ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರೋತ್ಸಾಹಿಸಲು ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಪ್ರತಿ ಮಹಿಳೆಗೂ ₹ 2,000 ‘ಪ್ರಜಾ ಪ್ರಭುತ್ವ ಪ್ರೋತ್ಸಾಹ ಧನ’ ನೀಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಜೆಡಿಎಸ್‌ ಭರವಸೆ ನೀಡಿದೆ.

ಅಲ್ಲದೆ, ರೈತರು ವಿವಿಧ ಬ್ಯಾಂಕ್‌ಗಳಲ್ಲಿ ಮಾಡಿರುವ ₹53,000 ಕೋಟಿ ಸಾಲವನ್ನು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮನ್ನಾ ಮಾಡುವುದಾಗಿಯೂ ವಾಗ್ದಾನ ನೀಡಿದೆ.

ರೈತರು, ಬಡವರು, ಕೂಲಿ ಕಾರ್ಮಿಕರು ಮತ್ತು ಮಧ್ಯಮ ವರ್ಗದ ಮತಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್‌, ಗ್ರಾಮಿಣ ಪ್ರದೇಶದ ನಿರುದ್ಯೋಗ ನಿವಾರಣೆಗಾಗಿ ಪ್ರತಿ ಯುವಕರಿಗೆ ತಿಂಗಳಿಗೆ ₹7,000 ದಿಂದ ₹8,000 ವೇತನ ನೀಡಲಾಗುವುದು. ಇವರ ಮೂಲಕ ಸರ್ಕಾರಿ ಜಮೀನುಗಳಲ್ಲಿ ಅರಣ್ಯ ಬೆಳೆಸಲಾಗುವುದು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರ ಸ್ವಾಮಿ ಪಕ್ಷದ ಕಚೇರಿಯಲ್ಲಿ ಸೋಮವಾರ ಪ್ರತ್ಯೇಕ ರೈತ ಪ್ರಣಾಳಿಕೆ (ಸಾಲಮುಕ್ತ– ಅನ್ನದಾತ) ಒಳಗೊಂಡ ‘ಜನತಾ ಪ್ರಣಾಳಿಕೆ– ಜನರದ್ದೇ ಆಳ್ವಿಕೆ’ ಎಂಬ ಘೋಷಣೆ ಹೊಂದಿರುವ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಐದು ವರ್ಷಗಳಲ್ಲಿ 2 ಲಕ್ಷ ಕುಟುಂಬಗಳಿಗೆ ಉದ್ಯೋಗ ಒದಗಿಸಲಾಗುವುದು. ಇದಕ್ಕಾಗಿ ಸರ್ಕಾರದಿಂದ ₹2,000 ಕೋಟಿ ಮತ್ತು ಖಾಸಗಿ ಹೂಡಿಕೆದಾರರ ಮೂಲಕ ₹ 3,000 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುವುದು. ಬಡ ಮಹಿಳೆಯರಿಗೆ ತಿಂಗಳಿಗೆ ₹2,000 ಕುಟುಂಬ ನಿರ್ವಹಣಾ ವೆಚ್ಚ, 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ತಿಂಗಳಿಗೆ ₹6,000, 80 ವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ ₹8,000 ಪಿಂಚಣಿ, ಗರ್ಭಿಣಿಯರಿಗೆ ಮೂರು ತಿಂಗಳು ಮತ್ತು ಹೆರಿಗೆ ನಂತರ, ಬಾಣಂತಿ ಅವಧಿಯಲ್ಲಿ ಮೂರು ತಿಂಗಳು ತಲಾ ₹6,000 ಸಹಾಯ ಧನ ನೀಡುವಾಗಿ ಜೆಡಿಎಸ್‌ ವಾಗ್ದಾನ ಮಾಡಿದೆ.

