ರಾಮನಗರ: ರಾಜ್ಯದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ 115 ಅಲ್ಲ 150 ಸ್ಥಾನ ಗೆಲ್ಲುವ ಶಕ್ತಿ ಜೆಡಿಎಸ್​ಗೆ ಇದೆ ಎಂದು ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಚನ್ನಪಟ್ಟಣದ ದೊಡ್ಡಮಳೂರು ಬಳಿ ಮಂಗಳವಾರ ಆಯೋಜಿಸಿದ್ದ ವಿಕಾಸ ಪರ್ವದಲ್ಲಿ ಕಾರ್ಯಕರ್ತರು 150 ಸ್ಥಾನ ಗೆಲ್ಲಬೇಕು ಎಂದು ಘೊಷಣೆ ಕೂಗಿದ ವೇಳೆ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್ ಪರವಾಗಿ ಜನ ಬೆಂಬಲವಿದೆ ಎಂದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಚನ್ನಪಟ್ಟಣದಲ್ಲಿ ರೇಷ್ಮೆ ಬೆಳೆಗಾರರೊಂದಿಗೆ ಕಾಟಾಚಾರಕ್ಕೆ ಸಂವಾದ ನಡೆಸಿದ್ದಾರೆ. ಬಡವರನ್ನು ಬಲವಂತದಿಂದ ತಂದು ಕೂರಿಸಿ ಹೇಗೆ ಸಂವಾದ ನಡೆಸಿದರು ಎನ್ನುವುದು ನನಗೆ ಗೊತ್ತಿದೆ ಎಂದು ಟೀಕಿಸಿದರು.

ಕಳೆದ ಜೂ.28ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರಿ ಬ್ಯಾಂಕ್​ನಲ್ಲಿ ರೈತರು ಮಾಡಿದ್ದ 50 ಸಾವಿರ ರೂ.ವರೆಗಿನ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಇದಕ್ಕಾಗಿ 8160 ಕೋಟಿ ರೂಪಾಯಿ ನೀಡುವುದಾಗಿ ಘೊಷಿಸಿದ್ದರು. ಆದರೆ 9 ತಿಂಗಳು ಕಳೆದರೂ 1500 ಕೋಟಿ ರೂ. ಬಿಡುಗಡೆ ಮಾಡಿಲ್ಲ. ಉಳಿದ ಹಣವನ್ನು ಮುಂದಿನ ಜೂನ್​ನಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎನ್ನುವ ಗ್ಯಾರಂಟಿ ಏನು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ ಘೊಷಿಸಿದ ಸಾಲ ಮನ್ನಾಗೆ ಕುಮಾರಸ್ವಾಮಿಯೇ ಹಣ ಬಿಡುಗಡೆ ಮಾಡಬೇಕಿದೆ ಎಂದು ತಿರುಗೇಟು ನೀಡಿದರು.

ಎರಡು ರಾಷ್ಟ್ರೀಯ ಪಕ್ಷಗಳು ಒಬ್ಬರ ಮೇಲೆ ಒಬ್ಬರು ಚಾರ್ಜ್​ಶೀಟ್ ಹೊರತರುವ ಮೂಲಕ ಪರಸ್ಪರ ಭ್ರಷ್ಟಾಚಾರಗಳನ್ನು ಹೊರಹಾಕುತ್ತಿವೆ. ಭ್ರಷ್ಟಾಚಾರ ರಹಿತ ಮತ್ತು ಜನರ ಆಡಳಿತ ನೀಡಲು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಹುಮತ ನೀಡಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು.

ವಿಕಾಸ ಪರ್ವ ಸಮಾವೇಶ ಉದ್ಘಾಟಿಸಿದ ಎಚ್.ಡಿ.ದೇವೇಗೌಡ ಮಾತನಾಡಿ, ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಅಧಿಕಾರ ಹಿಡಿಯಲೇ ಬೇಕು ಎಂದು ಹೋರಾಟ ಮಾಡುತ್ತಿವೆ. ಇದರ ನಡುವೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಬೇಕು ಎನ್ನುವ ಹೋರಾಟವನ್ನು ಕುಮಾರಸ್ವಾಮಿ ಮಾಡಿದ್ದಾರೆ. ನಾನೇ ಕುಮಾರಸ್ವಾಮಿ ಎಂದು ಭಾವಿಸಿ ಅವರನ್ನು ಗೆಲ್ಲಿಸಿಸಬೇಕು. ಈ ಮೂಲಕ ತಮ್ಮ ಭ್ರಷ್ಟಾಚಾರವನ್ನು ಜನರ ಮುಂದೆ ಹೇಳುತ್ತಿರುವ ಸರ್ಕಾರಗಳನ್ನು ದೂರ ಮಾಡಬೇಕು ಎಂದು ಕರೆ ನೀಡಿದರು.

