ಹುಣಸೂರು: ರಾಜಕೀಯ ಏಳು–ಬೀಳಿನ ಆಟದಲ್ಲಿ ಬೀದಿಪಾಲಾಗಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ಕರೆತಂದೆ. ಆದರೆ, ನನ್ನನ್ನೇ ಪಕ್ಷದಿಂದ ಹೊರಬರುವಂತೆ ಮಾಡಿದರು ಎಂದು ಜೆಡಿಎಸ್‌ ಮುಖಂಡ ಎಚ್‌.ವಿಶ್ವನಾಥ್ ಕಿಡಿಕಾರಿದರು.

ನಗರದಲ್ಲಿ ಶನಿವಾರ ನಡೆದ ಹಿಂದುಳಿದ ವರ್ಗ ಮತ್ತು ಕುರುಬ ಸಮಾಜದ ಸಮಾವೇಶದಲ್ಲಿ ಅವರು ಮಾತನಾಡಿದರು.

ಕುರುಬ ಸಮಾಜದ ಮುಖಂಡ ಅತಂತ್ರವಾಗುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಪಕ್ಷಕ್ಕೆ ಕರೆತಂದೆ. ಹಿರಿತನ ಲೆಕ್ಕಿಸದೆ ಸ್ಥಾನಮಾನ ಕೊಡಿಸಿದೆ. ಕುರುಬ ಸಮಾಜದವರು ಮುಖ್ಯಮಂತ್ರಿ ಗದ್ದುಗೆ ಅಲಂಕರಿಸುತ್ತಾರೆ ಎಂಬ ಸಂತೋಷಕ್ಕೆ ಪಕ್ಷದಲ್ಲಿ ಹಿರಿತನ ಮತ್ತು ಮುತ್ಸದ್ದಿತನ ಬಿಟ್ಟು ಸ್ಥಾನ ನೀಡಿದರ ಫಲವಾಗಿ ರಾಜಕೀಯ ಪಾಠ ಕಲಿತೆ ಎಂದರು.

1983ರಲ್ಲಿ ಒಕ್ಕಲಿಗರು ಸಿದ್ದರಾಮಯ್ಯನ ಕೈ ಹಿಡಿಯದಿದ್ದರೆ ಇಂದು ರಾಜಕೀಯವಾಗಿ ನೆಲಕಚ್ಚುತ್ತಿ ದ್ದರು. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ ಸಿದ್ದರಾಮಯ್ಯ ನಂತರ ಅವರನ್ನೇ ತುಳಿಯುವ ಹುನ್ನಾರ ನಡೆಸಿದರು. ಈ ಎಲ್ಲದರ ಪಾಪದ ಫಲ ಈ ಬಾರಿ ಉಣ್ಣಲಿದ್ದಾರೆ ಎಂದು ಕಿಡಿಕಾರಿದರು.

ಕುರುಬ ಸಮಾಜದ ವ್ಯಕ್ತಿ ಮುಖ್ಯಮಂತ್ರಿ ಆಗಬೇಕೆಂಬ ಕನಸು ನನಸಾದರೂ ಸಮುದಾಯಕ್ಕೆ ಅವರಿಂದ ಸಿಕ್ಕ ಕೊಡುಗೆ ಏನು? ಮೊದಲಿಗೆ ಕುರುಬ ಶಾಸಕರನ್ನು ಸಚಿವರನ್ನಾಗಿ ನೇಮಕ ಮಾಡಿಕೊಳ್ಳಲಿಲ್ಲ. ಯಡಿಯೂರಪ್ಪ ಮತ್ತು ಎಸ್‌.ಎಂ.ಕೃಷ್ಣ ತಮ್ಮ ಸಂಪುಟದಲ್ಲಿ ಕುರುಬ ಶಾಸಕರಿಗೆ ಆದ್ಯತೆ ನೀಡಿದ್ದರು ಎಂದು ಹೇಳಿದರು.

ಸಣ್ಣ ಕೋಮುಗಳು ಜೆಡಿಎಸ್‌ ಕೈ ಹಿಡಿಯಲು ಮುಂದಾಗಿದ್ದು, ‘ಮೇಲ್ವ ರ್ಗದ ವಿಶ್ವಾಸದಲ್ಲಿ ತಳವರ್ಗದ ಕಲ್ಯಾಣ’ ಕಾಣುವ ಸೂತ್ರ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುರುಬ ಸಮಾಜದ ಅಧ್ಯಕ್ಷ ಡಿ.ಕುನ್ನೇಗೌಡ ಮಾತನಾಡಿ, ಈ ಬಾರಿ ಚುನಾವಣೆಗೆ ಕುರುಬ ಸಮಾಜದಿಂದ ₹5 ಲಕ್ಷ ದೇಣಿಗೆ ನೀಡಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಫಜಲುಲ್ಲಾ, ಹಬ್ಬನಕುಪ್ಪೆ ಜಯರಾಂ, ಶಿವಶೇಖರ್‌, ಶಿವಕುಮಾರ್‌ ಮಾತನಾಡಿದರು. ಕುರುಬ ಸಮಾಜದ ಹಲವಾರು ಮುಖಂಡರು ಇದ್ದರು.