ಚಿಕ್ಕಬಳ್ಳಾಪುರ: ‘ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವ ಉದ್ದೇಶದಿಂದ ಹಲವಾರು ಪಕ್ಷಗಳ ಜತೆ ಮೈತ್ರಿ ಬಗ್ಗೆ ಚರ್ಚೆ ನಡೆಸಿದ್ದೇವೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಬಾಗೇಪಲ್ಲಿಯಲ್ಲಿ ಗುರುವಾರ ಜೆಡಿಎಸ್ ವತಿಯಿಂದ ಆಯೋಜಿಸಿದ್ದ ರೈತರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಮೈತ್ರಿ ಬಗ್ಗೆ ಈಗಾಗಲೇ ಶರದ್ ಪವಾರ್ ಅವರ ಜತೆ ಚರ್ಚಿಸಲಾಗಿದೆ. ನಾಲ್ಕೈದು ದಿನಗಳಲ್ಲಿ ಎನ್.ಸಿ.ಪಿ ಮತ್ತು ಜೆಡಿಎಸ್ ಮೈತ್ರಿಯ ಅಧಿಕೃತ ಪ್ರಕಟಣೆ ಹೊರಬೀಳಲಿದೆ’ ಎಂದು ತಿಳಿಸಿದರು. ‘ಇವತ್ತು ಕಾಂಗ್ರೆಸ್, ಬಿಜೆಪಿಯ ಮುಖಂಡರು ಪರಸ್ಪರ ಟೀಕೆಯಲ್ಲಿ ನಿರತರಾಗಿದ್ದಾರೆ. ನಾವು ನಾಡಿನ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಹೀಗಾಗಿ ಜನ ನಮ್ಮನ್ನು ಬೆಂಬಲಿಸುತ್ತಿದ್ದಾರೆ. ಬೇರೆ ಪಕ್ಷದವರ ಅಬ್ಬರದ ಪ್ರಚಾರ ಮಾಧ್ಯಮಗಳಲ್ಲಿ ಕಾಣುತ್ತಿದೆ. ಆದರೆ ನಮ್ಮ ಕಾರ್ಯಕ್ರಮಗಳಿಗೆ ಜನ ಸ್ವಯಂ ಪ್ರೇರಣೆಯಿಂದ ಬರುತ್ತಿದ್ದಾರೆ’ ಎಂದರು. ‘ನಮಗೆ ಈ ಬಾರಿ ಸರ್ಕಾರ ರಚನೆಗೆ ಬೇಕಾದಷ್ಟು ಸ್ಥಾನಗಳು ದೊರೆಯಲಿವೆ. ಅಧಿಕಾರ ಬಿಟ್ಟು ಹೋಗುವ ಸಂದರ್ಭದಲ್ಲಿ ಬಜೆಟ್ ನಲ್ಲಿ ಘೋಷಿಸುವ ಯೋಜನೆಗಳಿಗೆ ಬೆಲೆ ಇಲ್ಲ. ಆ ಘೋಷಣೆಗಳ ಜಾರಿ ಮುಂಬರುವ ಮುಖ್ಯಮಂತ್ರಿ ಮೇಲೆ ಅವಲಂಬಿಸಿರುತ್ತದೆ’ ಎಂದು ಹೇಳಿದರು.
15 Feb, 2018
‘ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವ ಉದ್ದೇಶದಿಂದ ಹಲವಾರು ಪಕ್ಷಗಳ ಜತೆ ಮೈತ್ರಿ ಬಗ್ಗೆ ಚರ್ಚೆ ನಡೆಸಿದ್ದೇವೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.