ಮಡಿಕೇರಿ: ಈ ಬಾರಿ ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳು ಭರ್ತಿಯಾಗಿದ್ದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮೊದಲು ಕಾವೇರಿ ನದಿಯ ಉಗಮ ಸ್ಥಳವಾದ ಕೊಡಗಿನಲ್ಲಿ ಪೂಜೆ ಸಲ್ಲಿಸುವ ಮೂಲಕ ಜಿಲ್ಲೆಯ ಜನರ ಮೆಚ್ಚುಗೆಗೂ ಪಾತ್ರರಾದರು.

ಕೆಆರ್‌ಎಸ್ ಜಲಾಶಯವು ಭರ್ತಿಯಾದ ವರ್ಷಗಳಲ್ಲಿ ಆಗಿನ ಮುಖ್ಯಮಂತ್ರಿಗಳು ಆ ಜಲಾಶಯಕ್ಕೆ ಬಾಗಿನ ಸಲ್ಲಿಸಿ ಸುಮ್ಮನಾಗುತ್ತಿದ್ದರು. ಆದರೆ, ಈ ಬಾರಿ ಮಾತ್ರ ಕಾವೇರಿ ನದಿಯ ಉಗಮ ಸ್ಥಳವಾದ ಕೊಡಗಿನಲ್ಲಿ ಪ್ರಥಮ ಪೂಜೆ ಸಲ್ಲಿಸುವ ಸಂಪ್ರದಾಯಕ್ಕೆ ಎಚ್‌.ಡಿ. ಕುಮಾರಸ್ವಾಮಿ ನಾಂದಿ ಹಾಡಿದರು. ಗುರುವಾರ ಕುಶಾಲನಗರ ಸಮೀಪದ ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿ, ಶುಕ್ರವಾರ ತಲಕಾವೇರಿಯಲ್ಲಿ ಮಹಾ ಸಂಕಲ್ಪ ಪೂಜೆ ನೆರವೇರಿಸಿದರು.

ಬೆಳಿಗ್ಗೆ 6.30ಕ್ಕೆ ಭಾಗಮಂಡಲದ ಭಗಂಡೇಶ್ವರನ ದರ್ಶನ ಹಾಗೂ ಪೂಜೆಗೆ ಸಮಯ ನಿಗದಿಯಾಗಿತ್ತು. ಆದರೆ, 8.15ಕ್ಕೆ ಮುಖ್ಯಮಂತ್ರಿ ಆಗಮಿಸಿದರು. ಅಲ್ಲಿಂದ ತಲಕಾವೇರಿ ಕ್ಷೇತ್ರಕ್ಕೆ ಬಂದ ಅವರು, ಮಳೆಯ ನಡುವೆಯೂ ಪೂಜೆ ಸಲ್ಲಿಸಿದರು. ಪ್ರಧಾನ ಅರ್ಚಕರಾದ ನಾರಾಯಣ ಆಚಾರ್‌ ನೇತೃತ್ವದಲ್ಲಿ 20 ನಿಮಿಷಗಳ ಕಾಲ ನಡೆದ ಮಹಾಸಂಕಲ್ಪ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಭಾಗಮಂಡಲದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ‘ಉತ್ತಮ ಮಳೆ ಬಿದ್ದಿರುವುದು ಸಂತೋಷದ ವಿಚಾರ. ಏಳು ವರ್ಷಗಳಿಂದ ಕೊಡಗಿನಲ್ಲಿ ಉತ್ತಮ ಮಳೆಯಾಗದೇ ರೈತರು ತೊಂದರೆಗೆ ಸಿಲುಕಿದ್ದರು. ಆದರೆ, ಈ ವರ್ಷ ಕಾವೇರಿ ಮಾತೆ ಆಶೀರ್ವಾದ ಮಾಡಿದ್ದಾಳೆ’ ಎಂದು ಹೇಳಿದರು. ಶಿರೂರು ಸ್ವಾಮೀಜಿ ಸಾವು ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ತಲಕಾವೇರಿಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಯಾರು ಧರ್ಮವನ್ನು ಕಾಪಾಡುತ್ತಾರೋ ಅವ ರನ್ನು ಧರ್ಮ ಕಾಪಾಡಲಿದೆ. ದೇವರನ್ನು ಭಕ್ತಿಯಿಂದ ಸ್ಮರಿಸುವ ಕೆಲಸವನ್ನು ಸಮ್ಮಿಶ್ರ ಸರ್ಕಾರ ಮಾಡುತ್ತಿದೆ. ಈ ಸರ್ಕಾರಕ್ಕೆ ನದಿ ಹಾಗೂ ನಾಡಿನ ಬಗ್ಗೆ ಅಪಾರವಾದ ಗೌರವವಿದೆ. ನಾಡಿನ ಕ್ಷೇಮಕ್ಕೋಸ್ಕರ ಪೂಜೆ ಸಲ್ಲಿಸಲಾಗಿದೆ’ ಎಂದು ಹೇಳಿದರು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಮಹದೇವ್‌, ವೀಣಾ ಅಚ್ಚಯ್ಯ, ಭಾಗಮಂಡಲ ಮತ್ತು ತಲಕಾವೇರಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ, ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಹಾಜರಿದ್ದರು.