© 2021 JANATA DAL (SECULAR). All rights reserved
ಎಲ್ಲರ ಪ್ರೀತಿಯ ಮೇಷ್ಟ್ರು ವೈಎಸ್‌ವಿ ದತ್ತಾ: ಸರಳತೆ ಮೂಲಕ ಜನಮನಗೆದ್ದವರು
ಎಲ್ಲರ ಪ್ರೀತಿಯ ಮೇಷ್ಟ್ರು ಇವರು... ಜನರ ನೆಚ್ಚಿನ ನಾಯಕರು ಇವರು... ಸರಳತೆಯ ಮೂಲಕವೇ ಮಾದರಿಯಾದವರು ಇವರು... ಅಪ್ರತಿಮ ಸಂಸದೀಯ ಪಟು ಇವರು... ಅವರೇ ಜನಾನುರಾಗಿ ನಾಯಕ ವೈ ಎಸ್ ವಿ ದತ್ತಾ. ಹಣ ಬಲ, ತೋಳ್ಬಲದ ರಾಜಕಾರಣದ ನಡುವೆ ಜನ ಬಲ, ಸರಳತೆಯ ಮೂಲಕ ಕರ್ನಾಟಕ ರಾಜಕೀಯದಲ್ಲಿ ಹೆಸರು ಮಾಡಿದ ನಾಯಕರಲ್ಲಿ ವೈ ಎಸ್ ವಿ ದತ್ತಾ ಅವರು ಕೂಡಾ ಒಬ್ಬರು. ರಾಜಕಾರಣಿಯಾಗಿ ಮಾತ್ರವಲ್ಲ ಮೇಷ್ಟ್ರಾಗಿಯೂ ದತ್ತಾ ಅವರ ಸೇವೆ ಅನನ್ಯ.
1954ರ ಜೂನ್ 24ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿಯಲ್ಲಿ ಜನನ. ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತಾ ಎಂಬುದು ದತ್ತಾ ಅವರ ಪೂರ್ಣ ಹೆಸರು. 1973ರಲ್ಲಿ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್‌ಸಿ ವ್ಯಾಸಂಗ ಪೂರ್ಣಗೊಳಿಸಿದ ವೈ ಎಸ್ ವಿ ದತ್ತಾ ಅವರು ಮೇಷ್ಟಾಗಿಯೂ ಸೇವೆ ಸಲ್ಲಿಸಿದ್ದಾರೆ.
ವೈಎಸ್‌ವಿ ದತ್ತಾ ಅವರು ಸಮಾಜವಾದದ ಮೇಲೆ ಬಲವಾದ ನಂಬಿಕೆ ಇಟ್ಟವರು. ಹಾಗಾಗಿಯೇ ಜನತಾದಳದ ಸಿದ್ಧಾಂತಕ್ಕೆ ಮಾರು ಹೋಗಿ ಜನತಾ ಪರಿವಾರದ ಸದಸ್ಯರಾದರು. ದೇವೇಗೌಡ ಪಟ್ಟ ಶಿಷ್ಯನಾಗಿ ರಾಜಕೀಯದ ಒಂದೊಂದೇ ಪಟ್ಟುಗಳನ್ನು ಕಲಿತರು. ಅಲ್ಲದೆ ಕಾಲಕಾಲಕ್ಕೆ ದೇವೇಗೌಡರಿಗೆ ಸಲಹೆ ಸೂಚನೆಗಳನ್ನು ನೀಡಿದವರು. ಇವರ ಪಕ್ಷ ನಿಷ್ಠೆಯನ್ನು ಪರಿಗಣಿಸಿ ಇವರನ್ನು ಜಾತ್ಯಾತೀತ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಅಲ್ಲದೆ ಇವರು ಜೆಡಿಎಸ್‌ನ ವಕ್ತಾರರಾಗಿಯೂ ಹಲವಾರು ವರ್ಷ ಕಾರ್ಯನಿರ್ವಹಿಸಿದರು. 2001 ರಿಂದ 2007 ರವರೆಗೆ ವೈಎಸ್‌ವಿ ದತ್ತಾ ಅವರು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.
2006ರಲ್ಲಿ ವಿಧಾನ ಪರಿಷತ್ ಪ್ರವೇಶಿಸಿದ ವೈಎಸ್‌ವಿ ದತ್ತಾ ಅವರು ತಮ್ಮ ವಾಕ್‌ಚಾತುರ್ಯದಿಂದಲೇ ಗಮನಸೆಳೆದಿದ್ದರು. ವಿಷಯ ಜ್ಞಾನ, ತರ್ಕಬದ್ಧ ಚರ್ಚೆ ಹಾಗೂ ವಿಷಯ ಮಂಡನೆಯ ಶೈಲಿ ವಿಭಿನ್ನವಾಗಿತ್ತು. ದತ್ತಾ ಮೇಷ್ಟ್ರು ಅಂತಲೇ ಪರಿಷತ್‌ನಲ್ಲಿ ಕರೆಸಿಕೊಳ್ಳುತ್ತಿದ್ದ ದತ್ತಾ ಅವರು ಮಾತಿಗಿಳಿದರೇ ಹೌದು ಹೌದು ಅಂತ ತಲೆ ಬಾಗಲೇ ಬೇಕು. ಇವರು 2006 ರಿಂದ 2012ರ ವರೆಗೆ ವಿಧಾನಪರಿಷತ್ ಸದಸ್ಯರಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದರು. 2013ರಲ್ಲಿ ಚುನಾವಣಾ ರಾಜಕೀಯ ಧುಮಿಕಿದ ವೈಎಸ್‌ವಿ ದತ್ತಾ ಅವರು ಕಡೂರು ವಿಧಾನಸಭಾ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದರು. ಶಾಸಕರಾಗಿ ಕ್ಷೇತ್ರದ ಜನರ ನೋವಿಗೆ ಸ್ಪಂದಿಸಿ ಅವರ ಕಲ್ಯಾಣಕ್ಕೆ ಅವಿರತವಾಗಿ ಶ್ರಮಿಸಿದರು. ಆದ್ರೆ 2018ರಲ್ಲಿ ಇವರು ವಿಧಾನಸಭಾ ಚುನಾವಣೆಯಲ್ಲಿ ಸೋತರು.