ನೀರಾವರಿಗಾಗಿ ₹1.50 ಲಕ್ಷ ಕೋಟಿ ನಿಗದಿ. ಅರಸೀಕೆರೆ, ತಿಪಟೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಜನತೆಗೆ ಕುಡಿಯುವ ಉದ್ದೇಶಕ್ಕಾಗಿ ಪಶ್ಚಿಮ ಘಟ್ಟಗಳಿಂದ 60 ಟಿಎಂಸಿ ಅಡಿ ನೀರು ಹರಿಸಲಾಗುವುದು. ಬೆಂಗಳೂರಿಗೂ ಇದೇ ಯೋಜನೆ ಮೂಲಕ ನೀರು ತರಲಾಗುವುದು.

ಮಾಗಡಿಯಲ್ಲಿ ‘ಕೆಂಪೇಗೌಡ ಕೌಶಲ ವಿಶ್ವವಿದ್ಯಾಲಯ’ ಸ್ಥಾಪಿಸಿ, ಇಲ್ಲಿ ಎಲ್ಲ ವರ್ಗದ ಹುದ್ದೆಗಳನ್ನು ರಾಜ್ಯದ ನಿವೃತ್ತ ಅಧಿಕಾರಿಗಳು ಮತ್ತು ಸೈನಿಕರಿಗೆ ನೀಡಲಾಗುವುದು. ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಮಾದರಿಯಲ್ಲಿ ಮುಸ್ಲಿಮರಿಗಾಗಿ ಪ್ರತ್ಯೇಕ ವಿಶ್ವವಿದ್ಯಾಲಯ.

ಲೋಕಾಯುಕ್ತವನ್ನು ಬಲಪಡಿಸಿ, ಎಸಿಬಿ ನಿರ್ಮೂಲನೆ ಮಾಡಲಾಗುವುದು. ಲೋಕಾಯುಕ್ತಕ್ಕೆ ಪ್ರತ್ಯೇಕ ಪೊಲೀಸ್‌ ವ್ಯವಸ್ಥೆ ಮಾಡಲಾಗುವುದು. ವಕೀಲರಿಗೆ ಈಗ ನೀಡುತ್ತಿರುವ ಸ್ಟೈಫಂಡ್‌ ಅನ್ನು ₹ 5,000 ಕ್ಕೆ ಏರಿಕೆ.

ಬೀದಿ ಬದಿಯ ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲು ಮೊಬೈಲ್‌ ಬ್ಯಾಂಕಿಂಗ್‌ ಸ್ಥಾಪನೆ. ಎಪಿಎಂಸಿ, ತರಕಾರಿ ಮಾರುಕಟ್ಟೆ ಸೇರಿ ಸಣ್ಣ ವ್ಯಾಪಾರಿಗಳು ಇರುವ ಸ್ಥಳಗಳಲ್ಲಿ ₹ 100 ರಿಂದ ₹ 5000 ವರೆಗೆ ಸಾಲ ನೀಡಲಾಗುವುದು. ಸಾಲ ಪಡೆದವರು ₹ 100 ಕ್ಕೆ ₹ 2 ಕಮಿಷನ್‌ ನೊಂದಿಗೆ ಅದೇ ದಿನ ಸಂಜೆ ಮರಳಿಸಬೇಕು. ಇದರಿಂದಾಗಿ ಮೀಟರ್‌ ಬಡ್ಡಿ ದಂಧೆ ಮಾಡುವವರಿಂದ ನಡೆಯುವ ಕಿರುಕುಳ ತಪ್ಪಿಸಬಹುದು. ರಿಕ್ಷಾ ಚಾಲಕರು, ತರಕಾರಿ, ಸೊಪ್ಪು ಮಾರುವವರೂ ಸೇರಿ ಎಲ್ಲ ಬಗೆಯ ತಳ್ಳುಗಾಡಿ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ ಎಂದು ಪ್ರಣಾಳಿಕೆ ವಿವರಿಸಿದೆ.

