ಬೆಂಗಳೂರು: ಉತ್ತಮ ಆಡಳಿತ, ಆರ್ಥಿಕ ಶಿಸ್ತು ಸೂಚ್ಯಂಕದಲ್ಲಿ ರಾಜ್ಯವು ಮೂರು ಮತ್ತು ಒಂದನೇ ಸ್ಥಾನ ಗಳಿಸಿರುವುದರ ಶ್ರೇಯ ಪಡೆದುಕೊಳ್ಳಲು ಜೆಡಿಎಸ್‌ ಮತ್ತು ಬಿಜೆಪಿ ಮಧ್ಯೆ ಪೈಪೋಟಿ ಆರಂಭವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಸರ್ಕಾರ ಈ ಸಾಧನೆ ಮಾಡಿದೆ ಎಂದು ಕರ್ನಾಟಕ ಬಿಜೆಪಿ ಮಾಡಿರುವ ಟ್ವೀಟ್‌ಗೆ ಜೆಡಿಎಸ್ ತಿರುಗೇಟು ನೀಡಿದ್ದು, ‘ಒಂದೇ ಒಂದು ಹಣಕಾಸು ಬಜೆಟ್ ಮಂಡಿಸದೇ ಅರ್ಥಿಕ ಶಿಸ್ತು ಕಾಪಾಡಿರುವ ಏಕಮಾತ್ರ ಸರ್ಕಾರ ನಿಮ್ಮದು’ ಎಂದು ವ್ಯಂಗ್ಯವಾಡಿದೆ.

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಉನ್ನತಿಯತ್ತ ಸಾಗುತ್ತಿದೆ. ಆರ್ಥಿಕ ಶಿಸ್ತು ಪಾಲನೆಯಲ್ಲಿ ಪ್ರಥಮ ಸ್ಥಾನ ಮತ್ತು ಉತ್ತಮ ಆಡಳಿತದಲ್ಲಿ ಮೂರನೇ ಸ್ಥಾನ ಪಡೆದಿದೆ ನಮ್ಮ ರಾಜ್ಯ. ಉತ್ತಮ ಆಡಳಿತ ಸೂಚ್ಯಂಕ (ಜಿಜಿಐ)ವು ನಮಗೆ ಸ್ವಚ್ಛ ಮತ್ತು ದಕ್ಷ ಆಡಳಿತ ನೀಡಲು ಸ್ಫೂರ್ತಿ ಒದಗಿಸಲಿದೆ’ ಎಂದು ಕರ್ನಾಟಕ ಬಿಜೆಪಿ ಶುಕ್ರವಾರ ಟ್ವೀಟ್ ಮಾಡಿತ್ತು. ಇದಕ್ಕೆ ಶನಿವಾರ ಬೆಳಿಗ್ಗೆ ತಿರುಗೇಟು ನೀಡಿರುವ ಜೆಡಿಎಸ್, ‘ಸ್ವಂತವಾಗಿ ಒಂದೇ ಒಂದು ಹಣಕಾಸು ಬಜೆಟ್ ಮಂಡಿಸದೇ ಅರ್ಥಿಕ ಶಿಸ್ತು ಕಾಪಾಡಿರುವ ಏಕಮಾತ್ರ ಸರ್ಕಾರ ನಿಮ್ಮದು. ನಿಮ್ಮ ಪಕ್ಷದ ‘ಯೋಗ್ಯ’ ಸಾಧನೆಯನ್ನು ಜನರಿಗೆ ಈಗಲೇ ಹೇಳುವ ಹಪಾಹಪಿ ಇದ್ದರೆ ನಿಮ್ಮದೇ ಆಡಳಿತವಿರುವ ಉತ್ತರ ಪ್ರದೇಶದ ಬಗ್ಗೆ ಹೇಳಿ. ಆ ರಾಜ್ಯವೂ ಪ್ರಥಮ ಸ್ಥಾನದಲ್ಲೇ ಇದೆ, ಆದರೆ ‘ಕೆಟ್ಟ ಆಡಳಿತ’ ನಡೆಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ!’ ಎಂದು ಟ್ವೀಟ್ ಮಾಡಿದೆ.

By R

You missed