ಬೆಂಗಳೂರು: ಶಾಲಾ– ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲು ಸರ್ಕಾರ ಮುಕ್ತ ಮನಸ್ಸು ಹೊಂದಿದ್ದು, ಈ ವಿಷಯ ಇದೇ ವಾರ ಇತ್ಯರ್ಥವಾಗಲಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.
ಉಚಿತ ಪಾಸ್ ನೀಡುವ ಸಂಬಂಧ ಶಿಕ್ಷಣ ಇಲಾಖೆ ಶೇ 25ರಷ್ಟು ವೆಚ್ಚ ಭರಿಸಲು ಒಪ್ಪಿಗೆ ನೀಡಿದೆ ಎಂದು ಅವರು ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಇದೇ ವಾರ ಸಭೆ ನಡೆಯಲಿದ್ದು, ಅಲ್ಲಿ ಅಂತಿಮ ಪ್ರಕಟಣೆ ಹೊರಬೀಳಲಿದೆ. ಸಾರಿಗೆ ಇಲಾಖೆ ₹ 600 ಕೋಟಿ ನಷ್ಟ ಅನುಭವಿಸುತ್ತಿದೆ. ಉಚಿತ ಪಾಸ್ ನೀಡುವುದರಿಂದ ಹೊರೆ ಪ್ರಮಾಣ ₹ 2000 ಕೋಟಿ ಏರಿಕೆ ಆಗುತ್ತದೆ ಎಂದು ತಮ್ಮಣ್ಣ ಹೇಳಿದರು.
ಖಾಲಿ ಹುದ್ದೆ ಭರ್ತಿಗೆ ಕ್ರಮ: ಇಲಾಖೆಯಲ್ಲಿ ಆರ್ಟಿಒ ಮತ್ತು ಟ್ರಾಫಿಕ್ ಇನ್ಸ್ಪೆಕ್ಟರ್ಗಳ 400 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಇಲಾಖೆಗೆ ಬೇಕಾದ ಸಿಬ್ಬಂದಿಯನ್ನು ನೇರ ನೇಮಲಾತಿ ಮಾಡಿಕೊಳ್ಳುವ ಆಲೋಚನೆ ಇದೆ. ಈ ಸಂಬಂಧ ಸುಪ್ರೀಂಕೋರ್ಟ್ನಲ್ಲಿರುವ ದಾವೆಯನ್ನು ಹಿಂದಕ್ಕೆ ಪಡೆಯಲು ಉದ್ದೇಶಿಸಲಾಗಿದೆ ಎಂದು ತಮ್ಮಣ್ಣ ತಿಳಿಸಿದರು.
ಸೆಸ್ಗಾಗಿ ಪ್ರಸ್ತಾವ: ಸಾರಿಗೆ ಸೆಸ್ ಸಂಗ್ರಹಿಸಲು ಸರ್ಕಾರ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಪ್ರಸ್ತಾವವೊಂದನ್ನು ಇಲಾಖೆ ಸಲ್ಲಿಸಿದೆ. ಸೆಸ್ ಮೂಲಕ ಸಂಗ್ರಹವಾದ ಹಣವನ್ನು ಸಾರಿಗೆ ಇಲಾಖೆಗೆ ನೀಡಬೇಕು. ಇದರಿಂದ ಸಾರಿಗೆ ಸೇವೆಯನ್ನು ಇನ್ನಷ್ಟು ಉತ್ತಮಪಡಿಸಲು ಸಾಧ್ಯವಿದೆ ಎಂದು ಅವರು ತಿಳಿಸಿದರು.