ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನನ್ನನ್ನು ಹೊಗಳುವುದೂ ಬೇಡ, ತೆಗಳುವುದೂ ಬೇಡ. ನಾನು ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ಸಾಕಷ್ಟು ಸಮಸ್ಯೆ ಬಗ್ಗೆ ವಿವರಿಸಿದ್ದೇನೆ. ಕೇವಲ ಕೇಳಿಸಿಕೊಳ್ಳುತ್ತಾರೆ. ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಸಮಾಧಾನ ಹೊರ ಹಾಕಿದರು. ರಾಜ್ಯಕ್ಕೆ ಬಂದಾಗಲಾದರೂ ಮಹದಾಯಿ ವಿಷಯ ಪ್ರಸ್ತಾಪ ಮಾಡುತ್ತಾರೆ ಎಂದುಕೊಂಡಿದ್ದೆ. ಅವರು ಅದನ್ನೂ ಮಾಡಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪ್ರೆಸ್​ಕ್ಲಬ್ ಬೆಂಗಳೂರು, ವರದಿಗಾರರ ಕೂಟ ಆಯೋಜಿಸಿದ್ದ 2018ರ ವಿಧಾನಸಭೆ ಚುನಾವಣೆ ‘ಮಾತು ಮಂಥನ’ದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನನ್ನನ್ನು ಹೊಗಳಿರುವ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ರಾಹುಲ್ ಗಾಂಧಿ ಹಾಸನಕ್ಕೆ ಬಂದಾಗ ಕಮ್ ಕ್ಲೀನ್ ಅಂದಿದ್ದರು. ಮಾಜಿ ಪ್ರಧಾನಿಗೆ ಕಾಂಗ್ರೆಸ್ ಏನು ಮಾತಾಡಿದೆ ಎಂದು ತಿಳಿದುಕೊಂಡಿರುತ್ತಾರೆ. ಕನ್ನಡಿಗ ಪ್ರಧಾನಿಯಾದರೆ ಗೌರವ ಕೊಡುವ ಸಂಸ್ಕೃತಿ ಇವರಿಗೆ ಇಲ್ಲ ಎಂದು ಮೋದಿ ಗೌರವದ ಮಾತುಗಳನ್ನಾಡಿದ್ದಾರೆ. ಇದರಲ್ಲಿ ಬೇರೆ ಉದ್ದೇಶವೂ ಇಲ್ಲ, ವಿಶೇಷವೂ ಇಲ್ಲ ಎಂದು ಹೇಳಿದರು.

ಪೋಟೋ ತೆಗೆಸಿದರು

ಜೆ.ಎಚ್.ಪಟೇಲ್ ಸಿಎಂ ಆಗಿದ್ದಾಗ ನನ್ನ ಫೋಟೋವನ್ನು ವಿಧಾನಸೌಧದಲ್ಲಿ ಹಾಕಿದ್ದರು. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ತೆಗೆಸಿದರು. ಸಿದ್ದರಾಮಯ್ಯ ಸ್ವರ್ಗದಿಂದ ಇಳಿದು ಬಂದಿಲ್ಲ. ಬಿಜೆಪಿ ಬಿ ಟೀಂ ಜೆಡಿಎಸ್ ಎಂದು ಸಿದ್ದರಾಮಯ್ಯ ಒಬ್ಬರೇ ಹೇಳುತ್ತಿದ್ದಾರೆ. ರಾಹುಲ್ ಗಾಂಧಿ ಹಾಗೆ ಹೇಳುವುದನ್ನು ಬಿಟ್ಟಿದ್ದಾರೆ. ಖರ್ಗೆ ಸೇರಿ ಯಾವ ನಾಯಕರೂ ಮಾತನಾಡುತ್ತಿಲ್ಲ. ಮುಸ್ಲಿಂ ವೋಟ್ ಗಿಟ್ಟಿಸಿಕೊಳ್ಳಲು ಹೀಗೆ ಹೇಳುತ್ತಿದ್ದು, ರಾಜ್ಯದ ಮುಸ್ಲಿಂರಿಗೆ ನಾನೇನು ಮಾಡಿದ್ದೇನೆ ಎನ್ನುವುದು ಗೊತ್ತಿದೆ. ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತೇವೆ, ಯಾರಿಗೂ ಬೆಂಬಲ ಇಲ್ಲ ಎಂದರು.

