ಮಡಿಕೇರಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಕ್ರಮ ಚಟುವ ಟಿಕೆಗೆ ಕಡಿವಾಣ ಹಾಕಿದ್ದೇ ಜೆಡಿಎಸ್‌. ಅದಕ್ಕೆ ಜೆಡಿಎಸ್‌ ಅನ್ನು ಸಿದ್ದರಾಮಯ್ಯ ಟಾರ್ಗೆಟ್‌ ಮಾಡುತ್ತಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ದೂರಿದರು.

ವಿರಾಜಪೇಟೆಯಲ್ಲಿ ಮಂಗಳವಾರ ನಡೆದ ವಿಕಾಸ ಪರ್ವ ಯಾತ್ರೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್‌ಗೆ 20ರಿಂದ 25 ಸೀಟು ಬರುವುದಿಲ್ಲವೆಂದು ಸಿದ್ದರಾಮಯ್ಯ ಲೇವಡಿ ಮಾಡುತ್ತಿ ದ್ದಾರೆ. ಅದು ಕಾಂಗ್ರೆಸ್‌ಗೆ ತಿರುಗುಬಾಣ ವಾಗಲಿದೆ’ ಎಂದು ಎಚ್ಚರಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ದೊಡ್ಡ ಕೋಮುವಾದಿ. ಚುನಾವಣೆಯಲ್ಲಿ ಸೋಲು– ಗೆಲುವು ಸಹಜ. ಬೇಕಿದ್ದರೆ ಸಿದ್ದರಾಮಯ್ಯ ರಾಮನಗರ ಕ್ಷೇತ್ರದಲ್ಲೇ ಚುನಾವಣೆ ಮುಗಿಯುವ ತನಕ ಪ್ರಚಾರ ನಡೆಸಲಿ. ಐದು ವರ್ಷಗಳ ಕಾಲ ಆಡಳಿತ ನಡೆಸಿದ್ದರೂ ರಾಮನಗರದಲ್ಲಿ ಕಾಂಗ್ರೆಸ್‌ ಸ್ಥಿತಿಯ ಬಗ್ಗೆ ಸಿದ್ದರಾಮಯ್ಯ ಮೊದಲು ಅವಲೋಕನ ಮಾಡಿಕೊಳ್ಳಲಿ. ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಭರ್ಜರಿ ಗೆಲುವು ದಾಖಲಿಸಿದ್ದರು. ಸಿದ್ದರಾಮಯ್ಯ ನೆನಪಿಸಿಕೊಳ್ಳಲಿ’ ಎಂದು ಆರೋಪಕ್ಕೆ ತಿರುಗೇಟು ನೀಡಿದರು.

ಇಬ್ಬರಿಗೆ ಟಿಕೆಟ್‌: ‘ಈಗಾಗಲೇ ನಿರ್ಧಾರ ಮಾಡಿರುವಂತೆ ಕುಟುಂಬದ ಇಬ್ಬರು ಮಾತ್ರ ಸ್ಪರ್ಧೆ ಮಾಡುತ್ತಿದ್ದೇವೆ. ಪ್ರಜ್ವಲ್‌ ರೇವಣ್ಣಗೆ ಉತ್ತಮ ಭವಿಷ್ಯವಿದೆ. ಆದ್ದರಿಂದ ಈ ಬಾರಿ ಟಿಕೆಟ್‌ ನೀಡುತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕೊಡಗಿನಲ್ಲಿ ಭೂಮಿಯ ಸಮಸ್ಯೆ ತೀವ್ರವಾಗಿದ್ದು ಅದನ್ನು ಬಗೆ ಹರಿಸುತ್ತೇನೆ. ರಾಜ್ಯದಲ್ಲಿ ಜನರು ನೆಮ್ಮದಿಯಿಂದ ಬದುಕಬೇಕೆಂಬ ವಾತಾವರಣ ನಿರ್ಮಾಣ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಅಧಿಕಾರಕ್ಕೆ ಬಂದ ತಿಂಗಳಲ್ಲಿ ಭರವಸೆ ಈಡೇರಿಕೆ

ವಿರಾಜಪೇಟೆ: ಪಕ್ಷ ಅಧಿಕಾರಕ್ಕೆ ಬಂದ ಒಂದು ತಿಂಗಳ ಅವಧಿಯಲ್ಲಿ ರೈತರು ಹಾಗೂ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಸೇರಿದಂತೆ ಜನತೆಯ ಜಲ್ವಂತ ಸಮಸ್ಯೆಗಳ ಪರಿಹಾರಕ್ಕೆ ವಿವಿಧ ಯೋಜನೆ ಜಾರಿಗೊಳಿಸಲಾಗುವುದು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಪಟ್ಟಣದ ತಾಲ್ಲೂಕು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಜೆಡಿಎಸ್ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಅಧಿಕಾರ ಅನುಭವಿಸುತ್ತಿರುವ ರಾಷ್ಟ್ರೀಯ ಪಕ್ಷಗಳು ರಾಜ್ಯದಲ್ಲಿ ಯಾವುದೇ ಜನಪರ ಕೆಲಸಗಳಿಗೆ ಆದ್ಯತೆ ನೀಡಿಲ್ಲ. ಜಿಲ್ಲೆಯಲ್ಲಿ ಕಾಡಾನೆ ಹಾವಳಿಯಿಂದ 41 ಸಾವು ಹಾಗೂ ಸಾಲಬಾಧೆಯಿಂದ ರೈತರ ಆತ್ಮಹತ್ಯೆಗೂ ಸರ್ಕಾರ ಶಾಶ್ವತ ಪರಿಹಾರ ಒದಗಿಸಿಲ್ಲ. ಸಮಾಜದ ಕಟ್ಟಕಡೆ ವ್ಯಕ್ತಿಗೂ ಸೌಲಭ್ಯ ತಲುಪಿಸುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲಗೊಂಡಿದೆ. ರೈತರ ₹ 50 ಸಾವಿರ ಸಾಲ ಮನ್ನಾ ಮಾಡಲು ಸರ್ಕಾರ ಯೋಜನೆ ಸಿದ್ಧಪಡಿಸಿ ಜಾರಿಗೆ ತಂದರೂ ಫಲಾನುಭವಿಗಳಿಗೆ ನೇರವಾಗಿ ತಲುಪಲಿಲ್ಲ ಎಂದು ದೂರಿದರು.

