ಕುಶಾಲನಗರ: ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿ ರುವ ಕೊಡಗಿನ ಹಾರಂಗಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಆಷಾಢ ಮಾಸದ ಗುರುವಾರ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ದಂಪತಿ ಜಲಾಶಯಕ್ಕೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಜಲಾಶಯದ ಆವರಣದಲ್ಲಿರುವ ಕಾವೇರಿ ಮಾತೆಯ ಪ್ರತಿಮೆಗೆ ಸಿಎಂ ಕುಮಾರಸ್ವಾಮಿ, ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮೊದಲಿಗೆ ಪೂಜೆ ಸಲ್ಲಿಸಿದರು.

ನಂತರ ಸಚಿವರು, ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರು, ತಮ್ಮ ಅಪಾರ ಬೆಂಬಲಿಗರೊಂದಿಗೆ ವಾದ್ಯಗೋಷ್ಠಿಗಳ ಜೊತೆ ಆಗಮಿಸಿದ ಕುಮಾರಸ್ವಾಮಿ ದಂಪತಿ, ಅಣೆಕಟ್ಟೆ ಮೇಲೆ ವ್ಯವಸ್ಥೆ ಮಾಡಿದ್ದ ವಿಶೇಷ ಮಂಟಪದಲ್ಲಿ ನಿಂತು ಮೈದುಂಬಿರುವ ಹಾರಂಗಿ ಜಲಾಶಯಕ್ಕೆ ಪೂಜೆ ಸಲ್ಲಿಸಿ 4.30 ಗಂಟೆಗೆ ಬಾಗಿನ ಸಮರ್ಪಿಸಿದರು.

ನೀರಾವರಿ ಸಚಿವ ಡಿ.ಕೆ.ಶಿವಕುಮಾರ್, ಲೋಕೋಪಯೋಗಿ ಎಚ್.ಡಿ.ರೇವಣ್ಣ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹಾಗೂ ಶಾಸಕರು ಬಾಗಿನ ಸಲ್ಲಿಸಲು ಜೊತೆಯಲ್ಲಿದ್ದರು.

ಈ ಸಂದರ್ಭ ಮಾತನಾಡಿದ ಕುಮಾರಸ್ವಾಮಿ ಅವರು, ‘ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, 35 ವರ್ಷಗಳ ಬಳಿಕ ರಾಜ್ಯದಲ್ಲಿ ಎಲ್ಲ ಜಲಾಶಯಗಳು ಸಂಪೂರ್ಣ ಭರ್ತಿಯಾಗಿರುವ ಸಂಗತಿ ಹರ್ಷ ತಂದಿದೆ. ಅದೇ ರೀತಿ ಕಾವೇರಿ ಕೊಳ್ಳದ ಪ್ರಮುಖ ಜಲಾಶಯವಾದ ಹಾರಂಗಿ ಅಣೆಕಟ್ಟೆ ಮೈದುಂಬಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಆಗಮಿಸಿ ಬಾಗಿನ ಅರ್ಪಿಸಿದ್ದೇನೆ’ ಎಂದರು.

‘ಕೊಡಗಿನಲ್ಲಿ ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಯಾಗಿದ್ದು, ಈ ಕುರಿತು ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