ರಾಜೀನಾಮೆ ತಡೆದಿದ್ದ ಮೋದಿ

ಮೋದಿ ಪ್ರಧಾನಿಯಾದರೆ ಪಾರ್ಲಿಮೆಂಟ್ ಸದಸ್ಯತ್ವಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿದ್ದೆ. ಆಗ ಗುಜರಾತ್​ಗೆ ಬರಲಿ ನಾನೇ ದೇವೇಗೌಡರನ್ನು ನೋಡಿಕೊಳ್ತೇನೆ ಎಂದು ಮೋದಿ ಹೇಳಿದ್ದರು. ನಂತರ ಅವರು ಪ್ರಧಾನಿಯಾದರು. ನಾನು ಹೇಳಿದ ಮಾತಿನಂತೆ ರಾಜೀನಾಮೆ ಕೊಡಲು ಹೋಗಿದ್ದೆ. ಚುನಾವಣೆ ವೇಳೆ ಇಬ್ಬರೂ ಮಾತಾಡಿದ್ದೇವೆ. ನೀವು ಹಿರಿಯರು, ಉತ್ತಮ ಆಡಳಿತ ನೀಡಿದ್ದೀರಿ. ರಾಜೀನಾಮೆ ನೀಡಬಾರದು ಎಂದು ಮನವಿ ಮಾಡಿದರು. ಅದು ನಮ್ಮ ಮೊದಲ ಭೇಟಿ ಆಗಿತ್ತು ಎಂದು ದೇವೇಗೌಡರು ನೆನಪಿಸಿಕೊಂಡರು.

ಹಗಲು ರಾತ್ರಿ ಧರ್ಮ ಒಡೆದರು

ಲಿಂಗಾಯುತ ಧರ್ಮ ಒಡೆಯಲು ಇಬ್ಬರು ಸಚಿವರನ್ನ ಸಿಎಂ ಬಿಟ್ಟಿದ್ದರು. ಅವರು ಬೆಳಗ್ಗೆ ಯಿಂದ ಸಂಜೆವರೆಗೂ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದರು. ಇದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಎಚ್​ಡಿಡಿ ತಿಳಿಸಿದರು.

ಸಾಮಾಜಿಕ ನ್ಯಾಯ ಗೊತ್ತಿದೆ

ಗೊಲ್ಲ ಸಮಾಜದ ಎ.ಕೃಷ್ಣಪ್ಪ, ಮೆರಾಜುದ್ದೀನ್ ಪಟೇಲ್​ರನ್ನು ಜೆಡಿಎಸ್ ಅಧ್ಯಕ್ಷರನ್ನಾಗಿ ಮಾಡಿದೆ. ಕುರುಬ ಸಮಾಜದ ಸಿದ್ದರಾಮಯ್ಯರನ್ನು ಡಿಸಿಎಂ ಮಾಡಿದೆ. ಇಲ್ಲಿ ಪುತ್ರ ವ್ಯಾಮೋಹ ಎಲ್ಲಿದೆ? ಯಾರೂ ನಮ್ಮ ಪಕ್ಷದ ಚುಕ್ಕಾಣಿ ಹಿಡಿಯಲು ಮುಂದೆ ಬಾರದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷ ಮಾಡಿದೆ. ಸಾಮಾಜಿಕ ನ್ಯಾಯ ನನಗೆ ಗೊತ್ತಿದೆ. ಪಕ್ಷ ಕಟ್ಟೋದೂ ಗೊತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

By R

You missed