ಪಕ್ಷ ಅಧಿಕಾರಕ್ಕೆ ಬಂದರೆ ಜಿಲ್ಲೆಗೆ ಎಲ್ಲ ಸೌಲಭ್ಯಗಳಿಂದ ಕೂಡಿದ ಹೈಟೆಕ್‌ ಸಾರ್ವಜನಿಕ ಆಸ್ಪತ್ರೆ, ಬಡವರು ಸೇರಿದಂತೆ ಎಲ್ಲರೂ ಉನ್ನತ ವಿದ್ಯಾಭ್ಯಾಸ ಉಚಿತವಾಗಿ ಪಡೆಯಲು ಸರ್ಕಾರದಿಂದ ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪನೆ, ಗ್ರಾಮಗಳಲ್ಲಿ ಸಸಿ ನೆಡುವ ಯೋಜನೆ ಜಾರಿಯಿಂದ ಅನಕ್ಷರಸ್ತ ಯುವಕರಿಗೆ ಮಾಸಿಕ ₹ 5 ಸಾವಿರ ಆದಾಯ, ಉದ್ಯೋಗ ಸೃಷ್ಟಿ ಯೋಜನೆಯಲ್ಲಿ 50 ಲಕ್ಷ ಮಂದಿಗೆ ಉದ್ಯೋಗ ಯೋಜನೆ, ರಾಷ್ಟ್ರೀಯ ಪಕ್ಷಗಳು ಜಾತೀಯ ವಿಷಬೀಜ ಭಿತ್ತಿ ಉಂಟು ಮಾಡುತ್ತಿರುವ ಕೋಮುಗಲಭೆ ಹತ್ತಿಕ್ಕಿ ಪ್ರತಿಯೊಂದು ವರ್ಗವೂ ಸಾಮರಸ್ಯ ಜೀವನ ನಡೆಸಲು ಅನುವು ಮಾಡಿಕೊಡುವ ಮೂಲಕ ಪಾರದರ್ಶಕ ಆಡಳಿತ ನೀಲಾಗುವುದು ಎಂದು ಆಶ್ವಾಸನೆ ನೀಡಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಎಂ.ಸಂಕೇತ್ ಪೂವಯ್ಯ ಮಾತನಾಡಿ, ಕ್ಷೇತ್ರದ ಮತದಾರರು ರಾಜ್ಯದಲ್ಲಿ ಬದಲಾವಣೆ ಬಯಸಿದ್ದಾರೆ. ಜೆಡಿಎಸ್‌ 20 ತಿಂಗಳ ಅವಧಿಯಲ್ಲಿ ಮಾಡಿದ ಸಾಧನೆ ಮೆಲುಕು ಹಾಕಿ ಮತ್ತೆ ಪಕ್ಷ ಬೆಂಬಲಿಸಲು ಜನತೆ ತೀರ್ಮಾನಿಸಿದ್ದಾರೆ. ಜನತೆಯಲ್ಲಿರುವ ಪಕ್ಷದ ಪರವಾದ ಭಾವನೆಗಳು ಈ ಬಾರಿ ಮತವಾಗಿ ಪರಿವರ್ತನೆಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದ ಅಧ್ಯಕ್ಷ ಎಸ್.ಎಚ್.ಮತೀನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ರಾಜ್ಯ ಸಮಿತಿಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ನಾಪೋಕ್ಲಿನ ಮನ್ಸೂರ್ ಆಲಿ, ಎಂ.ಸಿ.ಬೆಳ್ಳಿಯಪ್ಪ, ಎಂ.ಟಿ.ಕಾರ್ಯಪ್ಪ, ಮೋಹನ್ ಮೌರ್ಯ, ಎಂ.ಕೆ.ಪೂವಯ್ಯ, ಸಿ.ಎ.ನಾಸರ್, ಅಮ್ಮಂಡ ವಿವೇಕ್, ಕೆ.ಎ.ಆಯೂಬ್, ಅಜ್ಜಮಾಡ ಮುತ್ತಮ್ಮ, ಚಿಲ್ಲವಂಡ ಗಣಪತಿ, ರಂಜನ್ ನಾಯ್ಡು, ಬಲ್ಲಚಂಡ ಗೌತಮ್ ಸತೀಶ್ ಜೋಯಪ್ಪ, ನೂರ್ ಅಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು. ನಗರ ಸಮಿತಿ ಅಧ್ಯಕ್ಷ ಪಿ.ಎ.ಮಂಜುನಾಥ್ ಸ್ವಾಗತಿಸಿ, ನಿರೂಪಿಸಿದರು. ವಿಶ್ವ ವಂದಿಸಿದರು.

By R

You missed