ತಮಿಳುನಾಡಿನ ರಾಜಕೀಯ ಶಕ್ತಿಯನ್ನು ರಾಜ್ಯದ ಜನತೆ ಮೈ ಗೂಡಿಸಿಕೊಳ್ಳಬೇಕು. ಯಾರ ಹಂಗೂ ಇಲ್ಲದೆ ಅವರು ಕಾವೇರಿ ನೀರಿಗಾಗಿ ಹೋರಾಡುತ್ತಿತ್ತಾರೆ. ಇಂತಹ ಶಕ್ತಿ ರಾಜ್ಯದಲ್ಲೂ ಬರಬೇಕಾದರೆ ಬಿಜೆಪಿ ಮತ್ತು ಕಾಂಗ್ರೆಸ್​ನ್ನು ದೂರ ಮಾಡಿ, ಜೆಡಿಎಸ್ ಅಧಿಕಾರಕ್ಕೆ ತನ್ನಿ. ರಾಜ್ಯದಲ್ಲಿ ಜೆಡಿಎಸ್​ಗೆ ಅಧಿಕಾರ ಇಲ್ಲವೆಂದಾದರೆ, ಕಾವೇರಿ ವಿಚಾರದಲ್ಲಿ ಹೋರಾಟ ಮಾಡಲು ಹೇಗೆ ಸಾಧ್ಯ?ಎಂದು ಪ್ರಶ್ನಿಸಿದರು.

ಮಾಜಿ ಪ್ರಧಾನಿ ದೇವೇಗೌಡ ದೇಶದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅಂಥಹವರು ಈ ವಯಸ್ಸಿನಲ್ಲಿಯೂ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಈ ಬಾರಿ ಸ್ವತಂತ್ರ ಸರ್ಕಾರ ರಚನೆ ಮಾಡಲು ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಅವರ ಶ್ರಮಕ್ಕೆ ಜನತೆ ಬಲ ತುಂಬಬೇಕು ಎಂದು ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಹೇಳಿದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಇದ್ದರು.

 ಇಗ್ಗಲೂರು ಬ್ಯಾರೇಜ್ ದೇವೇಗೌಡರ ಕೊಡುಗೆ: ಆಧುನಿಕ ಭಗೀರಥ ಎಂದು ಕರೆಸಿಕೊಳ್ಳುವ ಸ್ಥಳೀಯ ಶಾಸಕರು ಇಗ್ಗಲೂರು ಬ್ಯಾರೇಜ್ ಯಾರ ಕೊಡುಗೆ ಎನ್ನುವುದನ್ನು ಮರೆತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ದೇವರಾಜು ಅಸರು ಕಾಲದಲ್ಲಿ 1977ರಲ್ಲಿ ಇಗ್ಗಲೂರು ಮತ್ತು ಹಾರೋಬೆಲೆ ಕಟ್ಟಲು ತೀರ್ವನಿಸಲಾಯಿತು. 1982ರ ಅಂದಿನ ಕಾಂಗ್ರೆಸ್ ಸರ್ಕಾರ ಈ ಅಣೆಕಟ್ಟುಗಳನ್ನು ನಿರ್ವಿುಮಿಸಿದರೆ ಉಪಯೋಗಕ್ಕೆ ಬರಲ್ಲ ಎಂದು ಯೋಜನೆ ನಿಲ್ಲಿಸಿತ್ತು. ಆದರೆ 1983ರಲ್ಲಿ ರಾಮಕೃಷ್ಣ ಹೆಗ್ಗೆಡೆ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ದೇವೇಗೌಡರು ತಜ್ಞರಾದ ಬಾಳೆ ಕುಂದ್ರಿ ಅವರನ್ನು ಕರೆತಂದು ಸ್ಥಳ ಪರಿಶೀಲನೆ ನಡೆಸಿ ಜಲಾಶಯದ ಮಟ್ಟ ಹೆಚ್ಚಿಸಿದರು. ಇದರಿಂದ ಸತ್ತಿದ್ದ ಯೋಜನೆಗೆ ಮರುಜೀವ ಬಂತು. 1985ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಅವರಿಂದ ಶಂಕುಸ್ಥಾಪನೆ ಮಾಡಿಸಿದ್ದು ದೇವೇಗೌಡರು. ನಂತರ ದೇವೇಗೌಡರು ಪ್ರಧಾನಿಯಾಗಿದ್ದಾಗ ಉದ್ಘಾಟಿಸಲಾಯಿತು. ಈ ಯೋಜನೆಯೇ ಇಲ್ಲದಿದ್ದರೆ ನೀರು ಎಲ್ಲಿಗೆ ಹರಿಯುತ್ತಿತ್ತು ಎಂದು ಪ್ರಶ್ನಿಸಿದರು. ಈ ವಿಚಾರವನ್ನು ಚನ್ನಪಟ್ಟಣದ ಪಕ್ಷದ ಯುವ ಕಾರ್ಯಕರ್ತರು ಮನೆ ಮನೆಗೆ ಪ್ರಚಾರ ಮಾಡಬೇಕು ಮನವಿ ಮಾಡಿದರು.

