ಮಳವಳ್ಳಿ: ‘ಜೆಡಿಎಸ್ ಅವಕಾಶವಾದಿ ಪಕ್ಷವೂ ಅಲ್ಲ, ಸಂಘಪರಿವಾರವೂ ಅಲ್ಲ ರೈತರನ್ನು ಉಳಿಸುವ, ಯುವಜನರಿಗೆ ಉದ್ಯೋಗ ನೀಡಲು ಮುಂದಾಗಿರುವ ಪಕ್ಷ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರತಿಪಾದಿಸಿದರು.

ತಾಲ್ಲೂಕಿನ ಚಿಕ್ಕಮುಲಗೂಡು ಗ್ರಾಮದಲ್ಲಿ ಸೋಮವಾರ ‘ವಿಕಾಸಪರ್ವ’ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಸಭೆಗಳಲ್ಲಿ ರೈತರ ಆತ್ಮಹತ್ಯೆ, ಜಿಲ್ಲೆಯ ನೀರಿನ ಸಮಸ್ಯೆ ಬಗ್ಗೆ ಮಾತನಾಡಬೇಕಿತ್ತು. ಆದರೆ, ಜೆಡಿಎಸ್ ಟೀಕಗೆ ಸಮಯ ಬಳಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಪಕ್ಷದ ವಿರುದ್ಧ ಉಭಯ ಮುಖಂಡರ ಟೀಕೆಗೆ ತಿರುಗೇಟು ನೀಡಿದ ಅವರು, ‘ಜೆಡಿಎಸ್‌ ರೈತರ ಕೃಷಿಗೆ ನೀರು ಪೂರೈಕೆ, ಯುವಜನರಿಗೆ ಉದ್ಯೋಗ, ಮಹಿಳೆಯರ ಸಬಲೀಕರಣ ಸೇರಿದಂತೆ ರಾಜ್ಯದ ಅಭಿವೃದ್ಧಿ ಚಿಂತನೆ ಮಾಡುವ ಪಕ್ಷವಾಗಿದೆ’ ಎಂದು ಅವರು ಬಲವಾಗಿ ಸಮರ್ಥಿಸಿಕೊಂಡರು.

ಜಿಲ್ಲೆಯ ಮಳವಳ್ಳಿ, ಕಿರುಗಾವಲು ಭಾಗದಲ್ಲೂ ಈ ಹಿಂದೆ ಎರಡು ಬೆಳೆ ಬೆಳೆಯಲಾಗುತ್ತಿತ್ತು. ಈಗ ಒಂದೂ ಬೆಳೆ ಬೆಳೆಯದೆ ಪರಿಸ್ಥಿತಿ ಬಂದಿದೆ. ಆದರೆ, ಮುಖ್ಯಮಂತ್ರಿ ಇದರ ಬಗ್ಗೆ ಚಕಾರ ಎತ್ತುವುದಿಲ್ಲ. ಹುರುಳಿ ಬೆಳೆಯಲುಸಲಹೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

 

ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯದ ಹಕ್ಕಿಗಾಗಿ ಕಾವೇರಿ ಉಳಿವಿಗಾಗಿ ಈಗಲೂ ದೇವೇಗೌಡರು ಹೋರಾಟ ನಡೆಸುತ್ತಿದ್ದಾರೆ. ಕೇಂದ್ರದ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಅವರೊಂದಿಗೆ ಚರ್ಚೆ ಮಾಡಿದ್ದು, ಈ ವಿಷಯದಲ್ಲಿ ತಮಿಳನಾಡಿನ ಒತ್ತಡಕ್ಕೆ ಮಣಿಯಬಾರದು ಎಂದು ಕೋರಿದ್ದಾರೆ ಎಂದರು.

‘ರಾಹುಲ್‌ಗಾಂಧಿ ಅವರು ಬಿಜೆಪಿಯ ಬಿ ಟೀಂ ಜೆಡಿಎಸ್‌ ಪಕ್ಷ ಎಂದು ಟೀಕಿಸಿದ್ದಾರೆ. ಅವರ ಟೀಕೆಗೆ ಉತ್ತರ ಕೊಡುವ ಅಗತ್ಯವಿಲ್ಲ. ಆರೂ ವರೆ ಕೋಟಿ ಕನ್ನಡಿಗರು ಒಮ್ಮೆ ಪಕ್ಷಕ್ಕೆ ಬಹುಮತದ ಅಧಿಕಾರ ನೀಡಲಿ. ಅವರಿಗೆ ಆಡಳಿತದ ಮೂಲಕ ಉತ್ತರಿಸು ತ್ತೇನೆ’ ಎಂದು ಎಚ್‌ಡಿಕೆ ಹೇಳಿದರು.

‘ಸಹಕಾರ ಸಂಘಗಳಲ್ಲಿನ 8 ಸಾವಿರ ಕೋಟಿ ಮನ್ನಾ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಇದುವರೆಗೂ ₹ 1200 ಕೋಟಿ ಬಿಡುಗಡೆ ಆಗಿದೆ. ಉಳಿದ ಮೊತ್ತ ಬಿಡುಗಡೆ ಮಾಡುವ ಹೊಣೆಯನ್ನು ಮುಂದೆ ಬರಲಿರುವ ಸರ್ಕಾರಕ್ಕೆ ಬಿಟ್ಟಿದೆ’ ಎಂದು ಅವರು ಹೇಳಿದರು.

ರೈತರು ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾದಾಗ ಅವರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು, ಕುಮಾರಸ್ವಾಮಿಯೇ ವಿನಾ ಬೇರೆ ಯಾರೂ ಅಲ್ಲ. ಈ ಮಾತನ್ನು ಎದೆ ತಟ್ಟಿ ಹೇಳುತ್ತೇನೆ ಎಂದರು.

ಎಪಿಎಂಸಿ ಉಪಾಧ್ಯಕ್ಷ ಸುಹಾಸ್‌ ಪ್ರಭು ಮಹದೇವಯ್ಯ ಅವರು ಜೆಡಿಎಸ್‌ಗೆ ಸೇರಿದರು. ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಇದ್ದರು. ಬೈಕ್ ರ್ಯಾಲಿ, ವಿವಿಧ ಗ್ರಾಮಗಳಿಗೆ ಭೇಟಿ ನಡೆಯಿತು.