ಕಲಬುರ್ಗಿ: ‘ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಎಚ್‌ಕೆಆರ್‌ಡಿಬಿ)ಗೆ ಬಿಡುಗಡೆಯಾಗಿರುವ ಅನುದಾನದ ಸಂಪೂರ್ಣ ಬಳಕೆ ಹಾಗೂ ಸಿಬ್ಬಂದಿ ಕೊರತೆ ನೀಗಿಸಿ ಅಭಿವೃದ್ಧಿಯ ವೇಗ ಹೆಚ್ಚಿಸುವುದು ಸರ್ಕಾರದ ಆದ್ಯತೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸುವುದರಿಂದ ಈ ಭಾಗಕ್ಕೆ ಏನೂ ಪ್ರಯೋಜನ ಆಗದು. ಅದರ ಬದಲಿಗೆ ಇನ್ನು 8–10 ದಿನಗಳಲ್ಲಿ ಇಡೀ ದಿನ ಕಲಬುರ್ಗಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುತ್ತೇನೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘371 (ಜೆ) ಅಡಿ ವಿಶೇಷ ಸ್ಥಾನಮಾನ ಲಭಿಸಿದ್ದರೂ ಅದರ ಪೂರ್ಣ ಪ್ರಯೋಜನ ಸಿಗುತ್ತಿಲ್ಲ. ಮೀಸಲಾತಿ ಮತ್ತು ನೇಮಕಾತಿಯಲ್ಲಿ ಅನ್ಯಾಯ ಆಗಿದೆ ಎಂದು ಇಲ್ಲಿಯವರು ಹೇಳುತ್ತಿದ್ದಾರೆ. ಇದರ ಮೇಲ್ವಿಚಾರಣೆಗೆ ಸಂಪುಟ ಉಪ ಸಮಿತಿಯನ್ನೂ ರಚಿಸಲಾಗಿದೆ’ ಎಂದರು.

‘ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಗೆ ಬಿಡುಗಡೆ ಮಾಡಿರುವ ಹಣ ಖರ್ಚಾಗದಿರಲು ಸಿಬ್ಬಂದಿ ಕೊರತೆ ಕಾರಣ ಎಂಬುದು ನನ್ನ ಗಮನಕ್ಕೆ ಬಂದಿದೆ. ವರ್ಗಾವಣೆಗೊಂಡ ಬೇರೆ ಭಾಗದವರು ಇಲ್ಲಿಗೆ ಬರದೇ ಕಳ್ಳಾಟ ಆಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಹೊಸದಾಗಿ ನೇಮಕಾತಿಯನ್ನೂ ಮಾಡಿಕೊಳ್ಳುತ್ತೇವೆ’ ಎಂದರು.

‘ಎಚ್‌ಕೆಆರ್‌ಡಿಬಿಗೆ ಕೇವಲ ₹1,000 ಕೋಟಿ ಅನುದಾನ ಇಡಲಾಗಿದೆ ಎಂದು ಖರ್ಗೆ ಅವರು ಪತ್ರ ಬರೆದಿದ್ದರು. ₹1,500 ಕೋಟಿ ಅನುದಾನ ಮುಂದುವರೆಸಲಾಗಿದೆ. ಅಭಿವೃದ್ಧಿಗೆ ಹಣದ ಕೊರತೆ ಇಲ್ಲ’ ಎಂದು ಪುನರುಚ್ಚರಿಸಿದರು.

‘ಇಡೀ ರಾಜ್ಯದ ಅಭಿವೃದ್ಧಿಗೆ ನಮ್ಮ ಸರ್ಕಾರ ದೊಡ್ಡ ನೀಲನಕ್ಷೆ ಹೊಂದಿದೆ. ರಾಜ್ಯದಲ್ಲಿ ಒಂಬತ್ತು ಉತ್ಪಾದನಾ ವಲಯ ಸ್ಥಾಪಿಸಲಾಗುತ್ತಿದೆ. ಕಲಬುರ್ಗಿ, ಬೀದರ್‌, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಚಾಲನೆ ನೀಡಲಾಗಿದೆ’ ಎಂದು ಹೇಳಿದರು.

‘ಬೆಂಬಲ ಬೆಲೆಯಡಿ ಹೆಸರು ಕಾಳು ಖರೀದಿಗೆ ಕೆಲ ತೊಡಕು ಎದುರಾಗಿದ್ದು, ಶೀಘ್ರ ಸಭೆ ನಡೆಸಿ ಪರಿಹರಿಸುತ್ತೇವೆ. ಮಳೆ ಕೊರತೆ ಕಾರಣ ಉದ್ದು, ತೊಗರಿ ಬೆಳೆಯೂ ಕುಂಠಿತಗೊಂಡಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಪರಿಹಾರ ನೀಡಲಾಗುವುದು’ ಎಂದು ಅವರು ಹೇಳಿದರು.