© 2021 JANATA DAL (SECULAR). All rights reserved
(11 Oct 1902-08 Oct 1979)
ಜಯಪ್ರಕಾಶ್ ನಾರಾಯಣ ಅಪ್ಪಟ ಸಮಾಜವಾದಿ, ಗಾಂಧಿ ಹಾದಿಯಲ್ಲಿ ಮುನ್ನಡೆದ ಮಹಾ ನಿಷ್ಠಾವಂತ
ಭಾರತಕ್ಕೆ ಸ್ವಾತಂತ್ಯ್ರ ದೊರೆತ ನಂತರದ ಅಂದರೆ ಮಹಾತ್ಮಗಾಂಧೀಜಿ ಇಲ್ಲದ ಸಂದರ್ಭದಲ್ಲಿ ಅವರ ಸ್ಥಾನ -ಗೌರವವನ್ನು ಕಾಯ್ದುಕೊಂಡ ಧುರೀಣರ ಪೈಕಿ ಜಯಪ್ರಕಾಶ ನಾರಾಯಣ ಸಹ ಒಬ್ಬರು. ಇವರು ಹಸಿರು ಕ್ರಾಂತಿಯ ಹರಿಕಾರ, ಭೂದಾನ ತಂದ ಸುಧಾರಕ. ಸಮಾಜವಾದದ ಮೂಲಕ ದೇಶದಲ್ಲಿ ಸುಧಾರಣೆ ತರಲು ಪ್ರಯತ್ನಿಸಿದ ಪ್ರಮುಖರು. ಖ್ಯಾತಿಯಿಂದ ದೂರವೇ ಉಳಿದು ಅಪ್ಪಟ ದೇಶಪ್ರೇಮಿ ಎನಿಸಿದವರು ಜಯಪ್ರಕಾಶ ನಾರಾಯಣರು.
ಅನ್ಯಾಯದ ವಿರುದ್ಧ ಸತತವಾಗಿ ಹೋರಾಟ ನಡೆಸಿ, ಭ್ರಷ್ಟರನ್ನು ಕಂಡಾಗ ಕೆಂಡವಾದವರು. ರಾಜಕಾರಣಿಗಳ ಸರ್ವಾಧಿಕಾರಿ ಧೋರಣೆ, ಪ್ರಜಾಪ್ರಭುತ್ವದ ಮೂಲ ಸತ್ವವನ್ನು ಹಾಳು ಮಾಡುವವರ ವಿರುದ್ಧ ನಿಷ್ಠುರವಾಗಿ ಹೋರಾಟ ಮಾಡಿದ ದಿಟ್ಟ ನಾಯಕ, ಹಾಗಾಗಿಯೇ ಅವರನ್ನು ಭಾರತದ ಜನತೆ ಪ್ರೀತಿಯಿಂದ ಜೆ ಪಿ ಎಂದು ಕರೆದರು. ಸ್ವಾತಂತ್ರ ಚಳುವಳಿಯಲ್ಲಿ ಪಾತ್ರವಹಿಸಿದ ಇವರು ಮಹಾತ್ಮ ಗಾಂಧಿ ಮತ್ತು ಎಂ.ಎನ್ ರಾಯ್ ಅವರ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಗಾಂಧಿಯವರ ಹಾದಿಯಲ್ಲಿ ನಡೆದು ಇತಿಹಾಸವನ್ನೇ ಸೃಷ್ಟಿಸಿದ ಅಪರೂಪದ ನಾಯಕ.