ಬಿಬಿಎಂಪಿ ವ್ಯಾಪ್ತಿಯ ನಾಲ್ಕು ದಿಕ್ಕುಗಳಲ್ಲೂ ತಲಾ 350 ಹಾಸಿಗೆಗಳ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆ, ಅಂಗಾಂಗ ಕಸಿ ಮಾಡಿಸಿಕೊಳ್ಳುವ ರೋಗಿಗಳಿಗೆ ತಗಲುವ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು, ಡೆಂಗಿ ಮತ್ತು ಚಿಕೂನ್‌ ಗುನ್ಯ ರೋಗಗಳಿಗೆ ಉಚಿತ ಚಿಕಿತ್ಸೆ, ಕೊಳೆಗೇರಿ ವಾಸಿಗಳಿಗೆ ಉಚಿತ ಸೊಳ್ಳೆ ಪರದೆ ವಿತರಿಸಲಾಗುವುದು ಎಂದೂ ವಾಗ್ದಾನ ಮಾಡಿದೆ.

* ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಯೋಜನೆಗಳಿಗೆ ಸಾಲ ಮಾಡಿ ಹಣ ತರುವುದಿಲ್ಲ. ಅದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಿಕೊಳ್ಳುತ್ತೇವೆ
–ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯ ಅಧ್ಯಕ್ಷ

ಪ್ರಣಾಳಿಕೆ ಮುಖ್ಯಾಂಶಗಳು

* ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಅಕ್ರಮ, ಅವ್ಯವಹಾರ ತಡೆಯಲು ಕ್ಯಾಮೆರಾ ಜಾಲ ಸ್ಥಾಪಿಸಲಾಗುವುದು. ಇದರ ಮೇಲುಸ್ತುವಾರಿಯನ್ನು ‘ಮೂರನೇ ಕಣ್ಣು’ ತಂಡ ರಚನೆ

* ಗ್ರಾಮ ವಾಸ್ತವ್ಯ ಮತ್ತೆ ಆರಂಭ. ಮುಖ್ಯಮಂತ್ರಿ ಜನರ ಮನೆಗೆ ತೆರಳಿ, ಸ್ಥಳೀಯ ಸಮಸ್ಯೆಗಳನ್ನು ಆಲಿಸುವರು

* ಡೊನೇಷನ್‌ ಹಾವಳಿಗೆ ಅಂತ್ಯ ಹಾಡಲಾಗುವುದು. ಕಟ್ಟಡ ನಿರ್ಮಾಣ, ಟ್ರಸ್ಟ್‌ ಹೆಸರಿನಲ್ಲಿ ಶುಲ್ಕ ವಸೂಲಿಗೆ ಕಡಿವಾಣ ಹಾಕಲಾಗುವುದು

* ಕಲಬುರ್ಗಿಯಲ್ಲಿ ಸೌರ ಶಕ್ತಿ ಕೈಗಾರಿಕೆ ಅಭಿವೃದ್ಧಿ, ಚಿತ್ರದುರ್ಗದಲ್ಲಿ ಲೈಟಿಂಗ್‌ ಕ್ಲಸ್ಟರ್‌ ಅಭಿವೃದ್ಧಿ, ಹಾಸನದಲ್ಲಿ ನೆಲಹಾಸು ಟೈಲ್ಸ್‌ ಹಾಗೂ ಸ್ನಾನಗೃಹ ಫಿಟ್ಟಿಂಗ್‌ಗಳ ಉತ್ಪಾದನೆಯ ಉದ್ಯಮಕ್ಕೆ ₹ 2000 ಕೋಟಿ ಹೂಡಿಕೆ. ಚಾಮರಾಜನಗರದಲ್ಲಿ ಮೆಡಿಕಲ್‌ ಎಲೆಕ್ಟ್ರಾನಿಕ್ಸ್‌ ಉದ್ಯಮ ಸ್ಥಾಪನೆ, ರಾಮನಗರದಲ್ಲಿ 1 ಲಕ್ಷ ಜನರಿಗೆ ಉದ್ಯೋಗ ನೀಡುವ ಫಿಲಂ ಸಿಟಿ ಸ್ಥಾಪನೆ

* ಮುಸ್ಲಿಂ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ನೀಡಲು ಜಿಲ್ಲಾ ಜಖತ್ ಮಂಡಳಿ ಸ್ಥಾಪನೆ