ಶಾಸಕರಾದ ಕೆ.ಜಿ.ಬೋಪಯ್ಯ, ವೀಣಾಅಚ್ಚಯ್ಯ, ಸುನೀಲ್ ಸುಬ್ರಮಣಿ, ಕೆ.ಮಹಾದೇವ್, ಎ.ಟಿ.ರಾಮಸ್ವಾಮಿ, ಎಸ್.ಎಲ್. ಬೋಜೇಗೌಡ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಎಚ್.ಆರ್.ಶ್ರೀನಿವಾಸ್, ಕೆ.ಆರ್.ಮಂಜುಳಾ, ಕುಮುದಾ ಧರ್ಮಪ್ಪ, ತಾ.ಪಂ. ಅಧ್ಯಕ್ಷೆ ಪುಷ್ಪಾರಾಜೇಶ್, ಉಪಾಧ್ಯಕ್ಷ ಅಭಿಮಾನ್ಯುಕುಮಾರ್,ಸದಸ್ಯ ಡಿ.ಎಸ್.ಗಣೇಶ್, ಕೂಡುಮಂಗಳೂರು ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಿರವಿ, ಉಪಾಧ್ಯಕ್ಷ ಕೆ.ವಿ.ಸಣ್ಣಪ್ಪ, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಕೆ.ಜೈಪ್ರಕಾಶ್, ಕಾವೇರಿ ನೀರಾವರಿ ನಿಗಮ ನಿಯಮಿತ ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕ ಎಚ್.ಎಲ್.ಪ್ರಸನ್ನ, ಮುಖ್ಯ ಎಂಜಿನಿಯರ್ ಟಿ.ಪಿ.ತ್ರಯಂಬಿಕ, ಅಧೀಕ್ಷಕ ಎಂಜಿನಿಯರ್ ಜಿ.ಪ್ರಸಾದ್, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್, ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ರಾಜೇಗೌಡ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಧರ್ಮರಾಜ್, ಸಹಾಯಕ ಎಂಜಿನಿಯರ್ ನಾಗರಾಜು ಮತ್ತಿತರರು ಹಾಜರಿದ್ದರು.

ಗೌರವ ವಂದನೆ: ಬಾಗಿನ ಸಲ್ಲಿಸಲು ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪೊಲೀಸ್ ಇಲಾಖೆ ವತಿಯಿಂದ ಮೊಲಿಗೆ ಗೌರವ ವಂದನೆ ಸಲ್ಲಿಸಲಾಯಿತು.

ಪುಷ್ಪಗುಚ್ಛ ನೀಡಿ ಸ್ವಾಗತ: ಸಿಎಂ ಕುಮಾರಸ್ವಾಮಿ ಅವರಿಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಸಚಿವ ಬಿ.ಎ.ಜೀವಿಜಯ, ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ಪಕ್ಷದ ಮುಖಂಡರು ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.

ಸಾಂಪ್ರದಾಯಿಕ ಸ್ವಾಗತ: ಅತ್ತೂರು ಗ್ರಾಮದ ಸ್ವಸಹಾಯ ಸಂಘದ ಸದಸ್ಯರು ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಪೂರ್ಣ ಕುಂಭ ಕಳಶ ಹಿಡಿದು ಮುಖ್ಯಮಂತ್ರಿ ಅವರಿಗೆ ಆತ್ಮೀಯವಾದ ಸ್ವಾಗತ ನೀಡಿ ಬರಮಾಡಿಕೊಂಡರು.

ವಿಶೇಷ ಅಲಂಕಾರ: ಸಿಎಂ ಬಾಗಿನ ಅರ್ಪಿಸಲು ಆಗಮಿಸುವ ಹಿನ್ನೆಲೆಯಲ್ಲಿ ಜಲಾಶಯವನ್ನು ವಿಶೇಷವಾಗಿ ಶೃಂಗರಿಸಲಾಗಿತ್ತು. ಎಲ್ಲೆಡೆ ತಳಿರು ತೋರಣಗಳು ರಾರಾಜಿಸುತ್ತಿದ್ದವು. ಜಲಾಶಯದ ಮುಂಭಾಗದ ಉದ್ಯಾನ ಸೇರಿದಂತೆ ಇನ್ನಿತರ ಕಡೆಗಳಲ್ಲಿರುವ ಕಾರಂಜಿಗಳಿಂದ ನೀರು ಚಿಮ್ಮುತ್ತಿದ್ದ ದೃಶ್ಯ ನೋಡುಗರ ಗಮನ ಸೆಳೆಯಿತು.

ಜನಸಾಗರ: ಮುಖ್ಯಮಂತ್ರಿ ಹಾರಂಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಹಾರಂಗಿ ಜಲಾಶಯದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು.

ಸಿಎಂ ಅವರ ಬಾಗಿನ ಅರ್ಪಣೆ ಕಾರ್ಯಕ್ರಮ ವೀಕ್ಷಿಸಿ ಜನರು
ಸಂಭ್ರಮಿಸಿದರು.

– ರಘುಹೆಬ್ಬಾಲೆ

By R

You missed