ರಾಮನಗರ: ‘ನಾನು ಜೀವಂತವಾಗಿ ಇರುವವರೆಗೆ ಬಿಜೆಪಿ ಜೊತೆ ಸರ್ಕಾರ ಮಾಡಲು ಬಿಡುವುದಿಲ್ಲ. ಈ ವಿಚಾರದಲ್ಲಿ ಬೇಕಂತಲೇ ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತಿದೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಆರೋಪಿಸಿದರು.

ನಗರದ ಯಾರಬ್ ನಗರದಲ್ಲಿ ಬುಧವಾರ ರಾತ್ರಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ‘ಮುಸಲ್ಮಾನರಲ್ಲಿ ಗೊಂದಲ ಸೃಷ್ಟಿಸುವ ಸಲುವಾಗಿಯೇ ಜೆಡಿಎಸ್ ಮೇಲೆ ಮೈತ್ರಿ ಆರೋಪ ಮಾಡಲಾಗುತ್ತಿದೆ. ಇನ್ನೊಮ್ಮೆ ಕುಮಾರಸ್ವಾಮಿ ಬಿಜೆಪಿ ಸಹವಾಸ ಮಾಡುವುದಿಲ್ಲ. ಸ್ವತಂತ್ರ ಸರ್ಕಾರ ರಚಿಸುವ ವಿಶ್ವಾಸ ನಮಗೆ ಇದೆ. ನೀವು ನಂಬಿದರೆ ನಂಬಿ. ಇಲ್ಲವಾದರೆ ನಿಮ್ಮನ್ನು ನಂಬಿಸುವ ಕೆಲಸಕ್ಕೆ ಹೋಗುವುದಿಲ್ಲ. ಎಲ್ಲವೂ ದೇವರಿಗೆ ಬಿಟ್ಟದ್ದು’ ಎಂದರು.

‘ಹಿಂದೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಉಂಟಾದಾಗ ಸಿದ್ದರಾಮಯ್ಯ ಪಟ್ಟು ಹಿಡಿದು ಬಿಜೆಪಿ ಸಖ್ಯ ಬೆಳೆಸಲು ಮುಂದಾಗಿದ್ದರು. ಅವರಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಲು ಕಾಂಗ್ರೆಸ್‌ ಸಿದ್ದವಿರಲಿಲ್ಲ. ಆದರೆ ಕುಮಾರಸ್ವಾಮಿ ಸಿದ್ದರಾಮಯ್ಯ ಅವರನ್ನು ಮನವೊಲಿಸಿ ಉಪಮುಖ್ಯಮಂತ್ರಿ ಮಾಡಿದರು. ಈಗ ಅದೇ ಸಿದ್ದರಾಮಯ್ಯ ಜೆಡಿಎಸ್‌ನ ಜನಪ್ರಿಯತೆ ಸಹಿಸದೇ ಇಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಈ ದೇಶದಲ್ಲಿ ಮೋದಿ ಎದುರಿಸಬೇಕಾದರೆ ಈ ದೇವೇಗೌಡ ಇರಬೇಕು. ದೇವೇಗೌಡರಿಗೆ 85 ವರ್ಷವಾಗಿದೆ ಇನ್ನೇನು ರಾಜಕೀಯ ಮುಗಿಯಿತು ಎನ್ನುವವರಿಗೆ ರಾಷ್ಟ್ರದ ರಾಜಕಾರಣ ಮಾಡಿ ತೋರಿಸುತ್ತೇನೆ. ಮಾಯವತಿ, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಚಂದ್ರಶೇಖರ್ ರಾವ್ ನನಗೆ ಬೆಂಬಲವಾಗಿ ನಿಂತಿದ್ದಾರೆ’ ಎಂದು ಅವರು ಎಚ್ಚರಿಕೆ ನೀಡಿದರು.

‘ದೇಶದ ಪ್ರಧಾನಿಯಾಗಿ ಮುಸ್ಲಿಮರ ಅನೇಕ ಸಮಸ್ಯೆ ಬಗೆಹರಿಸಿದ್ದೇನೆ. ಹುಬ್ಬಳ್ಳಿಯ ಈದ್ಗಾ ಮೈದಾನದ ಸಮಸ್ಯೆಯನ್ನು ಇತ್ಯರ್ಥ ಮಾಡಿದ್ದೇನೆ. ಅಲ್ಪಸಂಖ್ಯಾತ ಮಹಿಳೆಯರಿಗೂ ಮೀಸಲಾತಿ ಅವಕಾಶ ಕಲ್ಪಿಸಿದ್ದೇನೆ. ಇದನ್ನು ಎಲ್ಲ ಮುಸಲ್ಮಾನರೂ ಅರ್ಥ ಮಾಡಿಕೊಳ್ಳಬೇಕು. ನಿಮಗೆ ಇಲ್ಲಿ ಕುಮಾರಸ್ವಾಮಿಗಿಂತ ಒಳ್ಳೆಯ ನಾಯಕ ಸಿಗುವುದಿಲ್ಲ. ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಸ್ಥಳೀಯ ಜೆಡಿಎಸ್ ಮುಖಂಡರು ಜೊತೆಗಿದ್ದರು.

By R

You missed