ಮಧ್ಯಮ ವರ್ಗದಲ್ಲಿ ಹುಟ್ಟಿದ ಶ್ರೀಮಂತ ಚಿಂತನೆಯ ನಾಯಕ: ಜಯಪ್ರಕಾಶ ನಾರಾಯಣರು ಹುಟ್ಟಿದ್ದು 1902 ರ ಅಕ್ಟೋಬರ್ 11 ರಂದು ಬಿಹಾರ್ ಪ್ರಾಂತ್ಯದ (ಈಗಿನ ಬಿಹಾರ್ ರಾಜ್ಯ) ಸರನ್ ಜಿಲ್ಲೆಯ ಸಿತಾಬ್ ದಿಯಾರಾದಲ್ಲಿ. ರೆವೆನ್ಯೂ ಇಲಾಖೆಯ ಅಧಿಕಾರಿಯಾಗಿದ್ದ ಹರಸೂ ದಯಾಳ್ ಇವರ ತಂದೆ. ಧಾರ್ಮಿಕ ಪ್ರವೃತ್ತಿಯ ಸರಳ ಸ್ವಭಾವದ ಗೃಹಿಣಿ ಪೂಲ್‍ರಾಣಿ ಇವರ ತಾಯಿ. ಜಯಪ್ರಕಾಶರು ಆ ದಂಪತಿಗಳ ನಾಲ್ಕನೆಯ ಮಗು. ಜಯಪ್ರಕಾಶರ ತಂದೆಯ ತಂದೆ ದೇವಕಿನಂದನಲಾಲ್ ಪೋಲಿಸ್ ಅಧಿಕಾರಿ. ತಮ್ಮ ಬ್ರಿಟಿಷ್ ಮೇಲಧಿಕಾರಿಯನ್ನೇ ಹೊಡೆದ ಪ್ರಸಿದ್ದಿ ಅವರದು. ಜಯಪ್ರಕಾಶ್ ನಾರಾಯಣರದು ಬಿಹಾರದ ಮಧ್ಯಮ ವರ್ಗದ ಕಾಯಸ್ಥ ಕುಟುಂಬ.
ಹಳ್ಳಿಯಲ್ಲೇ ಬಾಲ್ಯವನ್ನು ಕಳೆದ ಜಯಪ್ರಕಾಶರು ಆರಂಭದ ವಿದ್ಯಾಭ್ಯಾಸವನ್ನು ಹಳ್ಳಿಯಲ್ಲೇ ಪಡೆದರು. ಅನಂತರ ಪಟ್ನಾದ ಕೊಲಿಜಿಯೇಟ್ ಶಾಲೆ ಸೇರಿದರು. ಮೆಟ್ರಿಕ್ ಪರೀಕ್ಷೆ ಮುಗಿಸಿದ ನಂತರ ಪಟ್ನಾ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ಇಂಟರ್ ತರಗತಿ ಸೇರಿದರು. ಆಗ ಜಯಪ್ರಕಾಶ್ ಅವರು ಅಸಹಕಾರ ಚಳುವಳಿಯಿಂದ ಪ್ರಭಾವಿತರಾಗಿ ಕಾಲೇಜನ್ನು ತೊರೆದು ಬಿಹಾರ್ ವಿದ್ಯಾಪೀಠವನ್ನು ಸೇರಿ ವಿದ್ಯಾಭ್ಯಾಸ ಮುಂದುವರಿಸಿ ಆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಆ ಬಳಿಕ ಅಮೇರಿಕಾಕ್ಕೆ ತೆರಳಿ ಎಂಟು ವರ್ಷಗಳವರೆಗೆ ಅಲ್ಲಿ ಇದ್ದು ವಿಜ್ಞಾನ ಸಮಾಜವಿಜ್ಞಾನಗಳನ್ನು ಅಧ್ಯಯನ ಮಾಡಿ ಒಹೈಯೋ ವಿಶ್ವವಿದ್ಯಾಲಯದಿಂದ ಎಂ. ಎ ಪದವಿ ಪಡೆದರು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಜಯಪ್ರಕಾಶರು ಕಷ್ಟ ಜೀವಿ. ವಿದ್ಯಾಭ್ಯಾಸದ ವೇಳೆಯೇ ಹೋಟೆಲುಗಳಲ್ಲಿ, ಹೊಲಗಳಲ್ಲಿ ದುಡಿದು ತಮ್ಮ ಶಿಕ್ಷಣ ವೆಚ್ಚವನ್ನು ನಿರ್ವಹಿಸಿಕೊಂಡರು.
ಈ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ ಅವರನ್ನು ಮಾರ್ಕ್ಸ್‍ವಾದ ಬಹುವಾಗಿ ಕಾಡಿತು. ಎಂ. ಎನ್ ರಾಯರ ವಿಚಾರಧಾರೆ ಇವರ ರಾಜಕೀಯ ಪ್ರಜ್ಞೆಯ ಮೇಲೆ ಪ್ರಭಾವ ಬೀರಿತು.
