ಮಡಿಕೇರಿ: ಕಾವೇರಿ ನದಿಯ ಉಗಮ ಸ್ಥಳವಾದ ತಲಕಾವೇರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಮಹಾಸಂಕಲ್ಪ ಪೂಜೆ ನಡೆಸಿ ರಾಜ್ಯದಲ್ಲಿ ಸಮೃದ್ಧಿ ನೆಲೆಸುವಂತೆ ಕೋರಿಕೊಂಡರು.

19 ವರ್ಷಗಳ ಬಳಿಕ ಮುಖ್ಯಮಂತ್ರಿಯೊಬ್ಬರು ಈ ಕ್ಷೇತ್ರಕ್ಕೆ ಭೇಟಿ ನೀಡಿದ್ದು ವಿಶೇಷ. 1999ರಲ್ಲಿ ಜೆ.ಎಚ್‌. ಪಟೇಲ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಬಳಿಕ ಪಟೇಲ್‌ ಅವರು ಅಧಿಕಾರ ಕಳೆದುಕೊಂಡಿದ್ದರು. ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಯಾವ ಮುಖ್ಯಮಂತ್ರಿಯೂ ಇಲ್ಲಿಗೆ ಮತ್ತೆ ಭೇಟಿ ನೀಡುತ್ತಿರಲಿಲ್ಲ.

ಭಾಗಮಂಡಲದ ಭಗಂಡೇಶ್ವರನ ದೇಗುಲ ದರ್ಶನದ ಬಳಿಕ, ತಲಕಾವೇರಿಯ ಮಹಾಗಣಪತಿ, ಅಗಸ್ತ್ಯೇಶ್ವರ ದೇಗುಲದಲ್ಲಿ ಮಹಾಸಂಕಲ್ಪ ಪೂಜೆಯನ್ನು ಮುಖ್ಯಮಂತ್ರಿ ನೆರವೇರಿಸಿದರು. ಮಳೆಯೂ ಪೂಜೆಗೆ ಸಾಕ್ಷಿಯಾಯಿತು. ಕ್ಷೇತ್ರದ ಪ್ರಧಾನ ಅರ್ಚಕ
ನಾರಾಯಣ್‌ ಆಚಾರ್‌ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ
ವಿವಿಧ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿ, ‘ಈ ಕ್ಷೇತ್ರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ಮೌಢ್ಯದಲ್ಲಿ ನಂಬಿಕೆಯಿಲ್ಲ. ನಮಗೆ ದೇವರು ನೀಡಿರುವ ಅಧಿಕಾರವನ್ನು ದೇವರೇ ಕಾಪಾಡಲಿದ್ದಾನೆ. ಜೆ.ಎಚ್‌. ಪಟೇಲ್‌ರದ್ದು ಕಾಕತಾಳೀಯ ಘಟನೆ’ ಎಂದು ಹೇಳಿದರು.

‘ನಾಡಿನ ಜನರಿಗೆ ಸಂಪೂರ್ಣ ಅನುಗ್ರಹ ನೀಡಬೇಕು; ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಕಾವೇರಿ ತಾಯಿಯಲ್ಲಿ ಪ್ರಾರ್ಥಿಸಿರುವೆ. ಹಲವು ವರ್ಷಗಳ ಬಳಿಕ
ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳು ಭರ್ತಿಯಾಗಿದ್ದು, ಕರ್ನಾಟಕ ಹಾಗೂ ತಮಿಳುನಾಡಿನ ನೀರಿನ ಸಮಸ್ಯೆ ಸದ್ಯಕ್ಕೆ ಬಗೆಹರಿದಿದೆ. ಉತ್ತರ ಕರ್ನಾಟಕ ಭಾಗದ ಜಲಾಶಯಗಳು ಭರ್ತಿಯಾಗಿದ್ದು, ಅಲ್ಲಿಗೂ ಶೀಘ್ರವೇ ಭೇಟಿ ನೀಡುತ್ತೇನೆ’ ಎಂದು ಹೇಳಿದರು.

‘ದುಃಖ, ದಾರಿದ್ರ್ಯನಿವಾರಣೆ ಮಾಡಬೇಕೆಂದು ತಲಕಾವೇರಿ ಕ್ಷೇತ್ರದಲ್ಲಿ ಕೋರಿಕೊಂಡಿದ್ದೇವೆ. ಮಳೆ ಹಾಗೂ ಬೆಳೆ ಚೆನ್ನಾಗಿ ಆಗಲಿದೆ ಎನ್ನುವ ನಂಬಿಕೆಯಿದೆ’ ಎಂದು ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.