 

ಕಮಿಷನ್​ಗಾಗಿ ರಾಜಕೀಯಕ್ಕೆ ಬಂದಿಲ್ಲ: ಚನ್ನಪಟ್ಟಣದಲ್ಲಿ ಯಾವುದೇ ಕಾಮಗಾರಿ ನಡೆಯಬೇಕಿದ್ದರೂ ಗುತ್ತಿಗೆದಾರ ಕಮಿಷನ್ ನೀಡಿದ ಮೇಲೆ ಜೆಸಿಬಿಯನ್ನು ಮುಂದಕ್ಕೆ ತರಬೇಕಂತೆ. ಇಂತಹ ಪರಿಸ್ಥಿತಿಯನ್ನು ನಾನು ರಾಮನಗರದಲ್ಲಿ ನಿರ್ಮಾಣ ಮಾಡಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.

ನಮಗೆ ಕಮಿಷನ್ ಸರ್ಕಾರ ಬೇಡ, ನಾನು ಕಮಿಷನ್​ಗಾಗಿ ರಾಜಕೀಯಕ್ಕೆ ಬಂದಿಲ್ಲ. ಆದರೆ ಚನ್ನಪಟ್ಟಣದಲ್ಲಿ ಯಾವುದೇ ಕಾಮಗಾರಿ ನಡೆಯಬೇಕಿದ್ದರೂ ಕಮಿಷನ್ ಕೊಡಬೇಕಂತೆ. ಇದಕ್ಕೆ ಮುಕ್ತಿಹಾಡಬೇಕಾದರೆ ಜೆಡಿಎಸ್ ಬಲಗೊಳಿಸಿ ಎಂದು ಕುಮಾರಸ್ವಾಮಿ ಕರೆ ನೀಡಿದರು.

ಚನ್ನಪಟ್ಟಣದಲ್ಲಿ ಜೆಡಿಎಸ್​ಗೆ ಭದ್ರ ನೆಲೆಯಿದೆ. 1994ರಲ್ಲಿಯೇ ದೇವೇಗೌಡರನ್ನು ಚನ್ನಪಟ್ಟಣದಿಂದ ಕಣಕ್ಕೆ ಇಳಿಯುವಂತೆ ಎಂ.ವರದೇಗೌಡರು ಒತ್ತಾಯಿಸಿದ್ದರು. ಆದರೆ ಅಂದು ನನ್ನ ಬಲವಂತಕ್ಕೆ ರಾಮನಗರದಲ್ಲಿ ನಿಂತರು. ನಂತರ 2004ರಲ್ಲಿಯೂ ನನಗೆ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಲಾಯಿತು. ಆಗ ನಾನು ರಾಮನಗರಿಂದ ಸ್ಪರ್ಧೆ ಮಾಡಿದೆ ಎಂದರು.

ಕೆಲ ಮುಖಂಡರು ನೀರಾವರಿ ಯೋಜನೆ ಜಾರಿ ಮಾಡಿ ಆಧುನಿಕ ಭಗೀರಥ ಎಂದು ಬೀಗುತ್ತಿದ್ದಾರೆ. ಈಗಾಗಲೇ ಶಿಲೆಯನ್ನೂ ಮಾಡಿಸಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಬಂದರೆ ಅದು ಅನಾವರಣ ಆಗಬಹುದು. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ಕನಸಿನ ಮಾತು.

| ಎಚ್.ಡಿ.ದೇವೇಗೌಡ
ಮಾಜಿ ಪ್ರಧಾನಿ

By R

You missed