ಅದ್ಯಾಪಕನಾಗಬೇಕಿಂದ್ದವರು ಸ್ವಾತಂತ್ರ್ಯ ಹೋರಾಟಗಾರನಾದರು: ಅಮೆರಿಕದಿಂದ ಮರಳಿದ ಜಯಪ್ರಕಾಶರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಅಧ್ಯಾಪಕರಾಗಬೇಕೆಂದು ಯೋಚಿಸಿದ್ದರು. ಆದರೆ ನೆಹರೂರವರ ಪರಿಚಯ ಇವರ ಭವಿಷ್ಯದ ದಿಕ್ಕನ್ನೇ ಬದಲಿಸಿತು. ನೆಹರೂ ಅವರೊಂದಿಗೆ ಪರಿಚಯದಿಂದ ಕಾಂಗ್ರೆಸ್ಸಿನ ಕಾರ್ಮಿಕ ಶಾಖೆಯ ನೇತೃತ್ವ ವಹಿಸಲು ಒಪ್ಪಿಕೊಂಡರು. ಇದೇ ವೇಳೆ ಗಾಂಧೀಜಿವರ ಸ್ನೇಹ ಬೆಳೆಯಿತು. ಪರಿಣಾಮ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಅನೇಕ ಬಾರಿ ಸೆರೆಮನೆವಾಸ ಅನುಭವಿಸಿದರು. ಮುಂದೆ ಆಚಾರ್ಯ ನರೇಂದ್ರದೇವರ ಸಹಕಾರ ಪಡೆದು ಜಯಪ್ರಕಾಶ್ ನಾರಾಯಣರು ಅಖಿಲ ಭಾರತೀಯ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ತಮ್ಮ ಧೋರಣೆಯ ಸಮರ್ಥನೆಗೆಂದು 1936 ರಲ್ಲಿ ಸಮಾಜವಾದವೇ ಏಕೆ ? ಎಂಬ ಗ್ರಂಥವನ್ನು ಬರೆದರು.
ಗಾಂಧೀವಾದವೇ ಶ್ರೇಷ್ಠವಾದ ಎಂದು ನಂಬಿ ಮುನ್ನಡೆದರು: ಸ್ವಾತಂತ್ರ್ಯಾನಂತರ ಮತ್ತು ಗಾಂಧೀಜಿಯವರ ಮರಣದ ಅನಂತರ ಜಯಪ್ರಕಾಶರು ಗಾಂಧಿ ವಿಚಾರದತ್ತ ಒಲವು ತೋರಿದರು. ಹಳ್ಳಿ ನಗರಗಳ ನಡುವಿನ ಆರ್ಥಿಕ ಅಂತರ, ಜೀವಂತವಾಗಿ ಉಳಿದ ಅಸ್ಪ್ರಷ್ಯತೆ ಮುಂತಾದ ಸಾಮಾಜಿಕ ಅನ್ಯಾಯಗಳು ಇವರ ನಿದ್ದೆಗೆಡಿಸಿತು. ಬೃಹದಾಕಾರವಾಗ ಬೆಳೆದ ರಾಜಕೀಯ ಭೃಷ್ಟಾಚಾರ, ವಂಚನೆ ಇವು ಜಯಪ್ರಕಾಶರನ್ನು ಕೆಂಡವಾಗಿಸಿತು. ನಮ್ಮ ದೇಶದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ನಾಯಕರು ಗ್ರಾಮಗಳಿಗೆ ತೆರಳಿ ಕೆಲಸ ಮಾಡುವ ತುರ್ತು ಅಗತ್ಯವಿದೆ ಎಂದು ನಂಬಿದ ಜಯಪ್ರಕಾಶರು ವಿನೋಬಾಬಾವೆಯರೊಂದಿಗೆ ಸೇರಿ ಸೇರಿ ಸವರ್ವೋದಯ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಅದನ್ನು ರಾಷ್ಟ್ರವ್ಯಾಪಿ ಪ್ರಮಾಣದಲ್ಲಿ ಸಂಘಟಿಸಿದರು.