* ಡಯಾಲಿಸಿಸ್‌ ಅಗತ್ಯವಿರುವವರಿಗೆ ₹ 6000 ಸಹಾಯಧನ, ₹ 2 ಲಕ್ಷಕ್ಕಿಂತ ಆದಾಯ ಕಡಿಮೆ ಇರುವ ಕುಟುಂಬಗಳ ಸದಸ್ಯರು ಕ್ಯಾನ್ಸರ್‌, ಹೃದಯ ವೈಫಲ್ಯ, ನರ ಸಂಬಂಧಿ ಕಾಯಿಲೆಗಳು, ಕಿಡ್ನಿ ವೈಫಲ್ಯಕ್ಕೆ ತುತ್ತಾದರೆ ಸಿಜಿಎಚ್‌ಎಸ್‌ ದರದಲ್ಲಿ ಚಿಕಿತ್ಸೆ

* ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ ಪ್ರೋತ್ಸಾಹ ಧನ ₹ 5000 ಕ್ಕೆ ಏರಿಕೆ

ರೈತ ಪ್ರಣಾಳಿಕೆ: * ಕೃಷಿ ವಾಣಿಜ್ಯ ಸಂಶೋಧನೆಗೆ ಒತ್ತು, ನಂದಿನಿ ಬ್ರಾಂಡ್‌ ಮಾದರಿಯಲ್ಲಿ ಎಣ್ಣೆ ಕಾಳುಗಳ ಬೆಳೆಗೆ ಪ್ರೋತ್ಸಾಹ, ಹನಿ ನೀರಾವರಿಯಲ್ಲಿ ಸೋಲಾರ್‌ ಶಕ್ತಿ ಬಳಕೆ ಮತ್ತು ಒಳಾಂಗಣ ಕೃಷಿಗೆ ಒತ್ತು

* ಇಸ್ರೇಲ್‌ ಮಾದರಿಯ ಕೃಷಿಗೆ ಪ್ರೋತ್ಸಾಹ, ಕೃಷಿ ತಂತ್ರಜ್ಞಾನಕ್ಕಾಗಿ ವಿಶೇಷ ವ್ಯವಸ್ಥೆ, ನೀರು ಸಂಗ್ರಹ ವ್ಯವಸ್ಥೆಗೆ ಶೇ 100 ಸಬ್ಸಿಡಿ, ಸಣ್ಣ ಟ್ರಾಕ್ಟರ್‌ಗಳ ಖರೀದಿಗೆ ಶೇ 75 ಮತ್ತು ಇತರ ಕೃಷಿ ಸಲಕರಣೆಗಳ ಖರೀದಿಗೆ ಶೇ 90 ರಷ್ಟು ಸಬ್ಸಿಡಿ

* ರೈತ ಸಾರಥಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರೈತರು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಉಚಿತ ಸಾರಿಗೆ ವ್ಯವಸ್ಥೆ

* ಬಿತ್ತನೆ ಬೀಜ, ರಸಗೊಬ್ಬರ, ಕೀಟ ನಾಶಕ ಮತ್ತಿತರ ಸಾಮಗ್ರಿ ನೀಡಲು ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ  ಕೃಷಿ ಬ್ಯಾಂಕ್‌ ಸ್ಥಾಪನೆ

* ರೈತರಿಗೆ ದಿನ 24 ಗಂಟೆ 3 ಫೇಸ್‌ನಲ್ಲಿ ವಿದ್ಯುತ್‌ ಪೂರೈಕೆ.

* ರಾಜ್ಯವನ್ನು ನಾಲ್ಕು ವಲಯಗಳಲ್ಲಿ ವಿಶೇಷ ಕೃಷಿ ವಲಯಗಳ ಸ್ಥಾಪನೆ

*ಪದವೀಧರರು ಕೃಷಿ ಆಧಾರಿತ ಉದ್ದಿಮೆ ಸ್ಥಾಪಿಸಲು ₹ 10 ಲಕ್ಷ ಸಾಲ ಸೌಲಭ್ಯ.

By R

You missed