ಬಿಡದಿ: ಮಾಗಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಮಹತ್ತರವಾದ ಶಾಶ್ವತ ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಫೆಬ್ರುವರಿ ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಸಕ ಎ.ಮಂಜುನಾಥ್ ಹೇಳಿದರು.

ಇಲ್ಲಿನ ಇಟ್ಟಮಡು ಗ್ರಾಮದ ಅಂಬಾಳಮ್ಮ ದೇವಸ್ಥಾನದ ಹತ್ತಿರ ನಾಲೆ ಹಾಗೂ ತೊರೆದೊಡ್ಡಿ ಗ್ರಾಮದಲ್ಲಿ ಚೆಕ್ ಡ್ಯಾಮ್ ನಿರ್ಮಾಣಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ವೃಷಭಾವತಿ ನದಿ ನೀರನ್ನು ಮದರ್ ವ್ಯಾಲಿಗೆ ಹರಿಸಲು ಬೈಪಾಸ್ ಕೆನಾಲ್ ನಿರ್ಮಾಣ, ಬೈರಮಂಗಲ ಕೆರೆಯ ಎಡ ಮತ್ತು ಬಲದಂಡೆ ಆಧುನೀಕರಣ ಹಾಗೂ ಮಂಚನಬೆಲೆ, ವೈ.ಜಿ.ಗುಡ್ಡ ಜಲಾಶಯಗಳಿಗೆ ನೀರು ಹರಿಸುವ ಯೋಜನೆಗೆ ಮುಖ್ಯಮಂತ್ರಿಗಳು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ಕಲುಷಿತ ನೀರನ್ನು 3 ಹಂತಗಳಲ್ಲಿ ಶುದ್ಧೀಕರಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನ ಮಲ್ಲೇಶ್ವರ ಸಮೀಪವೇ ಘಟಕ ಸ್ಥಾಪಿಸಿ ಮೊದಲ ಹಂತದಲ್ಲಿ ಶುದ್ಧೀಕರಣಗೊಳಿಸಿ ನೀರು ಹರಿಸಲು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.

ಈ ಸಂಬಂಧ ಈಗಾಗಲೇ ಶುದ್ಧೀಕರಣ ಘಟಕ ಸ್ಥಾಪನೆ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಅದೇ ರೀತಿ ಕೆಂಗೇರಿ ಸಮೀಪ 2ನೇ ಹಂತದಲ್ಲಿ ಕಲ್ಮಶ ನೀರು ಶುದ್ಧೀಕರಣ ಗೊಳ್ಳಲಿದ್ದು, ದೊಡ್ಡಹಳ್ಳಿಯಲ್ಲಿ 3ನೇ ಹಂತದ ಶುದ್ಧೀಕರಣ ಘಟಕ ಸ್ಥಾಪನೆಯಾಗಲಿದೆ ಎಂದು ಅವರು ಹೇಳಿದರು.
ಶುದ್ಧೀಕರಿಸಿದ ನೀರನ್ನು ಲಿಪ್ಟ್‌ ಮಾಡುವ ಮೂಲಕ ಬೈರಮಂಗಲ ಕೆರೆಯಲ್ಲಿ ತುಂಬಿಸಲಾಗುವುದು. ಇದಕ್ಕಾಗಿ ಕೆರೆಯ ನೀರನ್ನು ಖಾಲಿ ಮಾಡಿ, ಹೂಳು ತೆಗೆಯುವ ಕಾರ್ಯಕ್ಕೂ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಬೈರಮಂಗಲ ಕೆರೆಗೆ ಹೊಸದಾಗಿ ತೂಬುಗಳನ್ನು ಅಳವಡಿಸಲಾಗುವುದು. ಕೆರೆಯ 24 ಕಿ.ಮೀ ಉದ್ದದ ಎಡದಂಡೆ ಹಾಗೂ 9ರಿಂದ10 ಕಿ.ಮೀ. ಉದ್ದದ ಬಲದಂಡೆಯನ್ನು ಆಧುನೀಕರಣ ಮಾಡಲಾಗುವುದು. ಇದಕ್ಕಾಗಿ ₹101 ಕೋಟಿ ಮೀಸಲಿಡಲಾಗಿದೆ ಎಂದರು.

ಕೆಂಗೇರಿ ಸಮೀಪದ ದೊಡ್ಡಬೆಲೆ ಶುದ್ಧೀಕರಣ ಘಟಕದಿಂದ ಬಿಡದಿ , ರಾಮನಗರ ಕಸಬಾ ಹಾಗೂ ಹಾರೋಹಳ್ಳಿ ಹೋಬಳಿಯ 140 ಕೆರೆಗಳಿಗೆ ಶುದ್ಧ ನೀರು ತುಂಬಿಸಲಾಗುವುದು. ₹140 ಕೋಟಿ ಯೋಜನೆ ಇದಾಗಿದ್ದು, ಡಿಪಿಆರ್ ಮುಗಿದು ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ ಎಂದು ಅವರು ಹೇಳಿದರು. ಶಿಂಷಾ ನೀರನ್ನು ಚನ್ನಪಟ್ಟಣದ ದೇವೇಗೌಡ ಬ್ಯಾರೇಜ್ ನಲ್ಲಿ ತುಂಬಿಸಿ ಅಲ್ಲಿಂದ ನೀರನ್ನು ಕಣ್ವಕ್ಕೆ ಲಿಫ್ಟ್‌ ಮಾಡಿ ಮಂಚನಬೆಲೆ ಹಾಗೂ ವೈ.ಜಿ.ಗುಡ್ಡ ಜಲಾಶಯ ತುಂಬಿಸುವ ಯೋಜನೆಯನ್ನು ರೂಪಿಸಲಾಗಿದೆ. ಇದಕ್ಕೆ ₹540 ಕೋಟಿ ವೆಚ್ಚ ತಗುಲಲಿದೆ. ಈ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಶೀಘ್ರದಲ್ಲಿಯೇ ಕಾರ್ಯದೇಶ ಸಿಗಲಿದೆ ಎಂದರು.

ಪುರಸಭಾ ಸದಸ್ಯರಾದ ವೆಂಕಟೇಶಮ್ಮ ರಾಮಕೃಷ್ಣಯ್ಯ, ವೈಶಾಲಿ ಚನ್ನಪ್ಪ, ಲೋಕೇಶ್ , ಸಂತೋಷ್, ಮುಖಂಡರಾದ ಬೆಟ್ಟಸ್ವಾಮಿ , ಚಂದ್ರಣ್ಣ , ಇಟ್ಟುಮಡು ಗೋಪಾಲ್ ಇದ್ದರು.