ಪದವಿ, ಖ್ಯಾತಿಯಿಂದ ಮಾರು ದೂರ ಉಳಿದ ವಿಭಿನ್ನ ನಾಯಕ: ಭಾರತದ ಸ್ವಾತಂತ್ರ್ಯಾಂದೋಲನದಲ್ಲಿ ಮಂಚೂಣಿಯ ನಾಯಕರಾಗಿ ಜನಪ್ರಿಯರಾಗಿದ್ದರೂ ಜಯಪ್ರಕಾಶ ನಾರಾಯಣ ಅವರು ಪ್ರಚಾರ, ಪ್ರಸಿದ್ದಿ ಹಾಗೂ ಉನ್ನತ ಅಧಿಕಾರ ಸ್ಥಾನಗಳನ್ನು ಅವರು ಎಂದೂ ಬಯಸಲಿಲ್ಲ. ಸ್ವಯಂ ಪ್ರೇರಣೆಯಿಂದ ಅವರು ಪದವಿಯ ಮೋಹ ತೊರೆದು ಗ್ರಾಮಮಟ್ಟದಲ್ಲಿ ಸಮಾಜಸೇವೆಗಾಗಿ ತಮ್ಮನ್ನು ಮುಡಿಪಾಗಿಟ್ಟುಕೊಂಡರು. ಸ್ವಾವಲಂಬಿ ಯೋಜನೆಗಳನ್ನು ರೂಪಿಸುತ್ತಾ, ಜಾತಿಮತಿಗಳ ಸಂಕೋಲೆಗಳ ವಿರುದ್ಧ ಧ್ವನಿಯೆತ್ತುತ್ತಾ, ಭೃಷ್ಟಾಚಾರಗಳನ್ನು ಬಯಲಿಗೆಳೆಯುತ್ತಾ, ದೇಶ ಸೇವೆಗೆ ತಮ್ಮನ್ನು ತಾವು ಮುಡಿಪಾಗಿಟ್ಟರು.
ಭೂದಾನ ಚಳುವಳಿಯ ಹರಿಕಾರ, ಸರ್ವೋದಯ ಚಿಂತನೆಯ ನಾಯಕ: ಜಯಪ್ರಕ ಜಯಪ್ರಕಾಶ್ ನಾರಾಯಣ್ ಅವರು ಅಪ್ಪಟ ಗಾಂಧಿವಾಗಿ. ಅವರಿಗೆ ಹಿಂಸಾತ್ಮಕ ಕ್ರಾಂತಿಯಲ್ಲಿ ನಂಬಿಕೆಯಿರಲಿಲ್ಲ. ಜೆ. ಪಿ.ಯವರ ಅಹಿಂಸಾತ್ಮಕವಾದವನ್ನು ಅತ್ಯಂತ ಪ್ರಾಮಾಣಿಕವಾಗಿ ಪಾಲಿಸಿ ಜಾರಿಗೆ ತಂದವರು. ಅದಕ್ಕೆ ಸಾಕ್ಷಿಯೇ ಭೂದಾನ ಚಳುವಳಿ. 1967 ರಲ್ಲಿ ಬಿಹಾರದಲ್ಲಿ ಬರ ಬಂದಾಗ ಜೆ. ಪಿ. ಯವರ ಒಂದು ಬೇಡಿಕೆ ಅನೇಕ ದೇಶಗಳ ವಿವೇಕವನ್ನು ಜಾಗೃತಗೊಳಿಸಿ ನಮ್ಮ ದೇಶಕ್ಕೆ ನೆರವು ಹರಿದು ಬರುವಂತೆ ಮಾಡಿತು. ಹತ್ತು ವರ್ಷಗಳ ಕಾಲ ಕೂಟ ಯುದ್ದದಲ್ಲಿ ತೊಡಗಿದ್ದ ನಾಗಾಬಂಡಾಯಗಾರರನ್ನು ನಿರ್ಭಯವಾಗಿ ಸಂದರ್ಶಿಸಿದ ಜಯಪ್ರಕಾಶರು ತಮ್ಮ ಸೌಜನ್ಯಪೂರ್ಣ ವಿವರಣೆಯಿಂದ ನಾಗಾಗಳ ಮನವೊಲಿಸಿ ಅವರು ಯುದ್ದ ನಿಲ್ಲಿಸಿ ಮಾತುಕತೆಗೆ ಒಡಂಬಡುವಂತೆ ಮಾಡಿದರು. ಭಾರತ-ಪಾಕಿಸ್ತಾನಗಳ ನಡುವಣ ಯುದ್ಧದ ಸಂದರ್ಭದಲ್ಲಿ ಪೂರ್ವ ಪಾಕಿಸ್ತಾನದಿಂದ ಅಂದ್ರೆ ಈಗಿನ ಬಾಂಗ್ಲಾದೇಶದಿಂದ ಬಂದ ನಿರ್ವಾಸಿತರಿಗೆ ಜಯಪ್ರಕಾಶರ ಸರ್ವೋದಯ ಕಾರ್ಯಕರ್ತರ ಸೇವೆ ಸಿದ್ಧವಾಗಿತ್ತು.