ಕಳೆದ ವರ್ಷ ಕೊರೊನಾ ಅಬ್ಬರವಿಡುತ್ತಿದ್ದ ಸಂದರ್ಭದಲ್ಲೂ ವೈಎಸ್‌ವಿ ದತ್ತಾ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ಜನಮನ ಗೆದ್ದಿದ್ದರು. ಫೇಸ್‌ಬುಕ್ ಲೈವ್ ಮೂಲಕ ದತ್ತಾ ಅವರು ಮನೆಯಲ್ಲಿರುವ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ನೆರವಾಗುವ ಸಲುವಾಗಿ ಗಣಿತ ಪಾಠ ಮಾಡಿದ್ದರು. ಜತೆಗೆ, ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರೈತರ ಕಷ್ಟಗಳಿಗೂ ಇವರು ಸ್ಪಂದಿಸಿದ್ದರು. ರಾಜಕೀಯಕ್ಕೆ ಪದಾರ್ಪಣೆ ಮಾಡುವ ಮುನ್ನ ಎಸ್‌ಎಸ್‌ಎಲ್‌ಸಿ, ಪಿಯುಸಿ, ಬಿಎಸ್‌ಸಿ ಸೇರಿದಂತೆ ಅನೇಕ ವಿದ್ಯಾರ್ಥಿಗಳಿಗೆ ಗಣಿತ ಪಾಠ ಮಾಡಿದ್ದ ದತ್ತಾ ಅವರು ಬಳಿಕ ಜನಸೇವೆಯ ಮಹೋನ್ನತ ಕನಸು ಹೊತ್ತು ರಾಜಕೀಯಕ್ಕೆ ಧುಮುಕ್ಕಿದ್ದರು.
ಹೆಗಲಿಗೊಂದು ಟವೆಲ್ ಏರಿಸಿಕೊಂಡು ಜನರ ನಡುವೆ ಓಡಾಡುವ ಈ ನಾಯಕ ಸರಳತೆಯ ಮೂಲಕ ಗಮನ ಸೆಳೆದವರು. ವಿಧಾನಸಭಾ ಕಲಾಪಗಳಿಗೆ ಹಾಜರಾಗಲು ಆಟೋ ಏರಿಕೊಂಡು ದತ್ತಾ ಅವರು ಬಂದಿರುವುದನ್ನು ನಾಡಿನ ಜನ ನೋಡಿದ್ದಾರೆ. ಸಾಕಷ್ಟು ಜನಪರ, ರೈತ ಪರ, ಕನ್ನಡಪರ, ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡು, ಜನರ ಸಮಸ್ಯೆಗೆ ಧ್ವನಿಯಾಗಿ ಇವರು ಮಾಡಿರುವ ಕೆಲಸಗಳು ಹಲವಾರು. ವಿಧಾನ ಪರಿಷತ್ ಸದಸ್ಯರಾಗಿ, ಕಡೂರು ಕ್ಷೇತ್ರದ ಶಾಸಕರಾಗಿಯೂ ವೈ ಎಸ್ ವಿ ದತ್ತಾ ಸೇವೆ ಅಪೂರ್ವ.
ವೈ ಎಸ್ ವಿ ದತ್ತಾ ಅವರು ಜೆಡಿಎಸ್‌ನ ಕಟ್ಟಾಳು. ಹೆಚ್.ಡಿ.ದೇವೇಗೌಡರ ಕುಟುಂಬದ ನಂಬುಗೆಯ ವ್ಯಕ್ತಿ ಇವರೆಂದರೂ ತಪ್ಪಲ್ಲ. ಜೆಡಿಎಸ್ ಪಕ್ಷವನ್ನು ಕಟ್ಟುವಲ್ಲಿ ದತ್ತಾ ಅವರ ಪಾತ್ರವೂ ಸಾಕಷ್ಟಿದೆ. ಹಲವಾರು ಮಹತ್ವದ ಸಂದರ್ಭದಲ್ಲಿ ಪಕ್ಷಕ್ಕೆ ಬಲವಾಗಿ ನಿಂತವರು ದತ್ತಾ. ಜಾತ್ಯತೀತ ಜನತಾದಳದ ಸೇನಾನಿಯಾಗಿ ಪಕ್ಷ ನಿಷ್ಠೆಯ ಜತೆಗೆ ಸಮಾಜ ಸೇವೆಯ ಮೂಲಕವೂ ಹೆಸರು ಮಾಡಿದ ದತ್ತಾ ಅವರು ತಮ್ಮ ಜಾತ್ಯತೀತ ನಿಲುವಿನಿಂದಲೂ ಎಲ್ಲರ ಗಮನ ಸೆಳೆದವರು. ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕನಾಗಿ, ಜಾತ್ಯತೀತ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ, ಪಕ್ಷದ ವಕ್ತಾರರಾಗಿಯೂ ಸೇವೆ ಸಲ್ಲಿಸುವ ಮೂಲಕ ಪಕ್ಷದಲ್ಲಿ ಮಹತ್ವದ ಜವಾಬ್ದಾರಿಯನ್ನು ಇವರು ನಿಭಾಯಿಸಿದ್ದಾರೆ.