ರಾಜ್ಯದ ಕೃಷಿ ವಲಯದಲ್ಲಿ ಸಮಗ್ರ ಸುಧಾರಣೆ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಕೃಷಿ ತಜ್ಞ ಎಂ.ಎಸ್. ಸ್ವಾಮಿನಾಥನ್ ಜೊತೆ ಶುಕ್ರವಾರ ಸಮಾಲೋಚನೆ ನಡೆಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ, ‘ನಾವು ಸಾಲಮನ್ನಾ ಮಾಡುವುದು ಮಾತ್ರವಲ್ಲ, ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವುದಕ್ಕೂ ಬದ್ಧ. ಈ ಸಲುವಾಗಿ ಹವಾಮಾನ ಆಧರಿತ ಕೃಷಿ, ನೀರಿನ ಸದ್ಬಳಕೆಗೂ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

‘ಕೃಷಿ ಕ್ಷೇತ್ರದ ನ್ಯೂನತೆಗಳನ್ನು ಸರಿಪಡಿಸುವ ಉದ್ದೇಶದಿಂದ ಸ್ವಾಮಿನಾಥನ್‌ ನೀಡಿದ್ದ ಸಲಹೆಗಳನ್ನು ಆಧರಿಸಿ 2006ರಲ್ಲಿ ಕೃಷಿ ನೀತಿ ರೂಪಿಸಲಾಗಿತ್ತು. ಈಗಿನ ಸಂದರ್ಭಕ್ಕೆ ಅನುಗುಣವಾಗಿ ಅದರಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಬೇಕಿದೆ. ಈ ಸಲುವಾಗಿ 30 ಜಿಲ್ಲೆಗಳ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಳ್ಳುತ್ತೇವೆ. ಇನ್ನು 12 ದಿನಗಳ ಒಳಗೆ ನಾನು ಹಾಗೂ ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ಸೇರಿ ಈ ಕ್ಷೇತ್ರದ ಪರಿಣಿತರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇವೆ’ ಎಂದರು.

92ನೇ ವಯಸ್ಸಿನಲ್ಲೂ ಸ್ವಾಮಿನಾಥನ್‌ ಅವರು ಕೃಷಿ ಅಭಿವೃದ್ಧಿ ಹಾಗೂ ರೈತರ ಸಂಕಷ್ಟ ಪರಿಹರಿಸುವ ಕುರಿತು ಬದ್ಧತೆ ಹೊಂದಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸಬೇಕು. ಸರ್ಕಾರ ಇಸ್ರೇಲ್‌ ಮಾದರಿಯ ಕೃಷಿ ಅಳವಡಿಸಿಕೊಳ್ಳಲು ಮುಂದಾಗಿರುವುದನ್ನು ಅವರು ಸ್ವಾಗತಿಸಿದ್ದಾರೆ ಎಂದರು.

ಶಿವಶಂಕರ ರೆಡ್ಡಿ, ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ, ಪಶುಸಂಗೋಪನಾ ಸಚಿವ ವೆಂಕಟರಾವ್‌ ನಾಡಗೌಡ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವಿಶ್ವದಲ್ಲಿ ಎಲ್ಲೇ ಉತ್ತಮ ಕೃಷಿ ಪದ್ಧತಿ ಇದ್ದರೂ ಅದನ್ನು ಅಳವಡಿಸಿಕೊಳ್ಳಲು ಸರ್ಕಾರ ಬದ್ಧ. ಕೃಷಿ ಸುಧಾರಣೆಗೆ ಯಾರು ಸಲಹೆ ಕೊಟ್ಟರೂ ಸ್ವಾಗತ

–ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