ಸಂವಿಧಾನ ವಿರೋಧಿಗಳ ಪಕ್ಕಾ ವಿರೋಧಿ ಜೆ.ಪಿ:
ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ದ ಜೆ.ಪಿ ಹೋರಾಟ ಆರಂಭಿಸಿದರು. ರಾಜತಂತ್ರ ಜನತಂತ್ರವನ್ನು ಕಡೆಗಣಿಸಿದುದನ್ನು ಇವರು ಪ್ರಬಲವಾಗಿ ವಿರೋಧಿಸಿದರು. ಪ್ರಜಾಪ್ರಭುತ್ವದ ಪ್ರಮುಖ ಅಂಗಗಳಾದ ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗ ಸಂವಿಧಾನಬದ್ದವಾಗಿ ಕೆಲಸಮಾಡುವಂಥ ವಾತಾವರಣ ದೇಶದಲ್ಲಿ ಸೃಷ್ಟಿಯಾಗಬೇಕೆಂದು ಇವರು ಬಯಸಿದರು. ಭೃಷ್ಟಾಚಾರ, ಸರ್ವಾಧಿಕಾರ ಇವನ್ನು ಎದುರಿಸಲು ಮಹಾಚಳುವಳಿಯೊಂದು ದೇಶದಲ್ಲಿ ಆರಂಭವಾಯಿತು. ದೇಶದ ಈ ಪರ್ವಕಾಲದಲ್ಲಿ ಜಯಪ್ರಕಾಶರು ಅದರ ನಿರ್ದೇಶನದ ಹೊಣೆ ವಹಿಸಿಕೊಂಡರು. ಆಗಿನ ಧಾನಿಯಾಗಿದ್ದ ಇಂದಿರಾಗಾಂಧಿಯವರ ಪ್ರತಿಸ್ಪರ್ಧಿ ಅಲಹಾಬಾದ್ ಉಚ್ಚನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮೆಯಲ್ಲಿ ಇಂದಿರಾಗಾಂಧಿಯವರ ವಿರುದ್ದ ತೀರ್ಪು ಹೊರಬಿದ್ದಾಗ ಚಳುವಳಿ ತೀವ್ರವಾಯಿತು. ಇಂದಿರಾಗಾಂಧಿಯವರು ರಾಜೀನಾಮೆ ಕೊಡಬೇಕೆಂಬ ಕೂಗು ಎದ್ದಿತು. ಇಂದಿರಾಗಾಂಧಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲರ್ಜಿ ಸಲ್ಲಿಸಿದರಲ್ಲದೆ ದೇಶದಲ್ಲಿ ತುರ್ತುಪರಿಸ್ಥಿಯನ್ನು ಘೋಷಿಸಿದರು. ಜಯಪ್ರಕಾಶರ ನಾರಾಯಣ್ ಮೊದಲುಗೊಂಡು ಅನೇಕ ನಾಯಕರು ದಸ್ತಗಿರಿಯಾದರು (1975). ಇವರನ್ನು ಸ್ಥಾನಬದ್ದತೆಯಲ್ಲಿಡಲಾಯಿತು.1976ರ ಕೊನೆಯಲ್ಲಿ ಜಯಪ್ರಕಾಶರ ಬಿಡುಗಡೆಯಾಯಿತು. ಆದರೆ ಇವರ ಆರೋಗ್ಯ ಹದಗೆಟ್ಟಿತು. ಜನತಂತ್ರಬಾಹಿರವಾದ ಕೃತ್ಯವೆಸಗಿ ಸರ್ಕಾರ ಅನ್ಯಾಯ ಮಾಡುತ್ತಿದೆಯೆಂಬ ಜಯಪ್ರಕಾಶರ ನಿಲುವಿನಲ್ಲಿ ಬದಲಾವಣೆಯಾಗಿರಲಿಲ್ಲ. ಮುಂದಿನ ಹಲವು ವಾರಗಳ ಕಾಲ ಇವರು ಜಸ್‍ಲೋಕ್ ಆಸ್ಪತ್ರೆಯಲ್ಲಿ ಸಾವಿನ ಎದುರು ಹೋರಾಟ ನಡೆಸಿದರು. 1977ರ ಜನವರಿಯಲ್ಲಿ ಇಂದಿರಾಗಾಂಧಿಯವರು ತುರ್ತುಪರಿಸ್ಥಿಯನ್ನು ಸಡಿಲಿಸಿ ಲೋಕಸಭೆಗೆ ಚುನಾವಣೆ ಘೋಷಿಸಿದರು. ಹಲವು ವಿರೋಧ ಪಕ್ಷಗಳು ಒಂದಾಗಿ ಜನತಾಪಕ್ಷ ಸ್ಥಾಪಿತವಾಯಿತು. ಅದು ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿ ಸರ್ಕಾರ ರಚಿಸಿತು.
