ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಅಸಮಾಧಾನ ಉಂಟಾಗಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಉತ್ಪ್ರೇಕ್ಷಿತ. ದೊಡ್ಡ ಭೂಕಂಪ ಸಂಭವಿಸಿದೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

‘ಬಿಜೆಪಿ 2008 ರಲ್ಲಿ ಸರ್ಕಾರ ರಚಿಸಿದಾಗ ಮಂತ್ರಿ ಸ್ಥಾನ ಸಿಗಲಿಲ್ಲವೆಂದು, ರಾಜ್ಯದ ಹಲವೆಡೆ  ಪ್ರತಿಭಟನೆಗಳು ನಡೆದಿದ್ದವು. ಸರ್ಕಾರಿ ವಾಹನಗಳಿಗೆ ಬೆಂಕಿ ಇಟ್ಟು ಸುಡಲಾಗಿತ್ತು. ಭಾವೋದ್ವೇಗದಲ್ಲಿ ಪ್ರತಿಭಟನೆ ನಡೆಸುವುದು ಸಹಜ. ಈ ಸಂದರ್ಭದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಕಾರಾತ್ಮಕ ದಿಕ್ಕಿನಲ್ಲಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂಬುದನ್ನು ಮಾಧ್ಯಮಗಳು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಮಾತನಾಡಿ, ‘ಸಂಪುಟದಲ್ಲಿ ಹೊಸಬರು ಮತ್ತು ಹಳಬರು ಇದ್ದಾರೆ. ಸಚಿವ ಸ್ಥಾನ ಸಿಗದವರ ಬೆಂಬಲಿಗರ ಅಸಮಾಧಾನದ ವಿಚಾರವನ್ನೇ ಹೆಚ್ಚು ತೋರಿಸಲಾಗುತ್ತಿದೆ. ಅದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ’ ಎಂದು ವ್ಯಂಗ್ಯವಾಡಿದರು.

‘ಅಸಮಾಧಾನಗೊಂಡ ಶಾಸಕರಿಗೆ ತಿಳಿ ಹೇಳುವ ಕೆಲಸ ಮಾಡುತ್ತೇವೆ. 6 ಸಚಿವ ಸ್ಥಾನಗಳನ್ನು ಖಾಲಿ ಬಿಟ್ಟಿದ್ದೇವೆ. ಎಂ.ಬಿ.ಪಾಟೀಲ, ರೋಷನ್‌ಬೇಗ್‌, ರಾಮಲಿಂಗಾರೆಡ್ಡಿ ಅವರಿಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಬಹುದು. ಆತಂಕಪಡಬೇಕಾಗಿಲ್ಲ. 78 ಜನ ಶಾಸಕರಲ್ಲಿ 22 ಮಂದಿ ಅರ್ಹರಿಗೆ ಮಾತ್ರ ಅವಕಾಶ ಸಿಕ್ಕಿದೆ. ಅವಕಾಶ ಸಿಗದವರು ಅರ್ಹರಲ್ಲ ಎಂದು ಹೇಳುವುದಿಲ್ಲ’ ಎಂದರು.

‘ಅನ್ನಭಾಗ್ಯ’ ಮುಂದುವರಿಯುತ್ತದೆ:

‘ಅನ್ನಭಾಗ್ಯ’ ಸೇರಿ ಎಲ್ಲ ಜನಪ್ರಿಯ ಕಾರ್ಯಕ್ರಮಗಳನ್ನು ಮುಂದುವರಿಯುತ್ತವೆ. ಹೊಸ ಕಾರ್ಯಕ್ರಮಗಳನ್ನು ಸೇರಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮನ್ವಯ ಸಮಿತಿ ಸಲಹೆ ನೀಡುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಹಿರಿಯ ಸಚಿವರಾದ ಆರ್‌.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್‌ ಮತ್ತು ಇತರರು ಇದ್ದರು.

1,500  ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ
ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಗರದಲ್ಲಿ ಒಟ್ಟು 1,500  ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಇನ್ನೂ 3800 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಮುಚ್ಚುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು