By R

You missed