ಉಡುಪಿ: ‘ಕರ್ನಾಟಕ ಆರೋಗ್ಯ ಶ್ರೀ’ ಯೋಜನೆಯಡಿ ಇದುವರೆಗೆ ಹೆಲ್ತ್ ಕಾರ್ಡ್ ಪಡೆದುಕೊಳ್ಳದವರು ಬಿಪಿಎಲ್‌ ಕಾರ್ಡ್‌ ತೋರಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಖಾಸಗಿ ಆಸ್ಪತ್ರೆಗಳಲ್ಲಿ ಹೆಲ್ತ್ ಕಾರ್ಡ್ ಇಲ್ಲದ ಬಡವರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ವಿಚಾರ ಗಮನಕ್ಕೆ ಬಂದಿದ್ದು, ಈ ಸಂಬಂಧ ಈಚೆಗೆ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಇನ್ನು ಮುಂದೆ ಹೆಲ್ತ್‌ ಕಾರ್ಡ್‌ ಇಲ್ಲದವರು ಬಿಪಿಎಲ್ ಕಾರ್ಡ್‌ ತೋರಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು’ ಎಂದು ತಿಳಿಸಿದರು.

ಗರ್ಭಿಣಿಯರಿಗೆ ‘ಮಾತೃಶ್ರೀ‍’ ಯೋಜನೆ ಮುಂದುವರಿಯಲಿದೆ. ಬಿಪಿಎಲ್‌ ಕಾರ್ಡ್‌ ಹೊಂದಿರುವ ಗರ್ಭಿಣಿ
ಯರಿಗೆ ಮಾಸಿಕ ₹ 2,000 ಭತ್ಯೆ ನೀಡಲಾಗುವುದು ಎಂದು ಮುಖ್ಯ
ಮಂತ್ರಿ ತಿಳಿಸಿದರು.

ಉಡುಪಿಯಲ್ಲಿ ಈಚೆಗೆ ಬೂದಿ
ಮಿಶ್ರಿತ ಮಳೆ ಸುರಿದ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಯುಪಿಸಿಎಲ್‌ ಕಂಪನಿಯಿಂದ ಪರಿಸರಕ್ಕೆ ಹಾನಿಯಾಗಿದ್ದರೆ, ತಾಂತ್ರಿಕ ಸಮಿತಿ ನೀಡುವ ವರದಿಯ ಆಧಾರದ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದರು.

‘ಜಾರಕಿಹೊಳಿ ಸಹೋದರರ ಹಾಗೂ ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ನಡುವಿನ ವೈಮನಸ್ಸಿನಿಂದ ಸಮ್ಮಿಶ್ರ ಸರ್ಕಾರ ಬಿದ್ದುಹೋಗುತ್ತದೆ ಎಂದು ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ. ನನ್ನ ಜತೆ ಎಲ್ಲರ ಬಾಂಧವ್ಯ ಸುಮಧುರವಾಗಿದೆ’ ಎಂದರು.

ಸರ್ಕಾರ ಸಂಕಷ್ಟದಲ್ಲಿದ್ದರೆ ಬೆಂಗಳೂರಿನಲ್ಲಿ ಕುಳಿತು ಸಮಸ್ಯೆ ಬಗೆಹರಿಸುತ್ತಿದ್ದೆ. ಉಡುಪಿಗೆ ಬಂದು ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿರಲಿಲ್ಲ. ಮಾಧ್ಯಮಗಳು ಸರ್ಕಾರ ಬೀಳುತ್ತದೆ ಎಂದು ಹೇಳಿದರೆ, ಸರ್ಕಾರ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಹೇಳಿದರು.

‘ಉಡುಪಿಗೆ ಬಂದಮೇಲೆ ದೇವರ ದರ್ಶನ ಪಡೆದು ನಾಡಿನ ಜನತೆಗೆ ಒಳಿತನ್ನು ಮಾಡುವಂತೆ ದೇವರಲ್ಲಿ
ಪ್ರಾರ್ಥಿಸಿದ್ದೇನೆ. ಕೃಷ್ಣಮಠದ ಭೇಟಿ ಹಿಂದೆ ಬೇರೆ ಉದ್ದೇಶವಿಲ್ಲ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ, ಪರಿಷತ್ ಸದಸ್ಯ ಭೋಜೇಗೌಡ ಇದ್ದರು.