ಚಿತ್ರದುರ್ಗ: ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಈ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಿ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು ಎಂದು ತೆಲಂಗಾಣ ಟಿಎಸ್ಆರ್ನ ಎಂಎಲ್ಸಿ ಮೈನಪಳ್ಳಿ ಹನುಮಂತ ರಾವ್ ಮನವಿ ಮಾಡಿದರು.
ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಕಡಿಮೆ ಅವಧಿಯಲ್ಲೇ ಅಭಿವೃದ್ಧಿ ಸಾಧಿಸಿದೆ. ಇದಕ್ಕೆ ಟಿಎಸ್ಆರ್ ಪ್ರಾದೇಶಿಕ ಪಕ್ಷವೇ ಕಾರಣವಾಗಿದ್ದು, ಕರ್ನಾಟಕ ಅಭಿವೃದ್ಧಿ ಪಥದಲ್ಲಿ ಮುಂದುವರಿಯಲು ಜೆಡಿಎಸ್ನಿಂದ ಮಾತ್ರ ಸಾಧ್ಯ ಎಂದು ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ
ಯಲ್ಲಿ ಹೇಳಿದರು.
ದೆಹಲಿಯಲ್ಲಿ ಕುಳಿತು ಆಡಳಿತ ನಡೆಸುವ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ
ಯಾಗದು. ಜನತೆ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಗೂ ಅಧಿಕಾರ ಕೊಟ್ಟು ನೋಡಿದ್ದಾರೆ. ಪ್ರಗತಿ ವಿಚಾರದಲ್ಲಿ ಬೇಸತ್ತಿದ್ದಾರೆ. ಜೆಡಿಎಸ್ಗೊಮ್ಮೆ ಪೂರ್ಣ ಬಹುಮತ ಕೊಟ್ಟರೆ ಮುಂದಿನ ಐದು ವರ್ಷದೊಳಗೆ ರಾಜ್ಯದ ಚಿತ್ರಣವೇ ಬದಲಾಗಲಿದೆ ಎಂದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲು ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಬೇಕು. ಅದಕ್ಕಾಗಿ ಈ ಬಾರಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಇಲ್ಲಿನ ಅಭ್ಯರ್ಥಿ ಕೆ.ಸಿ.ವೀರೇಂದ್ರ (ಪಪ್ಪಿ) ಗೆ ಮತ ನೀಡುವ ಮೂಲಕ ಗೆಲ್ಲಿಸಿ. ಹಿಂದುಳಿದ ಈ ಕ್ಷೇತ್ರ ಕೂಡ ಅಭಿವೃದ್ಧಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ, ಕಾಂಗ್ರೆಸ್ಗೆ ಹೈಕಮಾಂಡ್ ಇರುವುದು ದೆಹಲಿಯಲ್ಲಿ. ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕೆಂದರೂ ಆ ಪಕ್ಷಗಳ ರಾಜ್ಯ ನಾಯಕರು ಅಲ್ಲಿಗೆ ಹೋಗಬೇಕು. ಆದರೆ, ಜೆಡಿಎಸ್ನಲ್ಲಿ ಆ ಸಂಸ್ಕೃತಿ ಇಲ್ಲ. ಎಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿ ರಾಜ್ಯದಲ್ಲಿಯೇ ಇರುತ್ತಾರೆ. ಅಭಿವೃದ್ಧಿಯ ಕನಸಸನ್ನು ಹೊತ್ತು ಮತಯಾಚಿಸುತ್ತಿದ್ದಾರೆ. ಅದು ನನಸಾಗಬೇಕಾದರೆ, ಒಮ್ಮೆ ಆಲೋಚಿಸಿ ಮತ ಚಲಾಯಿಸಿ ಎಂದು
ಕೋರಿದರು.
ಜೆಡಿಎಸ್ ಮುಖಂಡರಾದ ಬಿ. ಕಾಂತರಾಜ್, ತಿಮ್ಮಣ್ಣ, ಜೆ.ಎನ್.ಕೋಟೆ ಗುರುಸಿದ್ದಣ್ಣ, ಪ್ರತಾಪ್ ಜೋಗಿ, ಲಲಿತಾ ಕೃಷ್ಣಮೂರ್ತಿ, ಡಿ.ಗೋಪಾಲಸ್ವಾಮಿ ನಾಯಕ, ತೆಲಂಗಾಣದ ಜಿತೇಂದ್ರನಾಥ್, ಪ್ರೇಮನಾಥ್, ರಾಮು ಯಾದವ್, ಮಧುಸೂದನ್ ರೆಡ್ಡಿ ಅವರೂ ಇದ್ದರು.