ಬೆಂಗಳೂರು: ರಾಜ್ಯವನ್ನು ಮತ್ತೊಂದು ಕಾಶ್ಮೀರ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದರು. ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಮಂಗಳೂರು ಗಲಭೆಯಲ್ಲಿ ಪೊಲೀಸರ ಪಾತ್ರದ ಕುರಿತ ಸಿ.ಡಿ ಬಿಡುಗಡೆ ಮಾಡಿದರು. ಅಲ್ಲದೆ, ಪ್ರತಿಭಟನಾಕಾರರು ಬಂದರು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಸಿಸಿ ಟಿವಿ ವಿಡಿಯೊಗಳನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು. ಮಂಗಳೂರಿನಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತಿ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನಡೆಯಬೇಕಿದ್ದ ‘ಪೀಪಲ್ಸ್ ಕೋರ್ಟ್’ ಎಂಬ ಚರ್ಚಾ ಕಾರ್ಯಕ್ರಮ ನಡೆಸಲು ಅವಕಾಶ ನಿರಾಕರಿಸಿದ ಸರ್ಕಾರದ ಕ್ರಮವನ್ನು ಪ್ರಬಲವಾಗಿ ವಿರೋಧಿಸಿದರು. ಉಡುಪಿ ಜಿಲ್ಲಾಧಿಕಾರಿಯ ಮ್ಯಾಜಿಸ್ಟ್ರೇಟ್‌ ತನಿಖೆಯಿಂದ ಏನು ವರದಿ ಬರಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಗಲಭೆಕೋರರು ಕೇರಳದಿಂದ ಬಂದವರು ಎಂದು ಗೃಹ ಸಚಿವರು ಹೇಳುತ್ತಾರೆ, ಪೊಲೀಸರು ನಿತ್ಯವೂ ಒಂದೊಂದು ಕತೆ ಕಟ್ಟುತ್ತಿದ್ದಾರೆ. ಡಿಸೆಂಬರ್ 24 ರಂದು ಪ್ರತಿಭಟನಾಕಾರರು ಕಲ್ಲುಗಳನ್ನು ತಂದ ಬಗ್ಗೆ ಕತೆ ಕಟ್ಟಿದರು. ಆದರೆ ನಿಜವಾಗಿ ಅಲ್ಲಿ ಆಗಿರುವುದೇ ಬೇರೆ. ಮೂರು ಬಾರಿ ಕಟ್ಟಡ ತ್ಯಾಜ್ಯ ಸಾಗಿಸಿದ್ದ ಸರಕು ಸಾಗಾಣೆ ಟೆಂಪೊ ಚಾಲಕ, ನಾಲ್ಕನೇ ಬಾರಿ ಬರುವಾಗ ಗಲಭೆ ಉಂಟಾದ ಕಾರಣ ತನ್ನ ಆಟೊವನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದ. ಆದರೆ ಅದನ್ನೇ ಕತೆ ಕಟ್ಟಿ ಕಲ್ಲು ತಂದು ಇಡಲಾಗಿದೆ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

ನಾನು ಈ ವಿಡಿಯೊ ಸಾಕ್ಷ್ಯವನ್ಮು ಸದನದಲ್ಲಿ ಬಹಿರಂಗಪಡಿಸಲು ಸಂಗ್ರಹಿಸಿ ಇಟ್ಟಿದ್ದೆ. ಆದರೆ ಯಾವಾಗ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಿಗೇ ಮಾತನಾಡಲು ಅವಕಾಶ ನೀಡಲಿಲ್ಲವೋ ಆಗ ಸಿ.ಡಿಯನ್ನು ಬಹಿರಂಗಪಡಿಸಲು ನಿರ್ಧರಿಸಿದೆ. ಸಿ.ಡಿ.ಯನ್ನು ಈಗ ಜನತೆಯ ತೀರ್ಮಾನಕ್ಕೆ ಬಿಡಲಾಗಿದೆ ಎಂದರು. ನ್ಯಾಯಮೂರ್ತಿ ಗೋಪಾಲಗೌಡ ಅವರು ಮಂಗಳೂರಿನಲ್ಲಿ ಮಾತನಾಡದಂತೆ ಮುಖ್ಯಮಂತ್ರಿ ಅವರು ಸೂಚಿಸಿದ್ದರೇ ಎಂದು ಪ್ರಶ್ನಿಸಿದರು. ಗಲಭೆಯಲ್ಲಿ ಪೊಲೀಸರಿಗೆ ಗಾಯವಾಗಿದೆ ಎಂದಿದ್ದಾರೆ. ಆದರೆ ಗಾಯಗೊಂಡ ಒಬ್ಬನೇ ಒಬ್ಬ ಪೊಲೀಸ್ ಅಧಿಕಾರಿಯನ್ನು ನಾನು ಆಸ್ಪತ್ರೆಯಲ್ಲಿ ನೋಡಲಿಲ್ಲ. ಗಲಭೆ ಬಗ್ಗೆ ಸದನ ಸಮಿತಿ ರಚಿಸಬೇಕು ಎಂದು ಅವರು ಒತ್ತಾಯಿಸಿದರು. ವಿಧಾನಸಭೆಯಲ್ಲಿ ಮಂಗಳೂರು ಗಲಭೆಯ ಬಗ್ಗೆ ವಿಷಯ ಪ್ರಸ್ತಾಪಿಸುತ್ತೇನೆ. ಇದನ್ನು ಸುಲಭವಾಗಿ ಬಿಡುವುದಿಲ್ಲ. ಪೊಲೀಸ್ ಠಾಣೆಗೆ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದರು ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಒಂದು ಬಂದೂಕು ಅಂಗಡಿಗೆ ನುಗ್ಗಲು ಯತ್ನಿಸಿದರು ಎಂದು ಪೊಲೀಸ್ ಕಮಿಷನರ್ ಹೇಳುತ್ತಾರೆ. ಯಾರು ಹೇಳಿದ್ದು ಸರಿ ಎಂಬುದನ್ನು ಜನತೆಗೆ ತಿಳಿಸಲಿ ಎಂದು ಅವರು ಹೇಳಿದರು.

By R

You missed