ಬೆಂಗಳೂರು: ಬೈಯ್ಯಪ್ಪನಹಳ್ಳಿ- ಮೈಸೂರು ರೋಡ್ ಮಾರ್ಗದಲ್ಲಿ ಆರು ಬೋಗಿಗಳ ಮೆಟ್ರೊ ರೈಲು ಶುಕ್ರವಾರದಿಂದ ಸಂಚಾರ ಆರಂಭಿಸಲಿದೆ.
ನೇರಳೆ ಮಾರ್ಗದ ಬೈಯ್ಯಪ್ಪನಹಳ್ಳಿ ನಿಲ್ದಾಣದಲ್ಲಿ ಸಂಜೆ 5.30ಕ್ಕೆ ಹೊಸ ರೈಲಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಹಸಿರು ನಿಶಾನೆ ತೋರಲಿದ್ದು, ಈ ರೈಲು ಮೆಜೆಸ್ಟಿಕ್ ನಿಲ್ದಾಣದವರೆಗೆ ಸಂಚರಿಸಲಿದೆ. ಇದೇ ರೈಲಿನಲ್ಲಿ ವಿಧಾನಸೌಧದವರೆಗೆ ಕುಮಾರಸ್ವಾಮಿ ಪ್ರಯಾಣಿಸಲಿದ್ದಾರೆ.
ಈ ರೈಲಿನ ಮೊದಲ ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲಾಗುವುದು. ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಹೊಸ ರೈಲು ಓಡಾಡಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ನಿಂದ (ಬಿಇಎಂಎಲ್) ಖರೀದಿಸಿದ ಮೂರು ಹೊಸ ಬೋಗಿಗಳನ್ನು, ಈಗಾಗಲೇ ಕಾರ್ಯಾಚರಿಸುತ್ತಿರುವ ಮೂರು ಬೋಗಿಗಳ ರೈಲಿಗೆ ಜೋಡಿಸಲಾಗಿದೆ.
ಮೆಟ್ರೊ ರೈಲು ಪ್ರಯಾಣಿಕರ ಪೈಕಿ ಶೇ 40ರಷ್ಟು ಮಹಿಳೆಯರಿರುವುದನ್ನು ಸಮೀಕ್ಷೆಯಿಂದ ಖಚಿತಪಡಿಸಿಕೊಂಡಿರುವ ನಿಗಮ, ಈ ಕಾರಣಕ್ಕೆ ಆರು ಬೋಗಿಯ ರೈಲಿನ ಮೊದಲ ಬೋಗಿಯನ್ನು ಮಹಿಳೆಯರಿಗೆ ಮೀಸಲಿಟ್ಟಿದೆ.
ಆರು ಬೋಗಿಗಳ ರೈಲು ಸೇವೆಯನ್ನು ಏ.15 ರಿಂದ ಆರಂಭಿಸಲು ಬಿಎಂಆರ್ಸಿಎಲ್ ಲೆಕ್ಕಾಚಾರ ಹಾಕಿತ್ತು. ಬಿಇಎಂಎಲ್ನಿಂದ ಫೆ.14ರಂದು ಮೂರು ಬೋಗಿ ಪಡೆದು ಬೈಯ್ಯಪ್ಪನಹಳ್ಳಿ ಡಿಪೊದಲ್ಲಿ ಇರಿಸಲಾಗಿತ್ತು. ತಂತ್ರಾಂಶಗಳ ಅಳವಡಿಕೆ, ಎಸಿ, ಆಸನಗಳು, ಕಂಬಿ, ಚಕ್ರ, ವಿನ್ಯಾಸ, ವಿದ್ಯುತ್ ಸಂಪರ್ಕ ಹಾಗೂ ಸಿಗ್ನಲಿಂಗ್ ಮತ್ತಿತರ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಚಾಲನೆ ನೀಡಲು ತಡವಾಗಿದೆ.
ಬಿಇಎಂಎಲ್ನಿಂದ ₹ 1,421 ಕೋಟಿ ವೆಚ್ಚದಲ್ಲಿ 150 ಬೋಗಿಗಳನ್ನು ಖರೀದಿಸಲಾಗುತ್ತಿದೆ. ಬಿಇಎಂಎಲ್ ಜತೆ ಮಾಡಿಕೊಂಡ ಗುತ್ತಿಗೆ ಕರಾರಿನಂತೆ, ಮೊದಲ ಮೂರು ಬೋಗಿಗಳನ್ನು 2018ರ ಜೂನ್ನಲ್ಲಿ ಪೂರೈಸಬೇಕಿತ್ತು. ನಿಗಮವು ಒತ್ತಡ ಹೇರಿದ್ದರಿಂದ ನಾಲ್ಕು ತಿಂಗಳ ಮುನ್ನವೇ ಮೂರು ಬೋಗಿಗಳನ್ನು ಬಿಇಎಂಎಲ್ ನೀಡಿದೆ.
2018 ರ ಸೆಪ್ಟೆಂಬರ್ ಅಥವಾ ಅಕ್ಟೋಬರ್ನಿಂದ ಪ್ರತಿ ತಿಂಗಳು ಮೂರರಂತೆ ಉಳಿದ ಬೋಗಿಗಳ ಪೂರೈಕೆ ಆಗಲಿದೆ. ಒಪ್ಪಂದದ ಪ್ರಕಾರ, 2019ರ ಡಿಸೆಂಬರ್ಗೆ ಎಲ್ಲ ಬೋಗಿಗಳು ಸಿಗಬೇಕು. ಆದರೆ,
2019ರ ಜೂನ್ ವೇಳೆಗೆ ಎಲ್ಲ ಬೋಗಿಗಳನ್ನು ಪೂರೈಸುವಂತೆ ನಿಗಮ ಮನವಿ ಸಲ್ಲಿಸಿದೆ.