ನೂರಾರು ಕನಸು ಹೊತ್ತೇ ಇಹಲೋಕ ತ್ಯಜಿಸಿದರು ಜೆ.ಪಿ: ತುರ್ತು ಕರಾಳತೆಯಿಂದ ಹೊರ ಬಂದು ದೇಶದಲ್ಲಿ ಮತ್ತೆ ಪ್ರಜಾಸತ್ತಾತ್ಮಕತೆ ಸ್ಥಾಪಿತವಾಯಿತೆಂದು ನಿಟ್ಟುಸಿರು ಬಿಟ್ಟರು ಜಯಪ್ರಕಾಶರು. ಆದ್ರೆ ಅವರಿಗೆ ಅಷ್ಟಕ್ಕೆ ತೃಪ್ತಿಯಿರಲಿಲ್ಲ. ದೇಶದಲ್ಲಿ ಸಂಪೂರ್ಣ ಕ್ರಾಂತಿಯಾಗಬೇಕು, ಭೃಷ್ಟಾಚಾರ ತೊಲಗಬೇಕು, ನಿಜವಾದ ಜನಶಕ್ತಿಯ ಆಳ್ವಿಕೆ ಆರಂಭವಾಗಬೇಕು ಎಂಬ ಅದ್ಭುತ ಕನಸು ಕಂಡಿದ್ದರು ಆಡಳಿತ ವಿಕೇಂದ್ರಿಕರಣವಾಗಬೇಕು, ಹೊಸ ಶಿಕ್ಷಣ ನೀತಿ ರೂಪುಗೊಳ್ಳಬೇಕು ಎಂಬುದು ಜೆ.ಪಿ ಬಯಕೆಯಾಗಿತ್ತು. ಅಮೆರಿಕಾದ ಸಿಯಾಟ್‍ನಲ್ಲಿ ಶಸ್ತ್ರಚಿಕಿತ್ಸೆ ಹೊಂದಿ ಭಾರತಕ್ಕೆ ಮರಳಿದ ಮೇಲೆ ಜಯಪ್ರಕಾಶರು ಈ ಆದರ್ಶ ಸಮಾಜದ ಸ್ಥಾಪನೆಗಾಗಿ ತಮ್ಮ ಕೆಲಸ ಮುಂದುವರಿಸಿದರು. ಆದ್ರೆ ವಿಧಿಯಾಟವೇ ಬೇರೆ ಇತ್ತು. ದೇಶ ಕಲ್ಯಾಣದ ನೂರಾರು ಕನಸು ಹೊತ್ತೇ 1979ರ ಅಕ್ಟೋಬರ್ 8 ರಂದು ಜೆ.ಪಿ ನಿಧನ ಹೊಂದಿದರು.
ಭಾರತರತ್ನದ ಗೌರವ ಹೆಚ್ಚಿಸಿದ ಜೆಪಿ: ಜಯಪ್ರಕಾಶ್ ನಾರಾಯಣ ಅವರ ನಿಸ್ವಾರ್ಥ ಸೇವೆ, ಅಪ್ಪಟ ದೇಶ ಪ್ರೇಮ, ನಿಷ್ಕಲ್ಮಷ ನಿಲುವಿಗೆ 1999ರಲ್ಲಿ ಭಾರತ ಸರ್ಕಾರ ಜಯಪ್ರಕಾಶ್ ನಾರಾಯಣ ಅವರಿಗೆ ಮರಣೊತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. 2002ರಲ್ಲಿ ದೇಶದ್ಯಾಂತ ಜಯಪ್ರಕಾಶ್ ನಾರಾಯಣ್ ಅವರ ಶತಮಾನೋತ್ಸವವನ್ನು ಆಚರಿಸಲಾಯಿತು. 1965ರಲ್ಲಿ ಇವರಿಗೆ ರೋಮನ್ ಮ್ಯಾಗ್ಸೇಸೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.